
ಜಯನಗರ ವಿಧಾನಸಭೆ ಚುನಾವಣೆ: ಮರು ಮತ ಎಣಿಕೆ ವಿಶ್ವಾಸ-ಸೌಮ್ಯರೆಡ್ಡಿ

Jayanagar Assembly Election: Soumya Reddy confident about recount

ಬೆಂಗಳೂರು : ಜಯನಗರ ವಿಧಾನಸಭೆ ಚುನಾವಣೆಯಲ್ಲಿನ ಷಡ್ಯಂತ್ರದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ತಡೆಕೋರಿ ಪ್ರತಿಸ್ಪರ್ಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ಮರು ಎಣಿಕೆ ನಡೆಯುವ ವಿಶ್ವಾಸವಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹೇಳಿದರು.
ಅತ್ತಿಬೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನಪ್ರತಿನಿಧಿಗಳ ಕಾಲಾವಕಾಶ ಐದು ವರ್ಷವಿರುತ್ತದೆ. ಈಗಾಗಲೇ ಮೂರು ವರ್ಷ ಮುಗಿಯುತ್ತಲಿದೆ. ಹಾಗಾಗಿ ನ್ಯಾಯಾಲಯಗಳು ಒಂದು ವರುಷದೊಳಗೆ ಚುನಾವಣಾ ಅರ್ಜಿಗಳನ್ನು ವಿಲೇವಾರಿ ಮಾಡುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಚುನಾವಣೆ ತಕರಾರು ಅರ್ಜಿಗಳ ವಿಚಾರಣೆಗೆ ನ್ಯಾಯಾಲಯಗಳು ವೇಗ ನೀಡಬೇಕು. ಚುನಾವಣೆ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡಸಿ ತೀರ್ಪು ನೀಡಬೇಕು ಎಂದರು.
‘2023ರಲ್ಲಿ ಜಯನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂನಲ್ಲಿ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದ ನನಗೆ ಹೆಚ್ಚು ಮತಗಳು ಬಂದಿದ್ದರು. ಅಂಚೆ ಮತ ಎಣಿಕೆಯಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ಅನುಮಾನದಿಂದ ದಾವೆ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಅಂಚೆ ಮತಗಳನ್ನು ಎಣಿಸಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ. ನ್ಯಾಯದ ಮುಂದೆ ಸೋಲುವ ಭಯದಿಂದ ನಮ್ಮ ಪ್ರತಿಸ್ಪರ್ಧಿಗಳು ವಿಚಾರಣೆಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದೆ. ಸತ್ಯ ಎಂಬುದು ಎಂದಾದರೂ ಹೊರ ಬರಲೇಬೇಕು ಹಾಗಾಗಿ ಸತ್ಯ, ನ್ಯಾಯದ ಮೇಲೆ ನಂಬಿಕೆಯಿಟ್ಟು ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇನೆ’ ಎಂದರು.
ಮಹಿಳೆಯರೊಬ್ಬರು ಶಾಸಕರಾಗುತ್ತಾರೆ ಎಂಬ ಕಾರಣದಿಂದ ಷಡ್ಯಂತ್ರ ನಡೆಸಿ, ಗೋಲ್ಮಾಲ್ ನಡೆಸಿ ಅಂಚೆ ಮತಎಣಿಕೆಯಲ್ಲಿ ಕಡಿಮೆ ಮತ ಬರುವಂತೆ ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನಿಂದಾಗಿ ಮರು ಎಣಿಕೆ ನಡೆಯುವ ವಿಶ್ವಾಸವಿದೆ. ಬಿಜೆಪಿ ಪಕ್ಷದ ಜನರ ಅಭಿವೃದ್ಧಿಯ ಬದಲಿಗೆ ಅಧಿಕಾರ ಮತ್ತು ದುಡ್ಡಿಗಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಏಕಾಏಕಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ, ಶಾಸಕರ ಖರೀದಿ ಸೇರಿದಂತೆ ಕುತಂತ್ರದಿಂದ ಹಿಂಬಾಗಿಲಲ್ಲಿ ಸರ್ಕಾರದ ರಚನೆ ಮಾಡಲು ಪ್ರಯತ್ನಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.

