
ಕ್ರೀಡೆಯಿಂದ ನಮ್ಮಲ್ಲಿ ಉತ್ಸಾಹ ಹಾಗೂ ಚೈತನ್ಯ ಹೆಚ್ಚಾಗಲಿದೆ- ಸಂಸದ ಕೆ. ರಾಜಶೇಖರ ಹಿಟ್ನಾಳ
Sports will increase our enthusiasm and vitality – MP K. Rajashekar Hitnal

ಕೊಪ್ಪಳ ಜನವರಿ 18 (ಕರ್ನಾಟಕ ವಾರ್ತೆ): ಕ್ರೀಡೆಗಳಿಂದ ನಮ್ಮಲ್ಲಿ ಉತ್ಸಾಹ ಹಾಗೂ ಚೈತನ್ಯ ಹೆಚ್ಚಾಗುವುದರ ಜೊತೆಗೆ ಎಲ್ಲರೂ ಒಂದು ಕಡೆ ಸೇರಲು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಇಂದು ತಾವೆಲ್ಲರೂ ಇಲ್ಲಿ ಸೇರಿದ್ದಿರಾ ಎಂದು ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕೊಪ್ಪಳ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು, ಜಿಲ್ಲಾ ಶಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಕೊಪ್ಪಳ ಜಿಲ್ಲೆಯ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಗುಂಡು ಎಸೆಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಎಲ್ಲರೂ ಮಕ್ಕಳಿಗೆ ಕ್ರೀಡೆಗಳನ್ನು ಏರ್ಪಡಿಸುತ್ತಿದ್ದವರು ತಾವುಗಳು ಇಂದು ಕ್ರೀಡಾಪಟುಗಳಾಗಿ ಮಕ್ಕಳಂತೆ ಅತಿ ಉತ್ಸಾಹದಿಂದ ಬಂದಿರುವುದು ತುಂಬಾ ಸಂತೊಷ ಅನಿಸುತ್ತಿದೆ. ಸರಕಾರಿ ನೌಕರರು ದಿನಾಲು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಶೇ. 50 ಪ್ರತಿಶತ ಸಿಬ್ಬಂದಿಗಳಿದ್ದರು ಕಛೇರಿಯ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವ ತಾವುಗಳು ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಎಲ್ಲರೂ ಟೀಂ ಆಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಸ್ನೇಹ, ಪ್ರೀತಿ ಹಾಗೂ ಆತ್ಮೀಯತೆ ನೌಕರರಲ್ಲಿ ಬೆಳೆಯುತ್ತದೆ. ತಮ್ಮ ಕ್ರೀಡಾಕೂಟ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಕ್ರೀಡೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವುದಕ್ಕಿಂತ ಇದರಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಸರಕಾರಿ ನೌಕರರು ಇತ್ತಿಚೆಗೆ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕ್ರೀಡೆಯಂತಹ ಇತರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗ್ರಾಮೀಣ ಭಾಗದ ಕ್ರೀಡೆ ಕಬ್ಬಡಿಯಿಂದ ನಮಗೆ ಮತ್ತಷ್ಟು ಬಲ ತರಲಿದೆ. ಬಿಸಿಲು ನಾಡಿನ ಜನ ನಾವು ಬಹಳ ಗಟ್ಟಿ. ಮನೋಬಲದಿಂದ ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚಾಗಲಿದೆ. ಪುಟ್ಬಾಲ್, ಹಾಕಿ, ವಾಲಿಬಾಲನಂತಹ ಕ್ರೀಡೆಗಳಿಗೆ ನಮ್ಮಲ್ಲಿ ಇನ್ನೂ ಸುಸಜ್ಜಿತ ಟ್ರ್ಯಾಕಗಳು ಆಗಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕೊಪ್ಪಳದ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್. ಜುಮ್ಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ಕ್ರೀಡಾಕೂಟ ಪ್ರತಿವರ್ಷದಂತೆ ಈ ವರ್ಷ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಸರಕಾರಿ ನೌಕರರಾದ ನಾವುಗಳು ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತೆವೆ. ಜಿಲ್ಲೆಯ ಶಿಕ್ಷಕರು ಬೋಧನೆಯ ಜೊತೆಗೆ ಇತರೆ ಅನೇಕ ಕೆಲಸಗಳನ್ನು ಮಾಡುತ್ತಾರೆ. ನಾವೆಲ್ಲರೂ ಒತ್ತಡದಿಂದ ಹೊರ ಬರಲು ಎರಡು ದಿನಗಳ ಕಾಲ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ನಾನು ಅಧ್ಯಕ್ಷನಾದ ಮೇಲೆ ನಡೆಯುತ್ತಿರುವ ಇದು 13ನೇ ಕ್ರೀಡಾಕೂಟ. ರಾಜ್ಯ ಮಟ್ಟದ ಕ್ರೀಡಾಕೂಟ ನಮ್ಮ ಜಿಲ್ಲೆಯಲ್ಲಿ ನಡೆಸಲು ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಆದರೂ 2029 ರಲ್ಲಿ ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟದ ಆಯೋಜನೆಗೆ ನಾವೆಲ್ಲರೂ ಸಂಕಲ್ಪ ಮಾಡಿದ್ದೆವೆ. ನಮ್ಮ ಜಿಲ್ಲೆಯಿಂದ ಕಬ್ಬಡ್ಡಿ, ಕುಸ್ತಿ, ಶೆಟಲ್ ಬ್ಯಾಟ್ಮಿಟನ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಹಲವಾರು ಕ್ರೀಡಾಪಟುಗಳಿದ್ದಾರೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಕ್ರೀಡೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳ ಯಶಸ್ವಿಯಾಗಿ ನಡೆಯಲು ತಮ್ಮ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ, ಟೇಬಲ್ ಟೆನ್ನಿಸ್, ಕೇರಂ, ಚೆಸ್, ಕ್ರೀಕೆಟ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಇತರೆ ಹಲವಾರು ಕ್ರೀಡೆಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ. ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರಾದ ವಿಠ್ಠಲ ಜಾಬಗೌಡರ್. ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯರಾದ ಮೆಹಮೂದ್ ಆಸೀಫ್ ಅಲಿ, ಗೌರವ ಅಧ್ಯಕ್ಷರಾದ ಸಿದ್ದಪ್ಪ ಮೇಳಿ, ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ, ರಾಜ್ಯ ಸಂಘಟನಾ ಪದಾಧಿಕಾರಿಗಳಾದ ಮಹೇಶ ಸಬರದ, ಮಂಜುನಾಥ ಆರೆಂಟನೂರ, ಶ್ರೀ ನಿವಾಸ ನಾಯಕ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನೌಕರರ ಸಂಘದ ಇತರೆ ಪದಾಧಿಕಾರಿಗಳು ಮತ್ತು ಸರಕಾರಿ ನೌಕರರು ಉಪಸ್ಥಿತರಿದ್ದರು.





