
ಎನ್ಜಿ ಪಬ್ಲಿಕ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬ

Sankranti festival at NG Public School
ತುಮಕೂರು: ಜ.16: ತಾಲೂಕಿನ ಗೂಳೂರು ಹೋಬಳಿಯ ಕಳ್ಳಿಪಾಳ್ಯದಲ್ಲಿರುವ ಎನ್ಜಿ ಪಬ್ಲಿಕ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಮಹತ್ವ ತಿಳಿಸುವುದರ ಜತೆಗೆ ರೈತನ ಸುಖ, ದುಃಖ, ಅನ್ನದ ಮಹತ್ವ, ಕೃಷಿಯ ಪ್ರಾಮುಖ್ಯತೆ ತಿಳಿಸುವುದು ಕಾರ್ಯ ದರ್ಶಿಗಳಾದ ಶ್ರೀಮತಿ ವೈ.ಕೆ. ವತ್ಸಲ ಅವರ ಉದ್ದೇಶವಾಗಿತ್ತು . ಆದ್ದರಿಂದ ನಮ್ಮ ಶಾಲೆಯಲ್ಲಿ ಅದ್ದೂರಿಯಾಗಿ ಸಂಕ್ರಾಂತಿ ಆಚರಿಸಲಾಗಿದೆಂದು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಪ್ರಭಾಕರ್ ಹೇಳಿದರು.
ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾದ ಸಂಕ್ರಾಂತಿ ರೈತರ ಹಬ್ಬವಾಗಿದ್ದು, ಸುಗ್ಗಿ ಹಬ್ಬವೆಂದೇ ಪ್ರಸಿದ್ಧವಾಗಿದೆ. ರೈತರು ತಾವು ಬೆಳೆದ ಧಾನ್ಯಗಳಿಗೆ ಪೂಜೆ ಸಲ್ಲಿಸಿ ಮನೆ ತುಂಬಿಸಿಕೊಂಡು ಸಂತಸ ವ್ಯಕ್ತಪಡಿಸುವ ಹಬ್ಬವೇ ಸಂಕ್ರಾಂತಿ. ಈ ಸಂದರ್ಭದಲ್ಲಿ ಜಾನುವಾರುಗಳಿಗೆ, ವಿಶೇಷವಾಗಿ ಬಸವ ಎತ್ತುಗಳಿಗೆ ಪೂಜೆ ಸಲ್ಲಿಸುವ ಪದ್ಧತಿಯೂ ಇದೆ. ಮನೆ ಮುಂದೆ ರಂಗೋಲಿ ಬಿಡಿಸಿ ಮನೆಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಸಂಪ್ರದಾಯದ ಆಟಗಳು, ಪೊಂಗಲ್ ಹಾಗೂ ಸಿಹಿ ತಿಂಡಿಗಳ ತಯಾರಿಕೆ ಸಂಕ್ರಾಂತಿಯ ವಿಶೇಷವಾಗಿವೆ.
ಸಂಕ್ರಾಂತಿಯಲ್ಲಿ ಎಳ್ಳು–ಬೆಲ್ಲದ ಹಂಚಿಕೆ ಅತ್ಯಂತ ಮಹತ್ವ ಹೊಂದಿದ್ದು, ಎಳ್ಳಿನ ಕಹಿ ಮತ್ತು ಬೆಲ್ಲದ ಸಿಹಿ ಜೀವನದ ಸಿಹಿ–ಕಹಿ ಅನುಭವಗಳನ್ನು ಸೂಚಿಸುತ್ತದೆ. ಎಳ್ಳು ಬೆಲ್ಲ ಹಂಚಿಕೊಳ್ಳುವುದು ಸ್ನೇಹ, ಪ್ರೀತಿ ಹಾಗೂ ಶುಭ ಸಂಕೇತವಾಗಿದ್ದು, ಪೌಷ್ಟಿಕಾಂಶಗಳಿಂದ ಕೂಡಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಲಾಯಿತು. ಸೂರ್ಯನು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಅವರು, ಎಳ್ಳು–ಬೆಲ್ಲ ಕೊಟ್ಟು ಬದುಕು ಬಂಗಾರವಾಗಲಿ ಎಂದು ಹಾರೈಸುವ ಈ ಹಬ್ಬ ನಮ್ಮ ಸಂಸ್ಕೃತಿ ಹಾಗೂ ಧಾರ್ಮಿಕತೆಯನ್ನು ಸಾರುತ್ತದೆ ಎಂದರು.
ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಜ್ಜಿಯರಿಗಾಗಿ ಪೊಂಗಲ್ ಮಾಡುವ ಸ್ಪರ್ಧೆ ಹಾಗೂ ಮಕ್ಕಳ ತಾಯಂದಿರಿಗಾಗಿ ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಶಾಲಾ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಇಂತಹ ಹಬ್ಬಗಳ ಆಚರಣೆಯಿಂದ ಮಕ್ಕಳಲ್ಲಿ ಅವಿಭಕ್ತ ಕುಟುಂಬದ ಮಹತ್ವ, ಧಾರ್ಮಿಕ ಹಬ್ಬಗಳ ಮೌಲ್ಯ, ಕೃಷಿ ಪದ್ಧತಿ, ರೈತನ ಶ್ರಮ ಮತ್ತು ಅನ್ನದ ಮಹತ್ವ ಅರಿವಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿತು.




