
ಶ್ರೇಯನ್ ಪಬ್ಲಿಕ್ ಸ್ಕೂಲ್ನಲ್ಲಿ ಸುಗ್ಗಿಹಬ್ಬ ಆಚರಣೆ

Harvest Festival Celebration at Shreyan Public School
ಬೆಂಗಳೂರು: ಜ.16: ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ಕೆ.ಆರ್.ಪುರದ ಶ್ರೇಯನ್ ಪಬ್ಲಿಕ್ ಸ್ಕೂಲ್ನಲ್ಲಿ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಸೂರ್ಯದೇವರ ಹಬ್ಬವೆಂದು ಪರಿಗಣಿಸಲಾದ ಮಕರ ಸಂಕ್ರಾಂತಿಯನ್ನು ಪ್ರತಿವರ್ಷ ಜನವರಿ 14 ಅಥವಾ 15ರಂದು ಆಚರಿಸಲಾಗುತ್ತದೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವೇ ಈ ಹಬ್ಬವಾಗಿದೆ ಎಂದು ಶಾಲೆಯ ಪ್ರಿನ್ಸಿಪಲ್ ಜ್ಯೋತಿ ಪ್ರಭಾಕರ್ ಹೇಳಿದರು.
ಸುಗ್ಗಿ ಕಾಲದಲ್ಲಿ ಆಚರಿಸುವ ಈ ಹಬ್ಬವನ್ನು ಗಾಳಿಪಟದ ಹಬ್ಬವೆಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ರಂಗೋಲಿ ಹಾಗೂ ಹೂಗಳಿಂದ ಅಲಂಕರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಸಂಕ್ರಾಂತಿ ದಿನ ಎಳ್ಳು–ಬೆಲ್ಲ, ವಿವಿಧ ಸಿಹಿ ತಿಂಡಿಗಳನ್ನು ತಯಾರಿಸುವುದು ವಿಶೇಷ. ಜೊತೆಗೆ ಕೃಷಿಯಲ್ಲಿ ಬಳಸುವ ನೇಗಿಲು, ಕುಂಟೆ, ನೊಗ ಮುಂತಾದ ಉಪಕರಣಗಳನ್ನು ಪೂಜಿಸಲಾಗುತ್ತದೆ.“ಎಳ್ಳು ಬೆಲ್ಲ ತಿಂದು, ಒಳ್ಳೊಳ್ಳೆ ಮಾತನಾಡಿ” ಎಂಬ ಸಂದೇಶದೊಂದಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಆಚರಣೆಯಲ್ಲಿ ಕಾರ್ಯದರ್ಶಿಗಳಾದ ವೈ.ಕೆ. ವತ್ಸಲಾ ಮೇಡಂ, ಪ್ರಾಂಶುಪಾಲರಾದ. ಜ್ಯೋತಿ ಪ್ರಭಾಕರ್, ಸ್ಥಳೀಯರು, ನಿವೃತ್ತ ಶಿಕ್ಷಕರಾದ ಶ್ರೀಮತಿ ಉಷಾ ರಾಣಿ ಎಂ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೋಟ್:
ಮಕರ ಸಂಕ್ರಾಂತಿ ಹಬ್ಬವು ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. ಉತ್ತಮ ಬೆಳೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ರೈತರ ಮೇಲೆ ಸದಾ ಆಶೀರ್ವಾದ ಇರಲೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಳೆಯ ಕಹಿ ನೆನಪುಗಳು, ಅಸಮಾಧಾನಗಳನ್ನು ಬಿಟ್ಟು, ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವ ಸಂದೇಶವನ್ನು ಈ ಹಬ್ಬ ನೀಡುತ್ತದೆ.
– ಜ್ಯೋತಿ ಪ್ರಭಾಕರ್, ಪ್ರಾಂಶುಪಾಲರು.




