ಪರಿಶಿಷ್ಟ ಜಾತಿ ಮತ್ತು ಪಂಗಡದ ಪದಕ ವಿಜೇತ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
Applications invited for incentive for medal winning athletes from Scheduled Castes and Scheduled Tribes
ಕೊಪ್ಪಳ ಜನವರಿ 14 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಅಂತರ ರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2024ನೇ ಕ್ಯಾಲೆಂಡರ್ ವರ್ಷದಲ್ಲಿ (01.01.2024 ರಿಂದ 31.12.2024) ಅಂತರ ರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು.
ಕ್ರೀಡಾಪಟುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಪ್ರೋತ್ಸಾಹಧನವನ್ನು ಕರ್ನಾಟಕದ ಕ್ರೀಡಾಪಟುಗಳಿಗೆ ಮಾತ್ರ ನೀಡುವುದು. ಅಂತರಾಷ್ಟ್ರೀಯ, ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ತಂಡಗಳನ್ನು ಪ್ರತಿನಿಧಿಸಿ ಸರ್ಕಾರದಿಂದ ಅಂಗೀಕೃತವಾದಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿರಬೇಕು. ಕ್ರೀಡಾಪಟುಗಳು ಕರ್ನಾಟಕ ಮೂಲದವರಾಗಿದ್ದು, ಬೇರೆ ರಾಜ್ಯ ಅಥವಾ ಕ್ರೀಡಾ ತಂಡವನ್ನು (ಸರ್ವಿಸಸ್, ಏರ್ಲೈನ್ಸ್, ರೈಲ್ವೇಸ್) ಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ. ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವವರು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಾಗೂ ಪದಕ ಪಡೆದವರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ. ಕ್ರೀಡಾಪಟುಗಳು ಆಧಾರ್ಕಾರ್ಡ್, ಪಡಿತರ ಚೀಟಿ ಹಾಗೂ ಆರ್.ಡಿ.ಸಂಖ್ಯೆಯನ್ನು ಒಳಗೊಂಡ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಒಲಂಪಿಕ್, ಏಷ್ಯನ್ ಅಥವಾ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯದಿಂದ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ಶಿಪ್ಗಳಿಗೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುವುದು (ಮಾನ್ಯತೆ ಪಡೆಯದೇ ಇರುವ ಯಾವುದೇ ಫೆಡರೇಷನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಪ್ರೋತ್ಸಾಹಧನಕ್ಕೆ ಅರ್ಹರಾಗಿರುವುದಿಲ್ಲ). 6ನೇ ತರಗತಿಯಿಂದ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಹಿರಿಯರ(ವಯೋಮಿತಿ ಗುಂಪು) ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಪ್ರೋತ್ಸಾಹಧನಕ್ಕೆ ಅರ್ಹರಾಗಿರುವುದಿಲ್ಲ. ಬ್ಯಾಂಕ್ ಖಾತೆ ಕಡ್ಡಾಯವಾಗಿ ಕ್ರೀಡಾಪಟುವಿನ ಹೆಸರಿನಲ್ಲಿರಬೇಕು. ಬ್ಯಾಂಕ್ ಪಾಸ್ ಪುಸ್ತಕದ ಮುಖಪುಟವನ್ನು (ಹೆಸರು, ಖಾತೆ ಸಂಖ್ಯೆ ಐ.ಎಫ್.ಎಸ್.ಸಿ ಸಂಖ್ಯೆ ಇರುವ ಸಂಪೂರ್ಣ ವಿವರಗಳನ್ನೊಳಗೊಂಡ ಪ್ರತಿ) ಲಗತ್ತಿಸಬೇಕು. ಹಿಂದಿನ ಕ್ಯಾಲೆಂಡರ್ ವರ್ಷದ ಕ್ರೀಡಾ ಸಾಧನೆಯನ್ನು ಮಾತ್ರ ಪರಿಗಣಿಸಿ ಪ್ರಸಕ್ತ ಸಾಲಿನ ಪ್ರೋತ್ಸಾಹ ಧನವನ್ನು ಪಾವತಿಸಲಾಗುವುದು. ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಯಾವುದೇ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದರೂ ಕೂಡ ಒಂದು ಅತ್ಯುನ್ನತ ಸಾಧನೆ ಅಥವಾ ಪದಕವನ್ನು ಮಾತ್ರ ಪರಿಗಣಿಸಿ ಪ್ರೋತ್ಸಾಹ ಧನವನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಕ್ರೀಡಾಪಟುಗಳು ಅಧಿಕೃತ ಜಾಲತಾಣ: https://sevasindhu.karnataka.gov.in ಮೂಲಕ ಅರ್ಜಿಯನ್ನು ಸಲ್ಲಿಸಬೇಕೆಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


