

Tungabhadra Dange District In-charge Minister's visit: New crest gate installation inspected by Minister Shivaraj S. Thangadgi
ಅವರು ರವಿವಾರ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿ, ನೂತನ ಕ್ರಸ್ಟ್ ಗೇಟಗಳ ಅಳವಡಿಕೆ ಕಾರ್ಯವನ್ನು ಪರಿಶೀಲಿಸಿದ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿ, ಮಾತನಾಡಿದರು.
ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕುರಿತಂತೆ ಚಳಿಗಾಲ ಅಧಿವೇಶನಕ್ಕೂ ಪೂರ್ವದಲ್ಲಿ ಕೆ.ಎನ್.ಎನ್.ಎಲ್ ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಮತ್ತು ಕ್ರಸ್ಟ್ ಗೇಟ್ ಅಳವಡಿಕೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ನಂತರ ಈ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಅದರಂತೆ ತುಂಗಭದ್ರಾ ಆಣೆಕಟ್ಟಿನ ನೂತನ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದ್ದು, ಇಂದು ಗೇಟ್ ಸಂಖ್ಯೆ 18ರ ಕೆಲಸವು ಪೂರ್ಣಗೊಂಡಿರುತ್ತದೆ. ಕ್ರಸ್ಟ್ ಗೇಟಗಳ ಎರೆಕ್ಷನ್ ಮತ್ತು ಡಿಸಮೆಟಲಿಂಗ್ ಕಾರ್ಯಕ್ಕೆ ತಲಾ ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿಗೆ ಗೇಟ್ ಸಂಖ್ಯೆ 18ರಿಂದ ಕೆಲಸ ಆರಂಭಿಸಿದ್ದು, ಇದನ್ನು ಪೂರ್ಣಗೊಳಿಸಲು 8 ದಿನಗಳನ್ನು ತೆಗೆದುಕೊಂಡಿದ್ದಾರೆ. ಗೇಟ್ ಸಂಖ್ಯೆ 15ರ ಕೆಲಸವು ಸಹ ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಲ್ಲಿ ತಿಂಗಳಲ್ಲಿ 6 ಗೇಟ್ ಅಳವಡಿಸುವುದಾಗಿ ಕಂಪನಿಯವರು ಹೇಳಿದ್ದರು. ಈಗ ಒಂದು ತಿಂಗಳಲ್ಲಿ 8 ಗೇಟ್‌ಗಳನ್ನು ಅಳವಡಿಸುವುದಾಗಿ ಅವರು ಹೇಳುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲು ಜೂನ್ ತಿಂಗಳೊಳಗಾಗಿ ಪೂರ್ಣಗೊಳಿಸಲು ಟೈಮ್ ಬಾಂಡ್ ನೀಡಲಾಗಿದ್ದು, ಮೇ ಮಾಹೆಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಟೆಂಡರ್ ಪಡೆದ ಕಂಪನಿಯವರು ತಿಳಿಸಿದ್ದಾರೆ ಎಂದರು.
ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಲು ಒಟ್ಟು 54 ಕೋಟಿ ರೂ.ಗಳ ವೆಚ್ಚದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿದೆ. ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯಕ್ಕಾಗಿ ಈಗಾಗಲೇ ಆಂದ್ರಪ್ರದೇಶ ರಾಜ್ಯದಿಂದ 20 ಕೋಟಿ ರೂ. ನೀಡಿದ್ದಾರೆ. ನಮ್ಮ ರಾಜ್ಯದ ಪಾಲು 10 ಕೋಟಿ ರೂ.ಗಳನ್ನು ಸಹ ಟಿಬಿ ಬೋರ್ಡ್ಗೆ ಈಗಾಗಲೇ ನೀಡಲಾಗಿದೆ. ತೆಲಂಗಾಣ ರಾಜ್ಯದವರು ಸಹ ತಮ್ಮ ಪಾಲಿನ ಮೊತ್ತವನ್ನು ನೀಡಲಿದ್ದಾರೆ. ಈಗಾಗಲೇ 15 ಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣಗೊಂಡಿದ್ದು, ಅಳವಡಿಕೆ ಮಾತ್ರ ಬಾಕಿಯಿದೆ. 8 ಗೇಟುಗಳು ಫ್ಯಾಬ್ರಿಕೇಶನ್ ಹಂತದಲ್ಲಿದ್ದು, ಹೊಸಪೇಟೆ ಮತ್ತು ಗದಗ ಜಿಲ್ಲೆಯಲ್ಲಿ ತಲಾ 4 ಗೇಟ್‌ಗಳ ಪೈಕಿ ತಲಾ ಎರಡು ಗೇಟ್‌ಗಳು ಇನ್ನೂ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ ಆಯಾ ಗೇಟ್‌ಗಳ ಡಿಸಮೆಟಲಿಂಗ್ ಪೂರ್ಣಗೊಂಡಿದೆ ಮತ್ತು ಇತರೆ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಕ್ಕಾಗಿ ನಮ್ಮ ಸರ್ಕಾರವು ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ನಮ್ಮ ಸರ್ಕಾರದ ಅಧಿಕಾರಿಗಳು ಮತ್ತು ಟಿಬಿ ಬೋರ್ಡಿನ ಅಧಿಕಾರಿಗಳು ಸಹ ಇದಕ್ಕಾಗಿ ಶ್ರಮವಹಿಸುತ್ತಿದ್ದಾರೆ ಎಂದು ಹೇಳಿದರು.
ಟಿಬಿ ಬೋರ್ಡ್ ಕಾರ್ಯದರ್ಶಿಗಳಾದ ಒ.ಆರ್.ಕೆ ರೆಡ್ಡಿ ಅವರು ಮಾತನಾಡಿ, ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಡಿಸಮೆಟಲಿಂಗ್ ಮತ್ತು ಎರೆಕ್ಷನ್ ಎರಡು ಕೆಲಸಗಳು ನಡೆಯುತ್ತಿವೆ. ಗೇಟ್ ಸಂಖ್ಯೆ 18 ಮತ್ತು 20ರ ಕೆಲಸವು ಪೂರ್ಣಗೊಂಡಿದೆ. ಗೇಟ್ ಸಂಖ್ಯೆ 27ರ ಕೆಲಸವನ್ನು ಮೂರು ದಿನದಲ್ಲಿ ಕೈಗೊಳ್ಳಲಾಗುವುದು. ಗೇಟ್ ಸಂಖ್ಯೆ 4ರ ಕಾಮಗಾರಿಯನ್ನು ಪ್ರಾರಂಭಿಸಿ, ನಾಲ್ಕು ಗೇಟ್‌ಗಳನ್ನು ಅಳವಡಿಸಲಾಗುವುದು. ಮೊದಲ ಗೇಟ್ ಅಳವಡಿಸಲು 8 ರಿಂದ 10 ದಿನ ಸಮಯ ತೆಗೆದುಕೊಂಡಿದೆ. ಎರಡನೇ ಗೇಟ್ ಅಳವಡಿಸಲು 6 ದಿನ ಸಮಯ ತೆಗೆದುಕೊಳ್ಳಲಿದೆ. ಒಟ್ಟು 40 ಜನರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಕಾರ್ಯ ಮೇ ತಿಂಗಳ ಎರಡನೇ ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಟಿಬಿ ಬೋರ್ಡ್ ಅಧಿಕ್ಷಕ ಅಭಿಯಂತರರಾದ ನಾರಾಯಣ ನಾಯ್ಕ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ ಮತ್ತು ಪಂಪಾಪತಿ ಡಿ.ಕೆ., ಕೆ.ಎನ್.ಎನ್.ಎಲ್ ಎಇಇ ಧರ್ಮರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





