ಜ.11 ರಂದು ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ: ನಿಷೇಧಾಜ್ಞೆ ಜಾರಿ

Recruitment exam for various posts on January 11: Prohibitory order imposed
ಕೊಪ್ಪಳ ಜನವರಿ 09, (ಕರ್ನಾಟಕ ವಾರ್ತೆ): ಬಿಡಿಎ, ತಾಂತ್ರಿಕ ಶಿಕ್ಷಣ ಇಲಾಖೆ, ಆರ್ಜಿಯುಹೆಚ್ಎಸ್, ಬಿಡಬ್ಲುಎಸ್ಎಸ್ಬಿ, ಕೆಕೆಆರ್ಟಿಸಿ, ಕೆಎಸ್ಡಿಎಲ್, ಕೆಎಸ್ಎಸ್ಐಡಿಸಿ ಮುಂತಾದ ಇಲಾಖೆ, ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ಜನವರಿ 11 ರಂದು ಕೊಪ್ಪಳ ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ನೇರ ನೇಮಕಾತಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಅಂತರದ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ವಿವಿಧ ಷರತ್ತಿಗೊಳಪಟ್ಟು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ಜನವರಿ 11 ರಂದು ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10.30 ಗಂಟೆಯಿAದ ಮಧ್ಯಾಹ್ನ 12.30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2.30 ಗಂಟೆಯಿAದ ಸಂಜೆ 4.30 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ. ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷೆಯಲ್ಲಿ ಪ್ರವೇಶ ಪತ್ರ ಹೊಂದಿದ ಅಭ್ಯರ್ಥಿಗಳು ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ನಕಲು ಮಾಡುವ ಸಾಮಗ್ರಿಗಳನ್ನು ಹಾಗೂ ಹೊರಗಿನಿಂದ ಕಾಪಿ ಬರೆದು ಪರೀಕ್ಷಾ ಕೇಂದ್ರಗಳಲ್ಲಿ ಪೂರೈಸುವುದನ್ನು ನಿರ್ಬಂಧಿಸಲಾಗಿದೆ. 200 ಮೀಟರ್ ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತçಗಳನ್ನು ಹಿಡಿದು ತಿರುಗಾಡುವದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.


