
ಗುತ್ತಿಗೆದಾರನ ಗುಂಡಾಗಿರಿ ವಿರೋಧಿಸಿ ಪ್ರತಿಭಟನೆ

Protest against contractor’s firing

ಗಂಗಾವತಿ: ಇಂದು ನಗರದಲ್ಲಿ ಗುತ್ತಿಗೆದಾರ ಎಂ.ಆರ್. ವೆಂಕಟೇಶ ಅವರ ಗುಂಡಾಗಿರಿಯನ್ನು ವಿರೋಧಿಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರರಾದ ಮಹಾಂತಗೌಡ ಹಾಗೂ ಕ.ಕ.ರ.ಸಾ.ಸಂಸ್ಥೆಯ ಗಂಗಾವತಿ ಘಟಕದ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು ಎಂದು ಜಿಲ್ಲಾಧ್ಯಕ್ಷ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಜನೇವರಿ-೦೭ ರಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನು ಭೇಟಿಮಾಡಿ ಕಾರ್ಮಿಕರ ಸಮಸ್ಯೆ ಕುರಿತು ಚರ್ಚೆ ಮಾಡುವ ಸಂದರ್ಭದಲ್ಲಿ ಗುತ್ತಿಗೆದಾರ ಎಂ.ಆರ್. ವೆಂಕಟೇಶ ಅವರು ನಮ್ಮ ಸಂಘಟನೆಯ ಉಪಾಧ್ಯಕ್ಷರ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ಅವರ ಗುತ್ತಿಗೆ ಲೈಸೆನ್ಸ್ ಬ್ಲಾಕ್ ಲಿಸ್ಟ್ಗೆ ಹಾಕಬೇಕು ಎಂದರು.
ಪೌರಕಾರ್ಮಿಕರ ಸಂಘಟನೆಯ ಮುಖಂಡರಾದ ಪರುಶುರಾಮ ಮಾತನಾಡಿ ಗುತ್ತಿಗೆದಾರರಿಂದ ಕಾರ್ಮಿಕರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ನಮ್ಮ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದ್ದು ನಮ್ಮ ಹೋರಾಟವನ್ನು ಕುಗ್ಗಿಸಲು ಈ ರೀತಿಯ ಹಲ್ಲೆಗಳನ್ನು ಮಾಡಿಸಲಾಗುತ್ತಿದೆ ಎಂದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರಾದ ಬಾಬರ್ ಮಾತನಾಡಿ ಗುತ್ತಿಗೆದಾರರು ಇಷ್ಟುದಿನ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿದ್ದರು. ಈಗ ಕಾರ್ಮಿಕರ ಪರ ಹೋರಾಟಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಇದು ದುರಂತ ಈ ಕೂಡಲೇ ಗುತ್ತಿಗೆ ಪದ್ದತಿ ರದ್ದಾಗಬೇಕು ಎಂದರು.
ಪೌರಕಾರ್ಮಿಕಳಾದ ಮಾಯಮ್ಮ ಮಾತನಾಡಿ ನಮ್ಮ ಪರವಾಗಿ ಹೋರಾಟ ನಡೆಸುವ ನಮ್ಮ ಸಂಘಟನೆಯ ಸದಸ್ಯರ ಮೇಲೆ ಹಲ್ಲೆ ಮಾಡಿರುವುದು ತಪ್ಪು. ಅವರು ನಮಗೆ ಅನ್ಯಾಯ ಆದಾಗ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಾರೆ. ಅಂತವರ ಮೇಲೆ ಹಲ್ಲೆ ಮಾಡಿದರೆ ನಮ್ಮ ಗೋಳು ಕೇಳುವವರು ಯಾರು ಎಂದರು.
ಬೀದಿವ್ಯಾಪಾರಿಗಳ ಸಂಘಟನೆಯ ಮುಖಂಡರಾದ ಬರ‍್ಹಾನುದ್ದೀನ್ ಮಾತನಾಡಿ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಮಾನವೀಯ ಕೃತ್ಯ, ಗುತ್ತಿಗೆದಾರರಿಂದ ಕಾರ್ಮಿಕರು ಸಾಕಷ್ಟು ಹಿಂಸೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಿ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಎ.ಐ.ಸಿ.ಸಿ.ಟಿ.ಯು ಸಂಘಟನೆ ಜಿಲ್ಲಾ ಉಪಾಧ್ಯಕ್ಷರಾದ ಸಣ್ಣ ಹನುಮಂತಪ್ಪ ಹುಲಿಹೈದರ ಮಾತನಾಡಿ ಬಸ್ ನಿಲ್ದಾಣಗಳ ಸ್ವಚ್ಚತಾ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಆಯೋಗದ ಅಧ್ಯಕ್ಷರ ಮುಂದೆ ಮಾಹಿತಿ ನೀಡುವಾಗ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ದಾಳಿ ನಮ್ಮ ಮೇಲೆ ಆಗಿರುವುದಲ್ಲ ವ್ಯವಸ್ಥೆ ಮೇಲೆ ಆಗಿರುವ ದಾಳಿಯಾಗಿದೆ. ಗುತ್ತಿಗೆದಾರ ಎಂ.ಆರ್. ವೆಂಕಟೇಶ ಅವರು ಯಾವುದೇ ಕಾನೂನಿನ ಭಯವಿಲ್ಲದೆ ಕಾರ್ಮಿಕರ ಮೇಲೆ ನಿರಂತರ ಹಲ್ಲೆ ಮಾಡುತ್ತಿದ್ದಾರೆ. ಹಲ್ಲೆಗೆ ಒಳಗಾದ ಕಾರ್ಮಿಕರ ಪರವಾಗಿ ಮಾತನಾಡಿದ್ದಕ್ಕೆ ಇಂದು ನಮ್ಮ ಮೇಲೆ ಹಲ್ಯೆ ನಡೆಸಿದ್ದಾರೆ. ಎಂ.ಆರ್. ವೆಂಕಟೇಶ ಅವರು ಹೇಳುವ ಪ್ರಕಾರ ಕಾಂಗ್ರೆಸ್‌ನಲ್ಲಿ ಸುಮಾರು ಸಚಿವರು ನನ್ನ ಬೆಂಬಲಕ್ಕೆ ಇದ್ದಾರೆ ನನ್ನನ್ನು ಯಾರು ಏನು ಮಾಡಲಿಕ್ಕೆ ಆಗಲ್ಲ ಎನ್ನುವುದು ನೋಡಿದರೆ ನಮಗೆ ಈ ಸರ್ಕಾರದ ಬಗ್ಗೆ ಹಲವು ಅನುಮಾನಗಳು ಹುಟ್ಟುತ್ತವೆ ಎಂದರು.
ಈ ಸಂದರ್ಭದಲ್ಲಿ ಕೇಶವನಾಯ್ಕ, ಜಡಿಯಪ್ಪ, ಗಿಡ್ಡಪ್ಪ, ಕರಿಮುತಿ ಹನುಮಂತಪ್ಪ, ಶೇಖರಪ್ಪ, ಭೀಮಣ್ಣ, ಹುಸೇನಪ್ಪ, ಎಸ್. ಹನುಮಮ್ಮ, ಈಶುಬ್, ಗಾಲಿ ಹುಲಿಗೆಮ್ಮ, ಬಂಕದ್ ಮನಿ ಹುಲಿಗೇಮ್ಮ, ನಾಗಮ್ಮ, ಗಂಗಮ್ಮ, ದುರುಗಪ್ಪ, ಮಾರುತಿ, ಹಾಲಮ್ ಸಾಬ, ರೇಣುಕಾಮ್ಮ, ದ್ಯಾವಮ್ಮ, ಹುಲಿಗೇಮ್ಮ, ಉಮಾದೇವಿ ಇತರರು ಇದ್ದರು.

