
ಡಾ. ಎಂ.ಎಸ್. ದುರ್ಗಾ ಪ್ರವೀಣ್ ಅವರಿಗೆ ಎಚ್.ಎನ್.ಪ್ರಶಸ್ತಿ-2025 ಪ್ರದಾನ

Dr. M.S. Durga Praveen awarded H.N. Award-2025
ಬೆಂಗಳೂರು: ಜ. 08: ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂನ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಎಂ.ಎಸ್. ದುರ್ಗಾ ಪ್ರವೀಣ್ ಅವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡುವ ಪ್ರತಿಷ್ಠಿತ ‘ಎಚ್. ಎನ್. ಪ್ರಶಸ್ತಿ 2025ಗೆ ಭಾಜನರಾಗಿದ್ದಾರೆ. ಇದು ಖ್ಯಾತ ಶಿಕ್ಷಣ ತಜ್ಞ, ವಿಚಾರವಾದಿ ಎಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಯಾಗಿದೆ. ಮೌಲಿಕ ಸಂಶೋಧನಾ ಕೃತಿಗಳನ್ನು ನೀಡಿರುವ ಡಾ. ದುರ್ಗಾ ಪ್ರವೀಣ್ ಅವರು 18 ವರ್ಷಗಳ ಬೋಧನಾನುಭವ ಹೊಂದಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುತ್ತಾರೆ. ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಯಾದಗಿರಿಯಲ್ಲಿ ಇತ್ತೀಚೆಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಇಸ್ರೊ, ಡಿಆರ್ ಡಿಓ ನೆಹರೂ ತಾರಾಲಯ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ 5ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಇವರಿಗೆ ರಾಜ್ಯ ಸರ್ಕಾರದ ಸಚಿವರಾದ ಶರಣ ಪ್ರಕಾಶ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಹಿನ್ನೆಲೆಯಲ್ಲಿ ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ದೊರಸ್ವಾಮಿ, ಕುಲಸಚಿವ ಪ್ರೊ.ಕಿರಣ್ ಕುಮಾರ್ ಅವರು ದುರ್ಗಾ ಪ್ರವೀಣ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕುಲಪತಿಗಳು ಮಾತನಾಡುತ್ತಾ ಹೊರ ರಾಜ್ಯದ ಸಾಧಕರನ್ನು ಗುರುತಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಾರ್ಯಗಳನ್ನು ಶ್ಲಾಘಿಸಿದರು. ಹಾಗೆ ಸಂಸ್ಥೆಯ ಡಾ.ಹುಲಿಕಲ್ ನಟರಾಜ್ ಅವರು ನಿರಂತರವಾಗಿ ಕೈಗೊಂಡಿರುವ ಜ್ಞಾನ ಜಾಗೃತಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.




