
AIMSS ವತಿಯಿಂದ ಸಾವಿತ್ರಿ ಬಾಯಿ ಫುಲೆ ರವರ 195ನೇ ಜನ್ಮ ದಿನ ಕಾರ್ಯಕ್ರಮ
ಮಹಿಳೆಯರ ಘನತೆಯ ಬದುಕಿಗೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಇಂದಿಗೂ ಪ್ರಸ್ತುತ – ಮಂಜುಳಾ ಮಜ್ಜಿಗಿ
AIMSS celebrates Savitri Bai Phule's 195th birth anniversary
ಕೊಪ್ಪಳ: ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು 25 ನವೆಂಬರ್ 2025 ರಿಂದ 25 ಮಾರ್ಚ್ 2026 ರ ವರೆಗೆ ನಡೆಯುತ್ತಿರುವ ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಇಂದು ಮಹಿಳೆಯರಿಗೆ ಶಿಕ್ಷಣ, ಘನತೆಯ ಬದುಕಿಗಾಗಿ ಶ್ರಮಿಸಿದ ಸಾವಿತ್ರಿಬಾಯಿ ಫುಲೆಯವರ 195ನೇ ಜನ್ಮ ದಿನದ ಕಾರ್ಯಕ್ರಮವನ್ನು ಗಂಗಾಮಾತ ವಠಾರದ ಮಹಿಳೆಯರ ಮಧ್ಯೆ ಹಮ್ಮಿಕೊಳ್ಳಲಾಗಿತ್ತು.
ಜಾಹೀರಾತು

ಈ ಸಂದರ್ಭದಲ್ಲಿ AIMSS ನ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಮಾತನಾಡುತ್ತಾ “ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಹಾಗೂ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ರವರನ್ನು ಪ್ರತಿಯೊಬ್ಬ ಹೆಣ್ಣುಮಗಳು ನೆನಪಿಸಿಕೊಳ್ಳಲೇಬೇಕು. ಚಿಕ್ಕ ವಯಸ್ಸಿನಲ್ಲೇ ಸ್ವತಃ ಶಿಕ್ಷಣವನ್ನು ಕಲಿತು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ, ಅವರ ಏಳಿಗೆಗಾಗಿಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಶಿಕ್ಷಣದ ಅರಿವೇ ಇರದ ಕಾಲದಲ್ಲಿ ಮನುವಾದವನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಲವಾರು ಶಾಲೆಗಳನ್ನು ತೆರೆದರು. ಸಂಪ್ರದಾಯವಾದಿಗಳಿಂದ ಬಂದ ವಿರೋಧವನ್ನು ಮೆಟ್ಟಿನಿಂತು ದೀನ ದಲಿತರ, ಅಸ್ಪೃಶ್ಯರ, ವಿಧವೆಯರ ಜೀವನವನ್ನು ಉತ್ತಮಗೊಳಿಸಲು ಜೀವನ ಪರ್ಯಂತ ಶ್ರಮಿಸಿದರು. ಬಾಲ್ಯ ವಿವಾಹ , ವರದಕ್ಷಿಣೆ , ಜಾತಿ ತಾರತಮ್ಯ, ಮೌಢ್ಯತೆಯನ್ನು ವಿರೋಧಿಸಿದರು.
ಇಂದಿಗೂ ಸ್ತ್ರೀ ಭ್ರೂಣ ಹತ್ಯೆ, ವರದಕ್ಷಣೆಗಾಗಿ ಕೊಲೆ, ಮರ್ಯಾದೆಗೆಡು ಹತ್ಯೆಗಳು, ಆಸಿಡ್ ದಾಳಿ, ಗುಂಪು ಅತ್ಯಾಚಾರ ಹೀಗೆ ಭ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ಅಗೌರವ, ಅನಾದರಗಳಿಗೆ ಮಹಿಳೆ ತುತ್ತಾಗುತ್ತಿದ್ದಾಳೆ. ಸಾಂಸ್ಕೃತಿಕ ಅಧ:ಪತನದಿಂದಾಗಿ ಸಮಾಜದಲ್ಲಿ ನೀತಿ, ನೈತಿಕತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಎ ಐ ಎಂ ಎಸ್ ಎಸ್ ಸಾವಿತ್ರಿಬಾಯಿ ಫುಲೆ ಅಂತಹ ದಿಟ್ಟ ಹೋರಾಟಗಾರ್ತಿಯ ಜೀವನದಿಂದ ಸ್ಫೂರ್ತಿ ಪಡೆದು ಅವರು ಕಂಡ ಕನಸಿನ ಸಮಾಜ, ಎಲ್ಲರಿಗೂ ಸಮಾನತೆ ಇರುವ, ಹೆಣ್ಣುಮಕ್ಕಳ, ಶೋಷಕರ, ನೊಂದವರ ನೋವನ್ನು ನಿವಾರಿಸುವ ಹೊಸ ಸಮಾಜವನ್ನು ಕಟ್ಟಲು ಶ್ರಮಿಸುತ್ತಿದೆ. ಸಮಾಜದ ಒಳಿತಿಗಾಗಿ ಬದಲಾವಣೆಯತ್ತ ಹೋರಾಟದ ಹೆಜ್ಜೆಗಳನ್ನಿಡಲು ಶ್ರಮಿಸುತ್ತಿದೆ. ಈ ಹೋರಾಟಕ್ಕೆ ಜನತೆ ಕೈಜೋಡಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




