
ಅಪ್ರಾಪ್ತೆಯ ಮೇಲಿನ ಆತ್ಯಾಚಾರ: ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ

Rape of minor: Convict sentenced to 20 years in prison

ಕೊಪ್ಪಳ ಡಿಸೆಂಬರ್ 31, (ಕರ್ನಾಟಕ ವಾರ್ತೆ): ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕೊಪ್ಪಳ ನಗರದ ಮಹಮ್ಮದ ಸೋಯಿಬ ಎಂಬ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ತ್ವರಿತ ವಿಲೇವಾರಿ ನ್ಯಾಯಾಲಯ [ಪೋಕ್ಸೊ] ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಅಪರಾಧಿಗೆ ರೂ.25 ಸಾವಿರಗಳ ದಂಡ ಸಹಿತ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಡಿಸೆಂಬರ್ 23 ರಂದು ತೀರ್ಪು ಪ್ರಕಟಿಸಿದ್ದಾರೆ.
ಕೊಪ್ಪಳ ನಗರದ ಮಹಮ್ಮದ ಸೋಯಿಬ ಎಂಬ ವ್ಯಕ್ತಿಯು 2 ವರ್ಷದ ಹಿಂದೆ ಬಾಧಿತಳು ಅಪ್ರಾಪ್ತಳು ಎಂದು ಗೊತ್ತಿದ್ದರೂ ಅವಳನ್ನು ಪ್ರೀತಿಸುವುದಾಗಿ, ಅವಳೊಂದಿಗೆ ಸಲುಗೆಯಿಂದ ಇದ್ದು, ಹಲವಾರು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಾಲಕಿ ಗರ್ಭಿಣಿಯಾದ ನಂತರ ಅವಳನ್ನು ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ಬಾಲಕಿಯ ತಾಯಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಅವರು ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿದ್ದರು. ಮುಂದಿನ ತನಿಖೆಯನ್ನು ನಡೆಸಿದ ಪಿಐ ಆಂಜಿನೇಯ ಡಿ.ಎಸ್. ಅವರು ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾದ್ದರಿಂದ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಹನುಮಂತಗೌಡ ಪಿಸಿ ಇವರು ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸಿದ್ದರು.
ಪ್ರಕರಣವು ಸ್ಪೇ.ಎಸ್‌ಸಿ[ಪೋಕ್ಸೊ] ಸಂ: 62/2024 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರು ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 25,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ತೀರ್ಪು ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಮುನಿರಾಬಾದ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದಾರೆ ಎಂದು ಕೊಪ್ಪಳ ಹೆಚ್ದುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.




