
ಕೊಪ್ಪಳ:ಮರ್ಯಾದೆ ಹತ್ಯೆ ಸಮಾಜದ ಕಳಂಕ; ಯುವಜನತೆ ಕ್ರಾಂತಿಕಾರಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು : ಎಸ್‌ಯುಸಿಐ(ಸಿ) ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಕರೆ”

Koppal: Honor killings are a stigma on society; Youth should adopt revolutionary values: SUCI(C) leader Ramanjanappa Aldalli calls

ಕೊಪ್ಪಳ: ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾಮಟ್ಟದ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (AIDYO) ವತಿಯಿಂದ ಡಿ.27- 28ರಂದು ಇಲ್ಲಿನ ಮಳೆ–ಮಲ್ಲೇಶ್ವರ ಬೆಟ್ಟದಲ್ಲಿ ಆಯೋಜಿಸಿದ ಎರಡು ದಿನಗಳ ಯುವಜನ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.
ಶಿಬಿರಾರ್ಥಿಗಳನ್ನು ಉದ್ದೇಶಿಸಿ “ಯುವಜನರ ಮುಂದಿರುವ ಕರ್ತವ್ಯಗಳು” ಎಂಬ ವಿಷಯದ ಕುರಿತು ಮಾತನಾಡಿದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ರಾಮಾಂಜನಪ್ಪ ಅಲ್ದಳ್ಳಿ ಅವರು, 21ನೇ ಶತಮಾನದಲ್ಲಿಯೂ ಮರ್ಯಾದೆ ಹತ್ಯೆಗಳಂತಹ ಅಮಾನುಷ ಘಟನೆಗಳು ನಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಸಮಾಜದ ಆರೋಗ್ಯಕರ ಬೆಳವಣಿಗೆಯ ಸೂಚಕವಲ್ಲ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣಗಳು ಹೆಚ್ಚುತ್ತಿರುವುದು ಕೂಡ ಆತಂಕಕಾರಿ ಪರಿಸ್ಥಿತಿಯಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಸ್ಕೂಲ್ ತೆರೆಯುವ ಹೆಸರಿನಲ್ಲಿ ಈಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿರುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಅನ್ಯಾಯ ಮತ್ತು ಅಸತ್ಯಗಳ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಬದಲಾವಣೆಯನ್ನು ಬಯಸುವವರೇ ನಿಜವಾದ ಯುವಕರು. ಯೌವನವನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಮಾತ್ರ ಪರಿಗಣಿಸದೆ, ಮಾನಸಿಕ, ದೈಹಿಕ, ರಾಜಕೀಯ, ಸಾಮಾಜಿಕ ಹಾಗೂ ವೈಚಾರಿಕವಾಗಿ ಜಾಗೃತರಾಗಬೇಕು. ವೈಚಾರಿಕತೆ ಮತ್ತು ಜ್ಞಾನವನ್ನು ಬೆಳೆಸಿಕೊಂಡಾಗ ಮಾತ್ರ ಯುವಕರು ಪ್ರಜ್ಞೆವುಳ್ಳವರಾಗಿ ರೂಪುಗೊಳ್ಳಲು ಸಾಧ್ಯ ಎಂದು ಅವರು ಕರೆ ನೀಡಿದರು.
ನಾವು ಬದುಕುತ್ತಿರುವ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಮತ್ತು ಸಮಾಜದಿಂದ ಏನು ಪಡೆದುಕೊಳ್ಳುತ್ತಿದ್ದೇವೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಮತ್ತು ಸೌಲಭ್ಯಗಳು ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ, ಹೋರಾಟ ಮತ್ತು ಬಲಿದಾನಗಳ ಫಲವಾಗಿವೆ. ಆ ತ್ಯಾಗಗಳಿಂದ ದೊರೆತ ಹಕ್ಕುಗಳನ್ನು ಕೇವಲ ಅನುಭವಿಸುವುದಕ್ಕೆ ಸೀಮಿತಗೊಳಿಸದೇ, ಸಮಾಜಕ್ಕೆ ಮರಳಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಭಗತ್ ಸಿಂಗ್ ಅವರ ಮದುವೆ ಕುರಿತ ಪ್ರಸಂಗವನ್ನು ಉಲ್ಲೇಖಿಸಿದ ಅವರು, ವೈಯಕ್ತಿಕ ಜೀವನಕ್ಕಿಂತ ದೇಶ ಮತ್ತು ಸಮಾಜದ ಮುಕ್ತಿಯನ್ನೇ ಮೊದಲ ಆದ್ಯತೆಯಾಗಿ ಕಂಡ ಕ್ರಾಂತಿಕಾರಿಗಳ ಜೀವನ ಯುವಕರಿಗೆ ಆದರ್ಶವಾಗಬೇಕು ಎಂದರು. ನಿಜವಾದ ಪ್ರೀತಿ ಮನುಷ್ಯನನ್ನು ಕುಗ್ಗಿಸುವುದಲ್ಲ, ಅವನನ್ನು ಮೇಲಕ್ಕೆತ್ತಿ ಉನ್ನತ ಮಾನವೀಯತೆಯತ್ತ ಕರೆದೊಯ್ಯುತ್ತದೆ ಎಂದು ಹೇಳಿದರು.
ಭಗತ್ ಸಿಂಗ್, ಸುಖದೇವ, ಖುದಿರಾಮ್ ಬೋಸ್, ಸೂರ್ಯಸೇನ್, ಮದನ್ ಲಾಲ್ ಧಿಂಗ್ರಾ ಸೇರಿದಂತೆ ಕ್ರಾಂತಿಕಾರಿಗಳ ತ್ಯಾಗ ಮತ್ತು ಹೋರಾಟಗಳು ಇಂದಿನ ಯುವಜನತೆಗೆ ದಾರಿ ತೋರಿಸುವ ದೀಪವಾಗಬೇಕು. ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಧಾರೆಯ ಉತ್ತರಾಧಿಕಾರಿಯಾಗಿ ಎಐಡಿವೈಒ (AIDYO) ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯನ್ನು ಬಲಿಷ್ಠಗೊಳಿಸಿ ಅದರ ವಿಚಾರಧಾರೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಸಮಾಜ ಪರಿವರ್ತನೆಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಶಿಬಿರದ ಮೊದಲ ಗೋಷ್ಠಿಯಲ್ಲಿ “ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಕಾರಣವೇ?” ಎಂಬ ವಿಷಯದ ಕುರಿತು ಎಐಡಿವೈಒ ಸಂಘಟನೆಯ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಕಾ. ಭವಾನಿ ಶಂಕರ್ ಎಸ್. ಗೌಡ ಅವರು ಚರ್ಚೆ ನಡೆಸಿದರು.
“ಯುವಜನರಿಗೆ ಭಗತ್ ಸಿಂಗ್ ಅವರ ಕೊನೆಯ ಕರೆ” ಎಂಬ ವಿಷಯದ ಎರಡನೇಯ ಚರ್ಚಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಅವರು ಮಾತನಾಡಿದರು.
ಶಿಬಿರದಲ್ಲಿ ಅಶೋಕನ ಶಿಲಾಶಾಸನದತ್ತ ಚಾರಣ, ಜೈಭೀಮ್ ಸಿನಿಮಾ ಪ್ರದರ್ಶನ ಮತ್ತು ಸಂವಾದ, ಪ್ರಚಲಿತ ವಿಷಯಗಳ ಕುರಿತು ಚರ್ಚಾಗೋಷ್ಠಿಗಳು ಯಶಸ್ವಿಯಾಗಿ ನಡೆದವು.
ಶಿಬಿರದಲ್ಲಿ ಹೊಸಪೇಟೆಯ ಭರತ ಮತ್ತು ಸಂಗಡಿಗರಿಂದ ರಾಗ–ತಾಳ–ತಂತಿ ಮ್ಯೂಸಿಕ್ ಬ್ಯಾಂಡ್ ತಂಡದಿಂದ ಹೋರಾಟದ ಹಾಡುಗಳನ್ನು ಪ್ರಸ್ತುತಪಡಿಸಿ, ಶಿಬಿರಾರ್ಥಿಗಳಲ್ಲಿ ಅಪಾರ ಉತ್ಸಾಹ ಮತ್ತು ಚೈತನ್ಯ ಮೂಡಿಸಿದರು.
ಶಿಬಿರದಲ್ಲಿ ಮುಖಂಡರಾದ ಪಂಪಾಪತಿ ಹೋಸಪೇಟೆ , ಶರಣು ಗಡ್ಡಿ, ಶರಣು ಪಾಟೀಲ್, ಕೆ. ಪಾಲಾಕ್ಷ, ದೇವರಾಜ ಹೋಸಮನಿ, ಶ್ರೀನಿವಾಸ, ಭೀಮಾಶಂಕರ ಪಾಣೇಗಾಂವ , ಮಲ್ಲಪ್ಪ ಮಾದಿನೂರ ಮತ್ತು ಧರ್ಮರಾಜ ಗೋನಾಳ, ಕಾಸಿಂ ಕೆ.ಎನ್ . ಶಿವಮೂರ್ತಿ ಸೇರಿದಂತೆ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಯುವ ಶಿಬಿರಾರ್ಥಿಗಳು ಭಾಗವಹಿಸಿದ್ದರು.


