
ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಚಾಲನೆ

District Collector, ZP CEO launch 'Your Money, Your Rights' campaign


ಕೊಪ್ಪಳ ಡಿಸೆಂಬರ್ 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವಾರಸುದಾರರು ಇಲ್ಲದ ಬ್ಯಾಂಕ್ ಠೇವಣಿಗಳ ಖಾತೆಗಳಲ್ಲಿ ಉಳಿದಿರುವ ಹಣವನ್ನು ಮೂಲ ಠೇವಣಿದಾರರಿಗೆ ಅಥವಾ ನಾಮನಿರ್ದೇಶಿತರಿಗೆ ಮರುಪಾವತಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ ಅವರು ಸೋಮವಾರ ಜಿಲ್ಲಾಡಳಿತ ಭವನದಲ್ಲಿರುವ ಕೆಸ್ವಾನ್ ಸಭಾಂಗಣದಲ್ಲಿ ಚಾಲನೆ ನೀಡಿದರು.
ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಮೋನಿರಾಜ ಬೃಹ್ಮಾ ಅವರು ಮಾತನಾಡಿ, ವಾರಸುದಾರರು ಇಲ್ಲದ ಬ್ಯಾಂಕ್‌ಗಳಲ್ಲಿರುವ ಠೇವಣಿಗಳನ್ನು ಪತ್ತೆಹಚ್ಚಿ, ಸಂಬಂಧಿಸಿದ ಬ್ಯಾಂಕ್ ಖಾತೆಗಳ ಮೂಲಕ ಮೊತ್ತವನ್ನು ಮೂಲ ಠೇವಣಿದಾರರು ಅಥವಾ ನಾಮನಿರ್ದೇಶಿತರಿಗೆ ಮರುಪಾವತಿಸಲು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಡಿಇಎಎಫ್ (ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ)ಗೆ ವರ್ಗಾಯಿಸಲಾದ ಠೇವಣಿಗಳನ್ನು ಮರು ಮುಖ್ಯವಾಹಿನಿಗೆ ತಂದು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2,59,476 ಡಿಇಎಎಫ್ ಖಾತೆಗಳು ಬಾಕಿ ಉಳಿದಿದ್ದು, ರೂ. 53.35 ಕೋಟಿ ಮೊತ್ತ ವಾರಸುದಾರರು ಇಲ್ಲದೆ ಠೇವಣಿಯಾಗಿ ಉಳಿದುಕೊಂಡಿದೆ. ಇದುವರೆಗೆ 211 ಖಾತೆಗಳಲ್ಲಿರುವ ರೂ. 1.27 ಕೋಟಿ ಮೊತ್ತವನ್ನು ಗುರುತಿಸಿ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ ಕರ್ಪಾನಿ ಸೇರಿದಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೇನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


