
ಬೆಂಗಳೂರು ವಿವಿ: ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ

Bangalore University: Commemoration of 33rd Mahaparinibbana of B. Basavalingappa

ಬೆಂಗಳೂರು: ಡಿ.29: ಬಿ. ಬಸವಲಿಂಗಪ್ಪನವರು ದಮನಿತರು, ಶೋಷಿತ ಸಮುದಾಯಗಳ ಬದುಕಿನ ದಿಕ್ಕನ್ನು ಬದಲಿಸಿದವರು. ಅವರ ಕುರಿತು ಶೈಕ್ಷಣಿಕ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸುವುದು ಅಗತ್ಯವಾಗಿದೆಂದು ಬಿ.ಬಸವಲಿಂಗಪ್ಪನವರ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಂಯೋಜಕರಾದ ಪ್ರೊ.ಬಿ.ಎಲ್.ಮುರುಳೀಧರ್ ಅಭಿಮತ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಬಿ.ಬಸವಲಿಂಗಪ್ಪನವರ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕ್ರಾಂತಿಕಾರಿ ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿ. ಬಸವಲಿಂಗಪ್ಪನವರು ಕರ್ನಾಟಕ ಅಂಬೇಡ್ಕರ್ ಎನಿಸಿದ್ದವರು, ಬಾಬಾಸಾಹೇಬರ ದಾರಿಯಲ್ಲಿ ಸಾಗಿ ರಾಜ್ಯ ದಮನಿತರ, ಶೋಷಿತರ, ದಲಿತರ ದನಿಯಾಗಿದ್ದರು. ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿ, ಪೌರ ಕಾರ್ಮಿಕ ಎಂದು ಘೋಷಿಸಿ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದರು. ರಾಜ್ಯದಲ್ಲಿ ಭೂ ಸುಧಾರಣೆ ನೀತಗಳನ್ನು ಅನುಷ್ಠಾನಗೊಳಿಸಿ, ಅವಕಾಶ ವಂಚಿತರಾದ ದಲಿತರಿಗೆ ವಸತಿ ಸೌಲಭ್ಯ ಕಲ್ಪಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ತಂದರು, ಆರ್ಥಿಕವಾಗಿ ಹಿಂದುಳಿದ ಪೋಷಕರಿಗೆ ಆರ್ಥಿಕ ಸಹಾಯ ಮಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದ್ದರು. ಬೂಸಾ ಚಳುವಳಿ ಮೂಲಕ ರಾಜ್ಯದ ದಲಿತ ಚಳುವಳಿಗೆ ಹೊಸ ಸ್ವರೂಪ ಮತ್ತು ದಿಕ್ಕನ್ನು ನೀಡಿದರು. ತಮ್ಮ ಜೀವಿತಾವಧಿ ಯುದ್ದಕ್ಕೂ ಶೋಷಿತರ ಪರ ದನಿಯಾಗಿದ್ದ ಬಸವಲಿಂಗಪ್ಪ ನವರ ಸಾಮಾಜಿಕ ಚಿಂತನೆ, ದೂರ ದೃಷ್ಟಿ ಕುರಿತು ವಿದ್ಯಾರ್ಥಿಗಳ ಅಧ್ಯಯನ ನಡೆಸಬೇಕು. ಶೈಕ್ಷಣಿಕ ಸಂಶೋಧನಾ ನೆಲೆಗಟ್ಟಿನಲ್ಲಿ ಬಸವಲಿಂಗಪ್ಪನವರ ಅಧ್ಯಯನ ನಡೆಯಬೇಕು ಎಂದರು.
ನಿಕಟಪೂರ್ವ ಸಂಯೋಜಕರಾದ ಪ್ರೊ.ಟಿ.ಹೆಚ್ ಮೂರ್ತಿರವರು ಮಾತನಾಡಿ ಬಾಬಾಸಾಹೇಬರನ್ನು ಸಾಕ್ಷಿ ಪ್ರಜ್ಞೆಯನ್ನಾಗಿಸಿಕೊಂಡು ಬಿ.ಬಸವಲಿಂಗಪ್ಪನವರು ಆಡಳಿತ ನಡೆಸಿದ್ದಾರೆ. ಬಸವಲಿಂಗಪ್ಪನವರ ಆಶಯ ಪ್ರಸ್ತುತತೆಗೆ ಅವಶ್ಯಕವಾಗಿದೆ, ಸಮಸಮಾಜದ ನಿರ್ಮಾಣಕ್ಕೆ ಮಾದರಿಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಬಸವಲಿಂಗಪ್ಪನವ ಅಧ್ಯಯನ ಕೇಂದ್ರ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಬೆಳಕು ತೋರಿದೆ. ಆದರೂ ಶಾಸನಬದ್ದ ನಿಬಂಧನೆಗಳ ಕೊರತೆಯಿಂದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳ ಬೆಳವಣಿಗೆ ಕುಂಠಿತವಾಗಿದೆ. ವಿಶ್ವವಿದ್ಯಾಲಯ ಆಡಳಿತ ಮಂಡಳಿ ಈ ಕುರಿತು ಸೂಕ್ತ ಕ್ರಮ ವಹಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ ಮಾತನಾಡಿ ಬಸವಲಿಂಗಪ್ಪನವರು ಬೂಸಾ ಚಳುವಳಿ ಹಾಗೂ ಸಾಮಾಜಿಕ ಕ್ರಾಂತಿ ಮೂಲಕ ಸಮಾಜದ ಮೇಲೆ ಪ್ರಭಾವ ಬೀರಿದರು. ಅವರ ಆದರ್ಶ, ಸಾಧನೆ, ಚಿಂತನೆ ಮುಂದಿನ ತಲೆಮಾರಿಗೆ ಕೊಂಡಯ್ಯುವ ಕೆಲಸವಾಗಬೇಕು.
ಅಧ್ಯಯನ ಕೇಂದ್ರಗಳು ಜಯಂತಿಗಳಿಗೆ ಸೀಮಿತವಾಗಿರದೆ ಸಂಶೋಧನೆ ಮತ್ತು ಅಧ್ಯಯನಕ್ಕೆ ಪೂರಕವಾಗಿರಬೇಕು. ಆ ನಿಟ್ಟಿನಲ್ಲಿ ಬಸವಲಿಂಗಪ್ಪನವರ ಅಧ್ಯಯನ ಕೇಂದ್ರದ ಪುನಶ್ಚೇತನ, ಪುತ್ಥಳಿ ನಿರ್ಮಾಣ ಮತ್ತು ಗ್ರಂಥಾಲಯ ಸೇರಿದಂತೆ ಅಧ್ಯಯನ ಕೇಂದ್ರದ ಸಂಪೂರ್ಣ ಅಭಿವೃದ್ಧಿ ಎಲ್ಲರ ಜವಾಬ್ದಾರಿಯಾಗಿದೆ. ಶೀಘ್ರವಾಗಿ ಎಲ್ಲಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕುಲಸಚಿವರು ಕೆ.ಟಿ.ಶಾಂತಲಾ, ಹಿರಿಯ ಅಂಬೇಡ್ಕರ್‌ವಾದಿಗಳು ಬಿ.ಗೋಪಾಲ್, ಸಿಂಡಿಕೇಟ್ ಸದಸ್ಯರು ಬಿ. ಡಿ. ಗಂಗರಾಜ್, ಕ್ಷೇಮಾಭಿವೃದ್ಧಿ ನಿರ್ದೇಶಕರು ಪಿ.ಸಿ.ನಾಗೇಶ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ, ವಿವಿಯ ಭೋಧಕ – ಭೋಧಕೇತರ ವರ್ಗದವರು, ವಿದ್ಯಾರ್ಥಿ ಮುಖಂಡ ಚಂದ್ರು ಪೆರಿಯಾರ್, ಸಂಶೋಧನಾ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.


