
ಕಾರ್ಖಾನೆ ಮಾಲಿಕನ ಅಭಿವೃದ್ಧಿ ಮಾತ್ರ ಮಾಡುತ್ತದೆ: ದಾನಪ್ಪ ಕವಲೂರು

Only the factory owner will develop: Danappa Kavalur

ಉದ್ಯೋಗಕ್ಕಿಂತ ಆರೋಗ್ಯ ಆದ್ಯತೆಯಾಲಿ ಹೋರಾಟಕ್ಕೆ ಜನಬೆಂಬಲ
ಕೊಪ್ಪಳ: ನಗರಕ್ಕೆ ಹೊಂದಿಕೊಂಡ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ಇಂಡಿಯಾ, ವನ್ಯಾ, ಐ.ಎಲ್.ಸಿ. ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಗರಸಭೆ ಮುಂದೆ 59ನೇ ದಿನ ಧರಣಿ ಹೋರಾಟ ನಡೆಸಲಾಯಿತು.
ಇಂದಿನ ಧರಣಿಗೆ ಭಾಗ್ಯನಗರ ಜ್ಞಾನಬಂಧು ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿಗಳು ಬೆಂಬಲಿಸಿದರು.
ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರು ಧರಣಿ ಬೆಂಬಲಿಸಿ ಮಾತನಾಡುತ್ತಾ ಈ ಹೋರಾಟ ನಗರ ಮತ್ತು ಕಾರ್ಖಾನೆ ಮಾಲಿನ್ಯದಿಂದ ಪೀಡಿತರಾದ ಎಲ್ಲಾ ಹಳ್ಳಿಗಳ ಜನರ ಹೋರಾಟವಾಗಿದೆ. ಪ್ರತಿ ದಿನ ಸಾಂಕೇತಿಕವಾಗಿ ಇಲ್ಲಿ ಜನರು ಬಂದು ಬೆಂಬಲ ಮಾಡುತ್ತಿದ್ದಾರೆ. ಇಲ್ಲಿ ಬರುವವರು ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಜವಾಬ್ದಾರಿ ಇದ್ದವರು. ಮುಂದೆ ಜನ ಸಾಮಾನ್ಯರು ಸ್ಪೋಟಗೊಳ್ಳುವ ಕಾಲ ದೂರವಿಲ್ಲ. ಅಭಿವೃದ್ಧಿ ಪಾಠ ಹೇಳುತ್ತಿರುವ ಕಾರ್ಖಾನೆಗಳು ಸಂಪದ್ಭರಿತ ನಮ್ಮ ಕೃಷಿಯನ್ನು ನಾಶ ಮಾಡಿವೆ. ನಾಶಪಡಿಸಿದ ಪರಿಸರದ ಪುನರ್ನಿರ್ಮಾಣ, ಪುನಶ್ಚೇತನ ಮಾಡಲು ಸಾಧ್ಯವಿಲ್ಲ. ಈ ಕಾರ್ಖಾನೆಗಳು ಮಾಲಿಕನಿಗೆ ಅಪರಿಮಿತ ಲಾಭ ತಂದು ಕೊಡುತ್ತವಲ್ಲದೆ, ಭೂಮಿ ಕೊಟ್ಟ ರೈತರನ್ನು, ಗ್ರಾಮೀಣರನ್ನು ಗುಲಾಮರನ್ನಾಗಿ ಮಾಡುತ್ತವೆ. ಇದರ ಬಗ್ಗೆ ಎಚ್ಚರಿಕೆ ಇಟ್ಟುಕೊಂಡು ಈ ವೇದಿಕೆಯ ನಿರ್ದೇಶನದಲ್ಲಿ ತನು, ಮನ, ಧನದ ಸಮರ್ಪಣೆಯಿಂದ ಹೋರಾಡೋಣ. ಆಗ ಗೆಲುವು ನಮ್ಮದಾಗುತ್ತದೆ’ ಎಂದರು.
ಜ್ಞಾನ ಬಂಧು ಪಿಯು ಕಾಲೇಜು ಉಪ ಪ್ರಾಂಶುಪಾಲರಾದ ಮಂಜುನಾಥ ಚಿತ್ರಗಾರ ಮಾತನಾಡಿ ಪ್ರಕೃತಿಯನ್ನು ನಾವು ಎಷ್ಟು ಪ್ರಮಾಣದಲ್ಲಿ ಹಿಂಸಿಸುತ್ತೇವೆ ಅದರ ಪ್ರತಿಕಾರವನ್ನು ಹತ್ತುಪಟ್ಟು ತೆಗೆದುಕೊಳ್ಳುತ್ತದೆ. ಆಗ ಪ್ರಕೃತಿ ನಾಶ ಮಾಡಿದ ಯಾರೊಬ್ಬರೂ ಇದರ ಹೊಣೆ ಹೊತ್ತುಕೊಳ್ಳುವುದಿಲ್ಲ. ಆರೋಗ್ಯ ಕಡೆಗಣಿಸಿದ ಅಭಿವೃದ್ಧಿ ಯಾರಿಗೂ ಬೇಡ. ಜೀವ, ಆರೋಗ್ಯ ಮೊದಲು, ಆಮೇಲೆ ನಾವು ಕಲಿಸುವ ಶಿಕ್ಷಣ, ಉದ್ಯೋಗ ಉಪಯೋಗಕ್ಕೆ ಬರುತ್ತದೆ’ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಅವರು ಈ ಶಿಕ್ಷಣ ಸಂಸ್ಥೆಯ ಬೆಂಬಲಕ್ಕೆ ಅಭಿನಂದಿಸಿ ‘ಮುಂದಿನ ಪೀಳಿಗೆ ನಮ್ಮನ್ನು ಶಪಿಸಬಾರದು ಎಂದರೆ ಈ ಬಲ್ಡೋಟಾ ಅಲ್ಲದೆ ಇನ್ನಾವುದೇ ಕಾರ್ಖಾನೆಗಳ ವಿಸ್ತರಣೆ, ಹೊಸ ಸ್ಥಾಪನೆ ನಿರ್ದಾಕ್ಷಿಣ್ಯವಾಗಿ ವೀರೋಧಿಸೋಣ’ ಎಂದರು.
ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ನಮ್ಮ ಭವಿಷ್ಯದ ಅಪಾಯದ ಕುರಿತು ಮಾಹಿತಿ ನೀಡಿ, ಶಿಕ್ಷಣ ಸಂಸ್ಥೆ ಹೋರಾಟದ ಬೆಂಬಲಕ್ಕೆ ಬಂದಿದ್ದು ಅಭಿನಂದನೀಯ. ಇತರರೂ ಹೋರಾಟದ ಬೆಂಬಲಕ್ಕೆ ಬರಬೇಕೆಂದು ಕರೆ ನೀಡಿದರು.
ಧರಣಿ ನೇತೃತ್ವವಹಿಸಿದ ಪುಸ್ತಕ ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಕವಯಿತ್ರಿ ಪುಷ್ಪಲತಾ ಏಳುಭಾವಿ, ಚಿಂತಕಿ ಸಾವಿತ್ರಿ ಮುಜುಮದಾರ, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಮ್ಮ ಅಂಗಡಿ, ಹಾಡುಗಾರ ಎಸ್. ಮಹಾದೇವಪ್ಪ ಮಾವಿನಮಾಡು, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ ಇವರು ಇದ್ದರು.
ಧರಣಿಯಲ್ಲಿ ಜ್ಞಾನ ಬಂಧು ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲರು ಜ್ಯೋತಿ ಎಸ್.ಎಸ್ ಮತ್ತು ಜೆ. ರವೀಂದ್ರ ಪ್ರಕೃತಿ ಕಾಪಾಡುವ ಸಂದೇಶ ನೀಡಿ ಮಾತನಾಡಿದರು.
ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮಹೇಂದ್ರ ಉಭಾಳೆ, ಡಿ.ಎಸ್.ನಾಗರಾಜ, ವೀರೇಶ, ಶಿವಪ್ಪ ಜಲ್ಲಿ, ರಾಮಚಂದ್ರ ಕೆ, ರೆಣುಕಾರಾಜ್ ಕೆ, ಜ್ಯೋತಿ ಎಲ್.ಜಿ, ಲಕ್ಷ್ಮೀ, ಸುಜಾತಾ, ಸುಧಾ, ಮಂಜುಳಾ, ಸಂಜಮ್ಮ, ಕಾವ್ಯಾ, ಮಂಜುನಾಥ ಪಿ, ಪ್ರೇಮಾ ಅಂಗಡಿ, ಹನುಮಂತಪ್ಪ ಕಿನ್ನಾಳ, ನರೇಂದ್ರ ಪಾಟೀಲ್, ಆಟೋ ಮಂಜುನಾಥ ಭಾಗ್ಯನಗರ, ಶಿವನಗೌಡ ಪಾಟೀಲ್, ಭೀಮಪ್ಪ ಯಲಬುರ್ಗಾ, ಗಂಗಮ್ಮ ಕವಲೂರು, ಮಕ್ಬುಲ್ ರಾಯಚೂರು, ಶಿವಪ್ಪ ಹಡಪದ, ಆಂಜನೇಯ ಪಾಲ್ಗೊಂಡರು.


