
ವಿಬಿ ಜಿ ರಾಮ್ ಜಿ ದಲಿತರು, ಹಿಂದುಳಿದವರ ವಿರೋಧಿ: ಕೇಂದ್ರದ ವಿರುದ್ಧ ಮಹಾ ಸಂಗ್ರಾಮಕ್ಕೆ ಅಣಿಯಾಗಬೇಕು – ಡಾ. ಆನಂದ್ ಕುಮಾರ್

VB ji Ram ji is against Dalits, backward people: We should prepare for a great struggle against the Centre - Dr. Anand Kumar

ಬೆಂಗಳೂರು: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಪಡಿಸಿ, ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಷನ್ – ವಿಬಿ ಜಿ ರಾಮ್ ಜಿ ಎಂದು ಪರಿವರ್ತಿಸಿರುವುದು ದಲಿತ ವಿರೋಧಿ ನೀತಿಯಾಗಿದೆ. ಬಡವರು, ಹಿಂದುಳಿದ, ಗ್ರಾಮೀಣ ಜನರ ಬದುಕಿಗೆ ಕೊಳ್ಳಿ ಇಡುತ್ತಿರುವ ಈ ಯೋಜನೆ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ್ ಕುಮಾರ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಎಐಸಿಸಿ ಎಸ್.ಸಿ ಘಟಕದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಕೋಟ್ಯಂತರ ಬಡವರ ಉದ್ಯೋಗ ಕಸಿಯುವ, ದಲಿತರನ್ನು ದಮನಮಾಡುವ ಐತಿಹಾಸಿಕ ಪ್ರಮಾದಗಳ ವಿರುದ್ಧ ಧ್ವುನಿ ಎತ್ತದಿದ್ದರೆ ಅದು ನಮಗೆ ನಾವೇ ಮಾಡಿಕೊಳ್ಳುವ ಅಪಚಾರ. ಇಂದಿನ ಕಾಲಘಟ್ಟದಲ್ಲಿ ಮೌನವೇ ದೊಡ್ಡ ಅಪರಾಧ. ಭಾರತದ ಆತ್ಮವನ್ನು ಉಳಿಸಬೇಕಾದರೆ, ಬಡವರ ಹಕ್ಕುಗಳ ರಕ್ಷಣೆಯೇ ಮೊದಲ ಆದ್ಯತೆಯಾಗಬೇಕು. ವಿಬಿ-ಜಿ ರಾಮ್ ಜಿಯಂತಹ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಕರ್ತವ್ಯವಾಗಿದೆ.
ಇದೀಗ ನಾವು ಮಹಾ ಸಂಗ್ರಾಮಕ್ಕೆ ಅಣಿಯಾಗಬೇಕಿದೆ ಎಂದರು.
ಗ್ರಾಮೀಣ ಬಡ ಸಮುದಾಯಗಳಿಗೆ ಭಾರತದ ಏಕೈಕ ಖಾತರಿಪಡಿಸಿದ ಸುರಕ್ಷತಾ ಜಾಲವಾದ ನರೇಗಾವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಿದೆ. ಶೋಷಿತರನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿದೆ. ಮನ್ರೇಗಾ ಮೂಲಕ ಹಳ್ಳಿಗಳು ಅಭಿವೃದ್ಧಿ ಹೊಂದುತ್ತಿದ್ದವು. ಸುರಕ್ಷಿತ ಜೀವನೋಪಾಯ. ಘನತೆ, ಗೌರವದಿಂದ ಬದುಕು ಕಟ್ಟಿಕೊಳ್ಳುತ್ತಿರುವುದನ್ನು ಸಹಿಸಲಾಗದೇ ಪ್ರಧಾನಿ ನರೇಂದ್ರ ಮೋದಿ, ಇವರ ಉದ್ಯೋಗದ ಆಶಯಗಳಿಗೆ ಬೆಂಕಿ ಇಟ್ಟಿದ್ದಾರೆ.
ಇವರು ದಲಿತ ದ್ರೋಹಿಗಳು, ಇಂತಹ ದುರಾಡಳಿತ ಹೆಚ್ಚು ದಿನ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸಂವಿಧಾನ ಮತ್ತು ಬಡವರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿದೆ. ಕಾಂಗ್ರೆಸ್. ಭಾರತ ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ತತ್ವಗಳ ಮೇಲೆ ನಿರ್ಮಿತವಾದ ರಾಷ್ಟ್ರ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮೌಲ್ಯಗಳಿಗೆ ಧಕ್ಕೆ ತರುವಂತಹ ರಾಜಕೀಯ ಧೋರಣೆಗಳು ಹೆಚ್ಚಾಗುತ್ತಿವೆ.
ಇದು ಭಾರತದ ಆತ್ಮವನ್ನೇ ಕುಗ್ಗಿಸುವಂತಿದೆ. ಬಡವರು, ದಲಿತರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕ್ರಮಬದ್ಧವಾಗಿ ಕಸಿಯುವ ಪ್ರಯತ್ನಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ ಎಂದು ಡಾ. ಆನಂದ್ ಕುಮಾರ್ ಹೇಳಿದರು.

ಬಡವರ ಕಲ್ಯಾಣಕ್ಕಾಗಿ ರೂಪಿಸಲಾದ ಅನೇಕ ಯೋಜನೆಗಳು ಕಾಗದದಲ್ಲೇ ಉಳಿದುಕೊಂಡಿವೆ. ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಆಹಾರ ಭದ್ರತೆ ಎಂಬ ಮೂಲಭೂತ ಹಕ್ಕುಗಳು ಇಂದು ರಾಜಕೀಯ ಲಾಭದಾಟಕ್ಕೆ ಬಲಿಯಾಗಿವೆ. ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾಮಾನ್ಯ ನಾಗರಿಕನ ಧ್ವನಿ ಮರೆಮಾಚಲ್ಪಟ್ಟಿದೆ. ಇದರಿಂದ ಸಮಾಜದ ಅಸಮಾನತೆ ಮತ್ತಷ್ಟು ಗಾಢವಾಗುತ್ತಿದೆ ಎಂದರು.
ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ನೀಡುವ ಭರವಸೆಯನ್ನು ಹುಸಿಗೊಳಿಸಿ, ಸಂವಿಧಾನಾತ್ಮಕ ಮೌಲ್ಯಗಳ ಮೇಲೆ ಸರ್ಕಾರ ನೇರವಾಗಿ ದಾಳಿ ಮಾಡುತ್ತಿದೆ. ಇದು ಅಧಿಕಾರವನ್ನು ಕೇಂದ್ರೀಕರಣ ಮಾಡುವ ಹುನ್ನಾರವಾಗಿದೆ ಮತ್ತು ದಮನಕಾರಿ ಮನೋಭಾವವನ್ನು ಪ್ರತಿಬಿಂಬಿಸುತ್ತವೆ.
ಭಾರತದ ಆತ್ಮವು ಅದರ ಜನರಲ್ಲಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಬಡವರು ಈ ದೇಶದ ನಿಜವಾದ ಶಕ್ತಿ. ಇವರ ಹಕ್ಕುಗಳನ್ನು ನಿರ್ಲಕ್ಷಿಸುವ ಅಥವಾ ಕಸಿಯುವ ಯಾವುದೇ ರಾಜಕಾರಣ ದೀರ್ಘಾವಧಿಯಲ್ಲಿ ದೇಶದ ಪ್ರಗತಿಗೆ ಮಾರಕವಾಗುತ್ತದೆ.
ಆದ್ದರಿಂದ ಜನರು ಜಾಗೃತರಾಗಬೇಕು, ಪ್ರಶ್ನಿಸಬೇಕು ಮತ್ತು ನ್ಯಾಯಯುತ ಆಡಳಿತಕ್ಕಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
ದೇಶದಲ್ಲಿ ಡಿಜಿಟಲ್ ಸುಲಿಗೆ ಮಿತಿ ಮೀರಿದೆ. ಎಲ್ಲೆಡೆ ಆನ್ ಲೈನ್ ಮೂಲಕ ಹಗಲು ದರೋಡೆ ನಡೆಯುತ್ತಿದ್ದು, ಕಾರ್ಪೋರೇಟ್ ಸಂಸ್ಕೃತಿ ಕೇಕೆ ಹಾಕಿ ಅಟ್ಟಹಾಸ ಮೆರೆಯುತ್ತಿದೆ.
ನೂರಾರು ಕೋಟಿ ಬಡವರ ಹಣವನ್ನು ಯಾಮಾರಿಸಿ ಕ್ಷಣಾರ್ಧದಲ್ಲಿ ಮಂಗ ಮಾಯ ಮಾಡಲಾಗುತ್ತಿದೆ. ಆದರೆ ಇತ್ತ ಮನ್ರೇಗಾ ಮೂಲಕ ಕೂಲಿ ಮಾಡಿ ಬದುಕುವವರಿಗೂ ಉಳಿಗಾಲ ಇಲ್ಲದಂತಾಗಿದೆ ಎಂದು ಡಾ. ಆನಂದ್ ಕುಮಾರ್ ಹೇಳಿದರು


