
ಗೃಹ ಸಚಿವರ ತವರಿನಲ್ಲಿ ದಲಿತರ ಗೋಳನ್ನು ಕೇಳುವವರು ಯಾರು..?
ಸಾಂಕ್ರಾಮಿಕ ರೋಗಗಳ ತಾಣವಾದ ಗೊರಗೊಂಡನಹಳ್ಳಿ ಏಕೆ ಕಾಲೋನಿ.

ದಲಿತರ ಭೂಮಿ ಮತ್ತು ಸರ್ಕಾರಿ ರಸ್ತೆ ಜಾಗವನ್ನು ಕಬಳಿಸಿರುವ ಗೊರಗೊಂಡನಹಳ್ಳಿ ಸವರ್ಣಿಯರು.
ದಲಿತರು ರಸ್ತೆಯಲ್ಲಿ ಓಡಾಡದಂತೆ ಶೆಡ್ಡು ಹಾಗೂ ಬೇಲಿ ಕಂಬಗಳ ನಿರ್ಮಾಣ: ತೆರವಿಗೆ ದಲಿತ ಕುಟುಂಬಗಳ ಆಗ್ರಹ.
ದಲಿತ ಕುಟುಂಬಗಳ ಮೇಲೆ ಚೇರ್ಮನ್ ಶಿವನಂಜಪ್ಪ ಕುಟುಂಬದವರ ನಿರಂತರ ದೌರ್ಜನ್ಯ, ದಬ್ಬಾಳಿಕೆ ಹಾಗೂ ಪಾಳೆಗಾರಿಕೆ.
The Goragondanahalli Savarnis have encroached upon Dalit land and government road space.

ತಿಪಟೂರು: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ತವರಿನ ನಗರದ 31ನೇ ವಾರ್ಡ್ ನ ಗೊರಗೊಂಡನಹಳ್ಳಿಯ ಎ.ಕೆ. ಕಾಲೋನಿಯಲ್ಲಿ ನಿರಂತರ ಸವರ್ಣಿಯರ ದೌರ್ಜನ್ಯಕ್ಕೆ, ಭಯದಿಂದ ಬದುಕುವ ಸ್ಥಿತಿಗೆ ಬಂದಂತಾಗಿದೆ. ಸರ್ವೆ ನಂಬರ್ 93/4A2 ರಲ್ಲಿ ದಲಿತರು ರಸ್ತೆಯಲ್ಲಿ ಓಡಾಡದಂತೆ ಶೆಡ್ಡು ಹಾಗೂ ಬೇಲಿ ಕಂಬಗಳನ್ನು ಅದೇ ಗ್ರಾಮದ ಚೇರ್ಮನ್ ಶಿವನಂಜಪ್ಪನವರ ಮಕ್ಕಳು ಮತ್ತು ಮೊಮ್ಮಕ್ಕಳು ನಿರ್ಮಾಣ ಮಾಡಿಕೊಂಡು ರಸ್ತೆಗೆ ಅಡ್ಡ ಪಡಿಸುತ್ತಾ, ದೌರ್ಜನ್ಯ ದಬ್ಬಾಳಿಕೆ ಹಾಗೂ ಪಾಳೆಗಾರಿಕೆಯಿಂದ ನಾವುಗಳು ನಲುಗಿ ಹೋಗಿದ್ದು, ನಮಗೆ ಸೂಕ್ತ ರಕ್ಷಣೆ ನೀಡುವುದರ ಮೂಲಕ ಹಾಗೂ ನಾವುಗಳು ರಸ್ತೆಯಲ್ಲಿ ಓಡಾಡಲು ಅನುವು ಮಾಡಿಕೊಡುವಂತೆ,ತಹಶೀಲ್ದಾರ್ ಮತ್ತು ನಗರಸಭೆಗೆ ದೂರು ನೀಡಿದ್ದು, ಸೆಪ್ಟಂಬರ್ ತಿಂಗಳಿನಲ್ಲಿ ಇಲಾಖೆಯವರು ಬಂದು ಜಾಗದ ನಕ್ಷೆಯನ್ನು ಗುರುತಿಸಿರುತ್ತಾರೆ. ತದನಂತರ ರಸ್ತೆ ಮತ್ತು ದಲಿತರ ಜಮೀನು, ನಿವೇಶನ ಹಾಗೂ ಕೆಂಪಯ್ಯ ಕುಟುಂಬದವರಿಗೆ ಸೇರಿದ ಜಮೀನನ್ನು ಆಕ್ರಮಿಸಿಕೊಂಡಿರುವುದು ಗೊತ್ತಾಗಿದ್ದು, ಶಿವನಂಜಪ್ಪ ಕುಟುಂಬದವರಿಗೆ ನೋಟಿಸ್ ಜಾರಿ ಮಾಡಿ, ಸರ್ವೆಗೆ ಆಗಮಿಸಿದ ಸಂದರ್ಭದಲ್ಲಿ ಇವರುಗಳು ಯಾರು ಕೂಡ ಹಾಜರಾಗಿರುವುದಿಲ್ಲ. ಆದ್ದರಿಂದ ಶಿವನಂಜಪ್ಪನವರ ಕುಟುಂಬದವರಾದ ರಂಗನಾಥ, ದೊರೆರಾಜು, ಪವನ್ ಕುಮಾರ್ ಮೋಹನ್ ಕುಮಾರ್ ಸೇರಿದಂತೆ ಇನ್ನುಳಿದ ಕೆಲವರ ಮೇಲೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಪರಿಶಿಷ್ಟ ಜಾತಿಯ ಮೇಲೆ ಮಾಡಿರುವ ಅನ್ಯಾಯ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಂಡು, ಕರ್ನಾಟಕ ವಿಶೇಷ ಭೂ ಕಬಳಿಕೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ಭೂ ಕಬಳಿಕೆ ಮಾಡಿಕೊಂಡಿರುವವರ ಮೇಲೆ ಕ್ರಮ ಜರುಗಿಸುವಂತೆ ದಲಿತ ಜನಾಂಗದ ಕೆಂಪಯ್ಯ ಕುಟುಂಬದ ಕಾಂತರಾಜು ಮನವಿ ಮಾಡಿದ್ದಾರೆ.
ದಲಿತರಿಗೆ ಸೇರಿರುವ ಭೂಮಿಯಲ್ಲಿ ಹಾಗೂ ರಸ್ತೆಗೆ ಅಡ್ಡಲಾಗಿ ಅಕ್ರಮವಾಗಿ ಹಸುವಿನ ಸಾಕಾಣಿಕೆ ಶೆಡ್ಡು ಹಾಗೂ ರಸ್ತೆಗೆ ತಂತಿ ಬೇಲಿಗಳನ್ನು ಉದ್ದೇಶಪೂರ್ವಕವಾಗಿ ಹಾಕಿದ್ದು, ದಲಿತರಾದ ನಾವುಗಳು ವಾಸಿಸುವ ಮನೆ ಪಕ್ಕದಲ್ಲಿ ತಿಪ್ಪೆಗುಂಡಿ ಮಾಡಿಕೊಂಡು ಶೆಡ್ಡಿನಿಂದ ಬರುವ ಗಂಜಲ ಸೇರಿದಂತೆ ಗಲೀಜನ್ನು ನಮ್ಮ ಮನೆ ಮುಂಭಾಗ ನೇರವಾಗಿ ಚರಂಡಿಗೆ ಮತ್ತು ರಸ್ತೆಗೆ ಬಿಡುತ್ತಿದ್ದಾರೆ. ಇದರಿಂದ ನೊಣ, ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ನಮ್ಮ ಏಕೆ ಕಾಲೋನಿ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ವಯೋವೃದ್ಧರು, ಚಿಕ್ಕ ಮಕ್ಕಳು ಮತ್ತು ಹೆಂಗಸರು ದಿನನಿತ್ಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಸುಮಾರು ಮೂರು ತಿಂಗಳಾದ ಬಳಿಕ ಇಂದು ಸರ್ವೆ ಇಲಾಖೆಯ ಸಿಬ್ಬಂದಿ ಮತ್ತು ನಗರಸಭೆಯ ಕೆಲವು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ,ಪೊಲೀಸರ ಬಂದೋಬಸ್ತಿನಲ್ಲಿ ಸರ್ವೆ ಮಾಡಿ ಕಲ್ಲು ಹಾಕಿರುತ್ತಾರೆ.ಜಾಗ ಒತ್ತುವರಿ ಆಗಿರುವುದರ ಬಗ್ಗೆ ದಲಿತ ಕಾಲೋನಿಯ ಮುಖಂಡರಿಗೆ ಮತ್ತು ಹಾಗೂ ಸ್ಥಳಕ್ಕೆ ಆಗಮಿಸಿದ್ದ ದಲಿತ ಪರ ಸಂಘಟನೆಗಳ ಮುಖಂಡರಿಗೆ ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಬೇಗ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಮತ್ತು ನಗರಸಭೆ ಪೌರಾಯುಕ್ತರು ಪರಿಹಾರ ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಇಲಾಖೆ ಮುಂಭಾಗ ದಯ ಮರಣ ನೀಡುವಂತೆ ಕೋರುತ್ತೇವೆ ಎಂದು ಏಕೆ ಕಾಲೋನಿಯ ದಲಿತರು ಮತ್ತು ಕೆಂಪಯ್ಯ ಕುಟುಂಬದವರು ಪತ್ರಿಕೆಯವರಿಗೆ ತಿಳಿಸಿದರು.
ಈಗಲಾದರೂ ಒತ್ತುವರಿ ಮತ್ತು ರಸ್ತೆಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಶೆಡ್ ಅನ್ನು ತೆಗೆದು ಹಾಕಿಸುವಲ್ಲಿ ಜಿಲ್ಲಾ, ತಾಲೂಕು ಮತ್ತು ನಗರಸಭೆ ಮುಂದಾಗುತ್ತದೆಯೋ.? ಅಥವಾ ಪಟ್ಟಭದ್ರ ಹಿತಾಸಕ್ತಿಗೆ ಮಣೆ ಹಾಕುತ್ತಾರೋ.? ಗೊತ್ತಾಗುತ್ತಿಲ್ಲ.! ಕಾದು ನೋಡಬೇಕಾಗಿದೆ.ಸದ್ಯದಲ್ಲೇ ಗೊತ್ತಾಗಬಹುದು.


