
ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಕಾನೂನು ಬಾಹಿರ ಶಿಕ್ಷಾರ್ಯ ಅಪರಾಧ – ನ್ಯಾ. ಸದಾನಂದ ನಾಯ್ಕ್

Fetal sex determination and foeticide are illegal and punishable offences - Justice Sadananda Naik

ಕೊಪ್ಪಳ ಡಿಸೆಂಬರ್ 20 (ಕರ್ನಾಟಕ ವಾರ್ತೆ): ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯು ಕಾನೂನು ಬಾಹಿರ ಮತ್ತು ಶಿಕ್ಷಾರ್ಯ ಅಪರಾಧವಾಗಿದೆ ಎಂದು ಗೌರವಾನ್ವಿತ ಗಂಗಾವತಿಯ ಒಂದನೇ ಜಿಲ್ಲಾ & ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.
ಅವರು ಶುಕ್ರವಾರ ಗಂಗಾವತಿ ಉಪವಿಭಾಗ ಆಸ್ಪತ್ರೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಉಪವಿಭಾಗ ಆಸ್ಪತ್ರೆ, ಗಂಗಾವತಿ, ಇವರ ಸಂಯುಕ್ತಾಶ್ರಯದಲ್ಲಿ “ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ಕಾಯ್ದೆ 1994ರ ಕುರಿತು, ಸರ್ಕಾರಿ ಮತ್ತು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ತಜ್ಞವೈದ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಗಂಡುಮಕ್ಕಳ ಸಂಖ್ಯೆಗಿಂತ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಗರ್ಭದಲ್ಲಿರುವ ಮಗು ಸರಿಯಾಗಿ ಬೆಳವಣಿಗೆಯಾಗದಿದ್ದರೆ, ಅಂಗವಿಕಲತೆ ಇದ್ದರೆ ಹಾಗೂ ತಾಯಿಯ ಜೀವಕ್ಕೆ ತೊಂದರೆ ಉಂಟುಮಾಡುತ್ತಿದ್ದರೆ ಅಂತಹ ಗರ್ಭವನ್ನು ಕಾನೂನಾತ್ಮಕವಾಗಿ ವೈದ್ಯಕೀಯ ಗರ್ಭಪಾತ ಮಾಡಿಸಬಹುದು. ಇದನ್ನು ಹೊರತುಪಡಿಸಿ ಯಾವುದೇ ತಜ್ಞವೈದ್ಯರು ಮತ್ತು ಸಾರ್ವಜನಿಕರು ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡಿ, ಭ್ರೂಣ ಹತ್ಯೆ ಮಾಡಿಸಿದರೆ ಅದು ಕಾನೂನು ಬಾಹಿರ ಮತ್ತು ಶಿಕ್ಷಾರ್ಯ ಅಪರಾಧವಾಗಿದೆ. ಒಂದು ವೇಳೆ ಹೆಣ್ಣು ಭ್ರೂಣ ಹತ್ಯೆ ಮಾಡಿದರೆ ಕಾನೂನು ಅಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಲಿಂಗ ಬೇದಬಾವ ಮಾಡದೇ ಸಮಾನತೆ ಕಾಪಾಡಬೇಕು. ನಮ್ಮ ದೇಶದಲ್ಲಿ ಋಗ್ವೇದ ಕಾಲದಿಂದಲೂ ಹೆಣ್ಣು ಮಕ್ಕಳನ್ನು ರಕ್ಷಿಸಿದ ಹಲವಾರು ನಿದರ್ಶನಗಳಿವೆ. ಹೆಣ್ಣು ಸಮಾಜದ ಕಣ್ಣು, ಮನೆಯ ನಂದಾದೀಪ ಎಲ್ಲಾ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ಗೌರವ ಭಾವನೆಯಿಂದ ಕಾಣಬೇಕು. ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಕೀಳಾಗಿ ನೋಡಬಾರದು. ಪ್ರತಿಯೊಬ್ಬ ಪಾಲಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಮತ್ತು ಬಾಲ್ಯವಿವಾಹ ನಡೆಯದಂತೆ ಎಲ್ಲರೂ ಜಾಗೃತ ವಹಿಸಬೇಕೆಂದು ಹೇಳಿದರು.
ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಅವರು ಮಾತನಾಡಿ, ಹೆಣ್ಣಮಕ್ಕಳ ರಕ್ಷಣೆ ಸಮಾಜದ ಜವಾಬ್ದಾರಿಯಾಗಿದೆ. ಕುಟುಂಬದ ಆಸ್ತಿ, ಹೆಣ್ಣಮಕ್ಕಳೆಂದರೆ ತಪ್ಪಾಗಲಾರದು. ಇಂದು ಎಲ್ಲಾ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡಿ ತೋರಿಸಿದ್ದಾರೆ. ಶಿಕ್ಷಣ, ರಾಜಕೀಯ, ಕ್ರೀಡೆ, ವೈದ್ಯಕೀಯ ರಂಗಗಳಲ್ಲಿ ಇನ್ನೂ ಮುಂತಾದ ಸ್ಥಳಗಳಲ್ಲಿ, ಹೆಣ್ಣುಮಕ್ಕಳು ಕೆಲಸ ಮಾಡಿ, ಚಾಪು ಮೂಡಿಸಿದ್ದಾರೆ. ನಾವೆಲ್ಲರೂ ಹೆಣ್ಣು-ಗಂಡು ಎಂಬ ಬೇದಬಾವ ಮಾಡದೇ ಸಮಾನವಾಗಿ ಜೀವಿಸೋಣ. ಯಾವುದೇ ಕಾರಣಕ್ಕೂ ಹೆಣ್ಣು ಭ್ರೂಣ ಹತ್ಯೆಯಾಗದಂತೆ ಜಾಗೃತಿ ಮೂಡಿಸೋಣ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್. ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶ, ಮಹತ್ವ, ಜಿಲ್ಲೆಯ ವಿವಿಧ ತಾಲೂಕಾಗಳ ಲಿಂಗಾನುಪಾತದ ಅಂಕಿ ಅಂಶಗಳನ್ನು ಹಾಗೂ ಜೀವನದ ಮೌಲ್ಯಗಳನ್ನು ಕುರಿತು ವಿವರಿಸಿದರು. ನಂತರ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಗಂಗಾವತಿ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ನಾಗೇಶ ಪಾಟೀಲ್, ಜಿಲ್ಲಾ ಆರ್.ಸಿ.ಹೆಚ್ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಸರ್ವೇಕ್ಷಣಾ ಮತ್ತು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ. ಗೋನಾಳು ಕುಮಾರಸ್ವಾಮಿ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಗೌರಿಶಂಕರ, ಡಾ. ಆನಂದ ಜಿ., ಡಾ. ರಾಮಾಂಜನೇಯ ಹಾಗೂ ಡಾ. ನೇತ್ರಾವತಿ, ಗಂಗಾವತಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸ್ಮಿತಾ ಐಲಿ, ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ. ಈಶ್ವರ ಸವಡಿ ಸೇರಿದಂತೆ ಸರ್ಕಾರಿ, ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ತಜ್ಞವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿ, ನಿರೂಪಿಸಿದರು.
****




