ಅಪರಾಧಗಳ ವಿರುದ್ಧ ಹೋರಾಡಲು ಮಹಾನ್ ವ್ಯಕ್ತಿಗಳ ವಿಚಾರ ಮತ್ತು ಆದರ್ಶ ಅತ್ಯವಶ್ಯಕ – ವಿಜಯಲಕ್ಷ್ಮಿ, ರಾಜ್ಯ ಸೆಕ್ರೆಟರಿಯೇಟ್ ಸದಸ್ಯರು, AIMSS
The ideas and ideals of great people are essential to fight crime - Vijayalakshmi, State Secretariat Member, AIMSS

ಕೊಪ್ಪಳ :ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ‘ನಿರ್ಭಯಾ ದಿನ’ದ ಪ್ರಯುಕ್ತ AIMSS ಹಾಗೂ AIDYO ಸಂಘಟನೆಗಳ ವತಿಯಿಂದ ಜಂಟಿಯಾಗಿ ರಾಮುಲು ನರ್ಸಿಂಗ್ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
AIMSS ನ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡುತ್ತಾ “ನಿರ್ಭಯಾ ಘಟನೆ ನಡೆದು ಇಂದಿಗೆ 13 ವರ್ಷಗಳಾಯಿತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ತುಕ್ಕು ಹಿಡಿದ ಕಬ್ಬಿಣದ ರಾಡನ್ನು ದೇಹದೊಳಗೆ ತೂರಿಸಿ ಕ್ರೂರವಾಗಿ ಹಲ್ಲೆ ಮಾಡಿ, ನಗ್ನ ದೇಹವನ್ನು ದಾರಿ ಮಧ್ಯೆ ಬಿಸಾಡಿ ಹೋಗಿದ್ದರು ರಕ್ಕಸರು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಈ ಘಟನೆ. ವಿದ್ಯಾರ್ಥಿ, ಯುವಜನರು, ಮಹಿಳೆಯರು ಸೇರಿದಂತೆ ಇಡೀ ದೇಶದ ಜನತೆ ಪೊಲೀಸ್ ಲಾಠಿ ಚಾರ್ಜ್, ಜಲ ಫಿರಂಗಿಯನ್ನು ಎದುರಿಸಿ ನಿರ್ಭಯಾಳಿಗೆ ನ್ಯಾಯ ಬೇಕು ಎಂದು ಬೀದಿಗಿಳಿದಿದ್ದರು. ಇದಕ್ಕಿಂತಲೂ ದೊಡ್ಡ ಹೋರಾಟಗಳು ಇಂದು ಬೆಳೆಯಬೇಕಾಗಿದೆ. ಏಕೆಂದರೆ ದಿನೇ ದಿನೇ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಲೇ ಅತ್ಯಂತ ವಿಕೃತ ರೂಪ ತಳೆಯುತ್ತಿವೆ. ಹಸುಗೂಸಿನಿಂದ ಹಿಡಿದು ವಯೋ ವೃದ್ಧೆಯ ಮೇಲೂ ನಡೆಯುವ ಅಪರಾಧಗಳು ಈ ದೇಶದಲ್ಲಿ ಹೆಣ್ಣುಮಕ್ಕಳು ಎಷ್ಟು ಅಸುರಕ್ಷಿತರು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದಕ್ಕೆ ಮುಖ್ಯ ಕಾರಣ ಇಂದು ವ್ಯಾಪಾಕವಾಗಿರುವ ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲತೆ ಹಾಗೂ ಮದ್ಯ – ಮಾದಕ ವಸ್ತುಗಳ ಜಾಲ ವಿದ್ಯಾರ್ಥಿ – ಯುವಕರಲ್ಲಿನ ಮೌಲ್ಯಗಳನ್ನು ಹೊಸಕಿ ಹಾಕಿ ಮೃಗೀಯ ಮಟ್ಟಕ್ಕೆ ಇಳಿಸುತ್ತಿದೆ. ನೈತಿಕ ಬೆನ್ನೆಲುಬು ಮುರಿದು ಅಪಾರಧಗಳಿಗೆ ಪ್ರೇರೇಪಿಸುತ್ತಿದೆ. ಇಂತಹ ಹುನ್ನಾರದ ಹಿಂದಿರುವ ಸರ್ಕಾರಗಳು ಮತ್ತು ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿ, ಯುವಜನರು, ಪ್ರಜ್ಞಾವಂತ ಜನತೆ ಒಗ್ಗಟ್ಟಾಗಿ ಹೋರಾಟ ಕಟ್ಟಿ ಹೊಸ ಸಮಾಜ ತರುವುದು ಘಳಿಗೆಯ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಮುಂದೆ ಬಂದು ಸಮಾಜ ಬದಲಾವಣೆಯ ಮಹಾನ್ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಕರೆ ನೀಡಿದರು.
AIMSS ನ ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಸೋಮಶೇಖರ, ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka