Prevent air pollution by maintaining the condition of vehicles – Prabhuswamy Hiremath
ಕೊಪ್ಪಳ ಡಿಸೆಂಬರ್ 09 (ಕರ್ನಾಟಕ ವಾರ್ತೆ): ಸಾರ್ವಜನಿಕರು ತಮ್ಮ ವಾಹನಗಳಿಗೆ ಯಾವುದೇ ಕಲಬೆರಿಕೆಯಿಲ್ಲದ ಇಂಧನವನ್ನು ಉಪಯೋಗಿಸಿ ಅವುಗಳ ಸುಸ್ಥಿತಿಯನ್ನು ಕಾಪಾಡಿಕೊಂಡು ವಾಯು ಮಾಲಿನ್ಯವನ್ನು ತಡೆಕಟ್ಟಬೇಕೆಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಹೇಳಿದರು.
ಅವರು ಇತ್ತೀಚೆಗೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಾಹನಗಳು ಹೊರಸೂಸುವ ಹೊಗೆಯಿಂದ ಗಾಳಿಯು ವಿಷಕಾರಿಯಾಗುತ್ತದೆ. ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳಾದ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ಹೈಡ್ರೋಕಾರ್ಬನ್, ಆಕ್ಸೈಡ್ ಆಫ್ ನೈಟ್ರೋಜನ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಸ್ಪೆಂಡೆಡ್ ಪಾರ್ಟಿಕುಲೇಟ್ ಮ್ಯಾರ್‌ಗಳಿಂದ ಮಾನವನ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳು ಆಗುತ್ತವೆ. ಹಾಗಾಗಿ ಹೆಚ್ಚು ಹೊಗೆ ಬಿಡುವ ವಾಹನಗಳ ಬಳಕೆಯನ್ನು ಮಾಡಬಾರದು. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದರು.
ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಅಮರ್ ಅವರು, ವಿವಿಧ ಬಗೆಯ ಮಾಲಿನ್ಯದ ಬಗ್ಗೆ ವಿವರಿಸಿ, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತಾ ವಾಯುಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಹಿತಿ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕ್ಷಕ ಉಮೇಶ್ ಇಟಗಿ ಅವರು, ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸುವ ವಿಧಾನಗಳ ಬಗ್ಗೆ ವಿವರಣೆ ನೀಡಿದರು.
*ಮಕ್ಕಳಿಗೆ ಪ್ರಶಸ್ತಿ:* ವಾಯು ಮಾಲಿನ್ಯ ನಿಯಂತ್ರಣ ಕುರಿತು ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಮಕ್ಕಳಿಗೆ ಪ್ರಶಸ್ತಿ ನೀಡಿ, ಪುರಸ್ಕರಿಸಲಾಯಿತು.
ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೊಟಾರು ವಾಹನ ನಿರೀಕ್ಷಕ ಜಿ.ಎಂ ಸುರೇಶ್ ಹಾಗೂ ಮೋಟಾರು ವಾಹನ ನಿರೀಕ್ಷಕ ವಿಜೇಂದ್ರ ಡವಳಗಿ ಸೇರಿದಂತೆ ಕಚೇರಿ ಅಧೀಕ್ಷಕರು ಮತ್ತು ಇತರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka