Safety measures to prevent the menace of stray dogs in urban and rural areas
ಕೊಪ್ಪಳ ನವೆಂಬರ್ 25 (ಕರ್ನಾಟಕ ವಾರ್ತೆ): ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸುರಕ್ಷತಾ ಕ್ರಮ ಕೈಗೊಳ್ಳುವ ಕುರಿತು ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿ ಮಾಡುವ ಕುರಿತು ಕೊಪ್ಪಳ ತಾಲೂಕ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ತಹಶೀಲ್ದಾರ ವಿಠ್ಠಲ್ ಚೌಗಲಾ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ರವರ ಅಧ್ಯಕ್ಷತೆಯಲ್ಲಿ ತಾಲೂಕ ನೋಡಲ್ ಅಧಿಕಾರಿಗಳ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ಜರುಗಿತು.
ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಪ್ರತಿ ಸಂಸ್ಥೆಯಿಂದ ಬೀದಿ ನಾಯಿಗಳ ಸಂಖ್ಯೆಯನ್ನು ಪಡೆಯುವದು. ಒಂದು ವೇಳೆ ಬೀದಿ ನಾಯಿಗಳು ಇದ್ದಲ್ಲಿ ಸ್ಥಳಾಂತರಿಸಲು ಕೂಡಲೇ ಕ್ರಮವಹಿಸಲಾಗುವದು ಎಂದು ಸಂಬಂಧಿಸಿದವರಿಗೆ ನೋಟಿಸ್ ಮೂಲಕ ಮಾಹಿತಿ ನೀಡಬೇಕು. ಸಂಸ್ಥೆಯ ಆವರಣಕ್ಕೆ ಬೀದಿ ನಾಯಿ ಪ್ರವೇಶಿಸದಂತೆ ಶಾಲೆ, ವಸತಿ ನಿಲಯ ಆವರಣಕ್ಕೆ ಕಾಂಪೌಂಡ್ ನಿರ್ಮಾಣ, ತಂತಿ ಬೇಲಿ ನಿರ್ಮಾಣ ಇತ್ಯಾದಿ ಕ್ರಮವಹಿಸಬೇಕೆಂದರು.
ಪ್ರತಿ ದಿನ ಹಸಿಕಸ ಮತ್ತು ಒಣಕಸ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿದೆ ಇಲ್ಲ ಮತ್ತು ಸಂಸ್ಥೆಯ ಆವರಣದಲ್ಲಿ ಘನತ್ಯಾಜ್ಯ ವಸ್ತು ಸುತ್ತ-ಮುತ್ತಲು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ಕುರಿತು ನೋಡಲ್ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನಾ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಬಂಧಿಸುವದನ್ನು ಮೇಲ್ವಿಚಾರಣೆ ಮಾಡಲು ತಮ್ಮ ಸಂಸ್ಥೆ ವತಿಯಿಂದ ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವಂತೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿರುತ್ತದೆ. ಒಂದು ವೇಳೆ ಬೀದಿ ನಾಯಿಗಳು ವಾಸ ಮಾಡಲು ಅವಕಾಶ ನೀಡಿದಲ್ಲಿ ಅವುಗಳನ್ನು ಸ್ಥಳಾಂತರಿಸುವ ವೆಚ್ಚವನ್ನು ಸಂಸ್ಥೆಗಳಿಂದ ಭರಣ ಮಾಡುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವ ಮೂಲಕ ನಗರ ಸ್ಥಳೀಯ ಸಂಸ್ಥೆಯವರು ಕ್ರಮವಹಿಸುವಂತೆ ಸಭೆಯಲ್ಲಿ ಸೂಚಿಸಿದರು.
ತಹಶೀಲ್ದಾರ ವಿಠ್ಠಲ್ ಚೌಗಲಾ ಅವರು ಮಾತನಾಡಿ, ಸುಪ್ರಿಂ ಕೊರ್ಟ ಆದೇಶ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಉಲ್ಲಂಘನೆಯಾದ ಮೇಲೆ ಕ್ರಮವಾಗುವದು ನಿಶ್ಚಿತ ಎಂದರು.
ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖಾಧಿಕಾರಿ ವಿನೋದ್ ಅವರು ಮಾತನಾಡಿ ಗ್ರಾಮ ಪಂಚಾಯತಿ ಹಂತದಲ್ಲಿ ಬೀದಿ ನಾಯಿಗಳ ಕುರಿತು ಜಾಗೃತಿ ಮೂಡಿಸಲು ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ನಗರಸಭೆ ಪೌರಾಯುಕ್ತರಾದ ವೆಂಕಟೇಶ ನಾಗನೂರು, ಕ್ಷೇತ್ರ ಶಿಕ್ಷಣಾಧಿಕಾರಿ ಹನಮಂತಪ್ಪ ಎಚ್., ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಗುಡಿ, ತಾಲೂಕ ಮಟ್ಟದ ಅಧಿಕಾರಿಗಳು, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
