ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ AIMSS ಖಂಡಿಸುತ್ತದೆ
AIMSS condemns the incident of gang rape of a woman
ಕೊಪ್ಪಳ: ಕೊಡಬೇಕಿದ್ದ ಬಾಕಿ ಹಣ ಪಡೆದುಕೊಳ್ಳಲು ಹೊಸಪೇಟೆಯಿಂದ ಬಂದಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS) ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಅತ್ಯುಗ್ರವಾಗಿ ಖಂಡಿಸುತ್ತದೆ.
ಮಹಿಳೆಗೆ ಆರು ತಿಂಗಳ ಹಿಂದೆ ಪರಿಚಿತನಾಗಿದ್ದ ಆರೋಪಿ ಸಾಲ ಹಿಂದಿರುಗಿಸುವ ನೆಪದಲ್ಲಿ ಮಹಿಳೆಯನ್ನು ಕರೆಸಿಕೊಂಡು ಕುಷ್ಟಗಿ-ಯಲಬುರ್ಗಾ ರಸ್ತೆಯ ಮದ್ಲೂರ ಸಮೀಪದಲ್ಲಿರುವ ಹೊಲದ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆತನ ಮೂವರು ಸ್ನೇಹಿತರು ಸೇರಿ ನಾಲ್ಕು ಜನ ಜ್ಯೂಸ್ ಎಂದು ನಂಬಿಸಿ ತನಗೆ ಮದ್ಯ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಇದು ಇಷ್ಟಕ್ಕೆ ಸೀಮಿತಗೊಳ್ಳದೆ ಶೀಘ್ರಗತಿಯಲ್ಲಿ ತನಿಖೆಯನ್ನು ನಡೆಸಿ ಆರೋಪಿಗಳಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು, ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಎ ಐ ಎಂ ಎಸ್ ಎಸ್ ಆಗ್ರಹಿಸುತ್ತದೆ.
ಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳು ಇಚ್ಛಾಶಕ್ತಿ ಹೊಂದಿಲ್ಲದೆ ಇರುವುದು ಘಟನೆಗಳು ಹೆಚ್ಚಾಗಲು ಕಾರಣವಾಗಿದೆ. ಸಮಾಜದಲ್ಲಿ ಮೌಲ್ಯಗಳ ಕುಸಿತದಿಂದಾಗುತ್ತಿರುವ ಸಾಂಸ್ಕೃತಿಕ ಅವನತಿಯ ಗುರುತುಗಳೇ ಇಂತಹ ಪ್ರಕರಣಗಳು. ಜೊತೆಗೆ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ, ಪೋರ್ನ್ ವೆಬ್ಸೈಟ್ ಗಳು, ಮದ್ಯ ಮಾದಕ ವಸ್ತುಗಳು ವಿದ್ಯಾರ್ಥಿ-ಯುವಕರನ್ನು ವಿಕೃತ ಕೃತ್ಯಗಳಲ್ಲಿ ತೊಡಗುವಂತೆ ಪ್ರೇರೆಪಿಸುತ್ತಿವೆ. ಸಮಾಜದ ನೈತಿಕ ಬೆನ್ನೆಲುಬು ಮುರಿಯುವ ಇಂತಹ ಹುನ್ನಾರದ ಹಿಂದಿರುವ ಸರ್ಕಾರಗಳು ಮತ್ತು ವ್ಯವಸ್ಥೆಯ ವಿರುದ್ಧ ಪ್ರಜ್ಞಾವಂತ ಜನತೆ ಒಗ್ಗಟ್ಟಾಗಿ ಹೋರಾಟ ಕಟ್ಟುವುದು ಘಳಿಗೆಯ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಜನತೆ ಮುಂದೆ ಬರಬೇಕು ಎಂದು ಎ ಐ ಎಂ ಎಸ್ ಎಸ್ ಕರೆ ನೀಡುತ್ತದೆ.
ಸುದ್ದಿ ಇವರಿಂದ
ಶಾರದಾ ಗಡ್ಡಿ
ಜಿಲ್ಲಾ ಕಾರ್ಯದರ್ಶಿ ಡಾ. ಸಿಂಪಿಲಿಂಗಣ್ಣ ರಸ್ತೆ, ಚಿಮ್ಮಲಿಗಿ ಆಸ್ಪತ್ರೆ ಹತ್ತಿರ, ಕೊಪ್ಪಳ – 583231
ಮೊ.8050850739 / 8792221730
Kalyanasiri Kannada News Live 24×7 | News Karnataka
