Resolve the issue before the farmer protest turns violent
*ರೈತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಮುಂಚೆ ಸಮಸ್ಯೆ ಬಗೆಹರಿಸಿ*
ಗುರು ಬಸವಣ್ಣನವರು ತಾವು ಪ್ರಧಾನಿ ಇದ್ದಾಗಲೇ ತಮ್ಮೊಂದು ವಚನದಲ್ಲಿ “ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದವ ತೋರಿಸಿ ಬೆಳೆಹಿಸಯ್ಯ ಆತನ ತನು ಶುದ್ಧ ಆತನ ಮನ ಶುದ್ಧ ಆತನ ಭಾವ ಶುದ್ಧ ಆತನ ಮನೆಯೊಳಗೊಕ್ಕು ಲಿಂಗಾರ್ಚನೆ ಮಾಡಿದ ಗುರುಪಾವನನು ನೋಡಾ….” ಎಂದು ಹೇಳಿ
ಕೃಷಿ ಕಾಯಕ ಮಾಡುವ ಶ್ರಮ ಜೀವಿಯ ಮನೆಗೆ ಹೋಗಿ ಪಾದಕ್ಕೆ ಶರಣೆಂದು ಅವರ ಬೇಡಿಕೆಗಳನ್ನು ಈಡೇರಿಸಿ ಬರುವ ದೊಡ್ಡ ಗುಣವನ್ನು ತೋರಿಸಿದ್ದಾರೆ ತನ್ಮೂಲಕ ರೈತರನ್ನು ದೇವರಿಗೆ ಸಮ ಎಂದು ಸ್ಮರಿಸಿದ್ದಾರೆ.
ಇಂತಹ ಸಾಂಸ್ಕೃತಿಕ ನಾಯಕನ ನಾಡಿನಲ್ಲಿ ರೈತರು ವರ್ಷಪೂರ್ತಿ ತಾವು ದುಡಿದ ಬೆಳೆಗೆ ಸರಿಯಾದ ಬೆಲೆ ಕೊಡಿರೆಂದು ಬೀದಿಗೆ ಬಂದು ಸುಡು ಬಿಸಿಲಿನಲ್ಲಿ ಅಂಗಲಾಚಿ ಬೇಡಿಕೊಂಡು ಹೋರಾಟ ಮಾಡಿದರೂ, ತಾವು ಮಾತ್ರ ಐಷರಾಮಿ ಬಂಗಲೆಯಲ್ಲಿ ಕುಳಿತು ಒಬ್ಬರ ಮೇಲೆ ಒಬ್ಬರು ಹೇಳಿಕೆ ನೀಡಿ ರಾಜಕಾರಣ ಮಾಡುತ್ತಾ ಕುಳಿತಿರುವುದು ನಾಚಿಕೆಗೇಡಿನ ಸಂಗತಿ. ಆಳುವ ಪ್ರತಿಯೊಂದು ಸರಕಾರದ ರಾಜಕಾರಣಿಗಳು ರೈತರ ಹೆಣದ ಮೇಲೆ ಅಧಿಕಾರ ನಡೆಸುವುದನ್ನು ರೂಢಿಸಿಕೊಂಡಿರುವುದು. ಇವರ ಮೈ ಚರ್ಮ ದಪ್ಪವಾಗಿವೆ, ಕಿವಿಗಳು ಕಿವುಡಾಗಿವೆ, ಕಣ್ಣು ಕಾಣದಾಗಿವೆ ಎಂಬುದು ಅವರ ಆಮೆ ಗತಿಯ ಹೇಳಿಕೆಯಿಂದ ಗೊತ್ತಾಗುತ್ತದೆ.
ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ, ನಿಸ್ಸಹಾಯಕರಿಗೆ, ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಸ್ತರದ ವ್ಯಕ್ತಿಗಳಿಗೆ ಕೊಟ್ಟು, ಆರ್ಥಿಕ ಸದೃಢರ ಅಕೌಂಟಿಗೆ ಹೋಗುವ ಹಣವನ್ನು ನಿಲ್ಲಿಸಿ; ಆ ಹಣವನ್ನು ರೈತರಿಗೆ ಪರಿಹಾರ ರೂಪದಲ್ಲಿ ಕೊಡಬಾರದೆ?
ಸಮಸ್ಯೆಗಳು ಬಂದಾಗ ಪರಿಹಾರ ಹುಡುಕುವವನು ಉತ್ತಮ ರಾಜಕಾರಣಿಯಲ್ಲ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುವವನು ಉತ್ತಮ ರಾಜಕಾರಣಿ. ಕರ್ನಾಟಕ ಮಟ್ಟಿಗೆ ರೈತರಿಗೆ ತತ್ಕಾಲದಲ್ಲಿ ಸ್ಪಂದಿಸುವ ರಾಜಕಾರಣಿ ಎಂದರೆ ಎಚ್ ಡಿ ಕುಮಾರಸ್ವಾಮಿಯವರು. ಈಗ ಅವರು ಕೇಂದ್ರದಲ್ಲಿ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಮಂತ್ರಿ ಆಗಿದ್ದಾರೆ ಅವರಾದರು ಮುತವರ್ಜಿ ವಹಿಸಿ ಮಾನ್ಯ ಪ್ರಧಾನ ಮಂತ್ರಿಯವರತ್ತಿರ ಮಾತಾಡಿ ರೈತರ ಕಬ್ಬು ಬೆಳೆಯ ದೀರ್ಘಕಾಲದ ಬೇಡಿಕೆಗೆ ಇತಿಶ್ರೀ ಹಾಡಬೇಕು.
ಪ್ರತಿಭಟನೆ ಮಾಡುತ್ತಿರುವಾಲೇ ರೈತ ಹೋರಾಟದ ಮುಂದಾಳತ್ವ ವಹಿಸಿದ ಮುಖ್ಮಸ್ಥರು ರಾಜಕಾರಣಿಗಳ ಆಮಿಷಕ್ಕೆ ಒಳಗಾಗಿ ಪ್ರತಿಭಟನೆ ನಿರತ ಸಾಮಾನ್ಯ ರೈತರಿಗೆ ಮಂಕು ಬೂದಿ ಎರೆಚಿದ ಉದಾಹರಣೆಗೆ ಕೊರತೆಯಿಲ್ಲ, ಈಗ ಮಾತ್ರ ಹಾಗೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬೆಳಗಾವಿಯ ಗುರ್ಲಾಪೂರು ರೈತ ಹೋರಾಟವು ಇಂದೆಂದೂ ಕಾಣದ ಐತಿಹಿಸಿಕ ಹೋರಾಟಕ್ಕೆ ಸಾಕ್ಷಿಯಾಗಿದೆ.
ಮೊನ್ನೆ ದಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟ ಮತ್ತು ಈಗ ನಡೆಯುತ್ತಿರುವ ರೈತ ಹೋರಾಟಗಳು ಮುಂದಿನ ದಿನಮಾನದಲ್ಲಿ ದಂಗೆಗೆ ಸ್ಪಷ್ಟವಾಗಿ ಮುನ್ಸೂಚನೆ ಕೊಡುತ್ತಿವೆ. ಈಗ ಸರಕಾರದ ರಾಜಕಾರಣಿಗಳು ಕಿವುಡರು, ಕುರುಡರಂತೆ ವರ್ತಿಸಬಾರದು. ಇದೇ ತರಹ ದಂಗೆಗಳು ಉಲ್ಬಣಗೊಂಡರೆ ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆದ ಸಾರ್ವಜನಿಕ ದಂಗೆಗಳಂತೆ ರಾಜಕಾರಣಿಗಳನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆಯುವ ದಂಗೆಗಳಾಗಿ ಪರಿವರ್ತನೆಗೊಳ್ಳಬಹುದು. ರಾಜಕಾರಣಿಗಳು ಸ್ವಾರ್ಥಿಯಾಗದೆ, ಹಿಂದಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಾ ಕೂಡದೆ, ಯಾವುದೇ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುವಲ್ಲಿ ಚಿಂತನೆ ನಡೆಸಬೇಕು.
ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ಧರಾಮಯ್ಯನವರೇ ನೀವು ಸಹಿತ ಹೋರಾಟದಿಂದಲೇ ಮೇಲೆ ಬಂದವರಾಗಿದ್ದೀರಿ; ಬಡವರ, ರೈತರ ಮತ್ತು ಕೆಳವರ್ಗದವರ ಪರವಾಗಿದ್ದೀರಿ ಹಾಗೂ ಕೊನೆ ಮುಖ್ಯಮಂತ್ರಿಗಳಾಗಿ ಅಧಿಕಾರದಿಂದ ಕೆಳಗಿಳಿಯುವ ಸಮಯದಲ್ಲಿದ್ದೀರಿ ನೀವೀಗ ಹತ್ತರಲ್ಲಿ ಹನ್ನೊಂದನೆ ರಾಜಾಕಾರಣಿ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳಬೇಡಿ; ರೈತರ ಹೋರಾಟದ ಜಾಗಕ್ಕೆ ಹೋಗಿ ಬಸವಣ್ಣನವರ ಹಾಗೆ ಅವರ ನೋವಿಗೆ ಸ್ಪಂದಿಸಿ, ಸರಿಯಾದ ನಿರ್ಧಾರ ತೆಗೆದುಕೊಂಡು ಶಾಶ್ವತ ಪರಿಹಾರ ಕೊಡಿ.
‘ರೈತರೇ ದೇಶದ ಬೆನ್ನೆಲುಬು’, ‘ಜೈ ಜವಾನ್ ಜೈ ಕಿಸಾನ್’, ‘ರೈತ ನೇಗಿಲ ಯೋಗಿ’ ಎಂಬ ಹೊಗಳಿಕೆಯ ಬಂಡಲ್ ಭಾಷಣ ಬಿಟ್ಟು ಪ್ರತಿಯೊಬ್ಬ ಮಠಾಧೀಶರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಪಕ್ಷೇತರವಾಗಿ ನಿಂತು ರೈತರ ಹೋರಾಟಕ್ಕೆ ಆತ್ಮಸಾಕ್ಷಿಯಾಗಿ ಬೆಂಬಲ ಕೊಡಬೇಕು. ರೈತರಿಲ್ಲವೆಂದರೆ ಯಾವ ರಾಜಕಾರಣಿ, ಮಠಾಧೀಶ, ವೈದ್ಯರು, ಇಂಜಿನೀಯರ್, ಉದ್ಯೋಗಪತಿಗಳು, ಮಾಧ್ಯಮಗಳು ಬದುಕಲು ಸಾಧ್ಯವಿಲ್ಲ. ಎಲ್ಲರೂ ಮೋಸ ಮಾಡಬಹುದು; ಮಾಡುತ್ತಾರೆ ಕೂಡ, ಆದರೆ ರೈತ ಮಾತ್ರ ತಾನು ಬೆಳೆದ ಬೆಳೆ ಹಾನಿಗೊಳಗಾದರೆ ಅಥವಾ ಬೆಳೆದ ಬೆಳೆಗೆ ಬೆಲೆ ಸಿಗದೇ ಹೋದರೆ ಬೀದಿಗೆ ಚೆಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಯೇ ಹೊರತು ವಿಷ ಸಿಂಪಡಿಸಿ ಎಲ್ಲರೂ ಸಾಯಲಿ ಎಂದು ಆಪೇಕ್ಷಿಸುವುದಿಲ್ಲ. ರೈತರ ಈ ಸಂಕಷ್ಟಕಾಲದಲ್ಲಿ ಅವರ ಜೊತೆ ನಿಂತು ಹೋರಾಟವನ್ನು ಗೆಲ್ಲಿಸಬೇಕು.
ರೈತರು ಸಮಸ್ಯೆಗಳಿಂದ ಹೊರಬರಲು ಅನೇಕ ಯೋಜನೆಗಳನ್ನು ಪ್ರಧಾನ ಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಯವರ ಸರಕಾರದ ಜಾರಿಗೆ ತಂದಿದೆಯಾದರೂ ಅನುಷ್ಟಾನಗೊಳ್ಳುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಕರ್ನಾಟಕದ ಗುರ್ಲಾಪೂರದಲ್ಲಿ ಕಬ್ಬಿನ ಬೆಳೆಗೆ ಬೆಂಬಲ ಬೆಲೆಗೆ ಸಂಬಂಧಿಸಿದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗದಂತೆ ಪ್ರಧಾನ ಮಂತ್ರಿಗಳು ಮೌನ ಮುರಿದು, ಮಧ್ಯಸ್ಥಿಕೆ ವಹಿಸಿ ಮಾತಾಡಬೇಕು. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಕೂಡಿ ಪರಿಹಾರ ಕಂಡುಕೊಳ್ಳಬೇಕು.
*ರೈತರು ಓಟಿನ ಯಂತ್ರವಾಗದೆ ಜೀವನದ ಮಂತ್ರವಾದಾಗ* ದೇಶದ ಭವಿಷ್ಯ ಹಚ್ಚ ಹಸಿರಾಗಲು ಸಾಧ್ಯ.
*ಗುರ್ಲಾಪೂರು ರೈತ ಹೋರಾಟಕ್ಕೆ ಜಯವಾಗಲಿ ನಮ್ಮೆಲ್ಲರ ಬೆಂಬಲ ಸದಾ ನಿಮಗಿರುತ್ತದೆ.*

*ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ*
Kalyanasiri Kannada News Live 24×7 | News Karnataka
