Siddagangashri Meditation Center inaugurated
ಸಿದ್ದಗಂಗಾಶ್ರೀಗಳ ಧ್ಯಾನಕೇಂದ್ರ ಲೋಕಾರ್ಪಣೆ
ಶಿವಕುಮಾರ ಸ್ವಾಮೀಜಿ ಸೇವೆ ಸ್ಮರಣೀಯ : ಶಾಸಕ ರವಿಕುಮಾರ್

ಮಂಡ್ಯ : ಕರ್ನಾಟಕ ರತ್ನ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಈ ದೇಶಕ್ಕೆ ಸಲ್ಲಿಸಿರುವ ಸೇವೆ ಅಜರಾಮರವಾಗಿದ್ದು ಅವರ ಆದರ್ಶ ಬದುಕು ಎಲ್ಲರಿಗೂ ಬೆಳಕಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಹೇಳಿದರು.
ಕಾಯಕಯೋಗಿ ಫೌಂಡೇಶನ್ ನಿರ್ವಹಿಸುತ್ತಿರುವ
ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನವನದ ” ಧ್ಯಾನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಧ್ಯಾನ ಮತ್ತು ಯೋಗಾಭ್ಯಾಸಕ್ಕಾಗಿ ನಿರ್ಮಾಣ ಮಾಡಿರುವ ಧ್ಯಾನಕೇಂದ್ರದಲ್ಲಿ ನೆಮ್ಮದಿಯ ವಾತಾವರಣವಿದೆ. ಸ್ವಾಮೀಜಿಯವರ ಪುತ್ಥಳಿಯ ಮುಂದೆ ಧ್ಯಾನ ಮಾಡುವ ಮೂಲಕ ಮನಶಾಂತಿಯನ್ನು ಕಂಡುಕೊಳ್ಳಬೇಕೆಂದರು.
ಕಾಯಕಯೋಗಿ ಫೌಂಡೇಶನ್ ಅತ್ಯುತ್ತಮ ಕೆಲಸ ಮಾಡಿಕೊಂಡು ಬಂದಿದೆ. ಈ ಉದ್ಯಾನವನದಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಜೀವಂತವಾಗಿಡುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರತಿ ವರ್ಷವೂ ಇಂತಹ ಸ್ಮರಣೀಯ ಕಾರ್ಯಕ್ರಮಗಳು ನಡೆಯಲಿ, ಶಿವಕುಮಾರ ಸ್ವಾಮೀಜಿಯವರ ಆದರ್ಶ ನಮಗೆಲ್ಲರಿಗೂ ಬೆಳಕಾಗಲಿ, ಈ ಸಮಾಜಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರು ಕೊಟ್ಟ ಕೊಡುಗೆ ಆದರ್ಶನೀಯವಾದದ್ದು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗುವಂತಾಗಬೇಕು. ಆ ನಿಟ್ಟಿನಲ್ಲಿ ಈ ಸ್ಥಳ ಧ್ಯಾನ ಕೇಂದ್ರವಾಗಿ ರೂಪುಗೊಂಡಿರುವುದು ಮಾದರಿಯಾಗಿದೆ ಎಂದರು.
ಈ ಧ್ಯಾನ ಕೇಂದ್ರ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಹಲವರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು. ಉದ್ಯಾನವನದಲ್ಲಿ ಬೇರೇನೊ ಚಟುವಟಿಕೆ ಮಾಡುತ್ತಾರೆಂಬ ಅನಿಸಿಕೆ ಹಲವರಿಂದ ಕೇಳಿ ಬಂದಿತ್ತು. ಆದರೆ ನನಗೆ ವಿಶ್ವಾಸವಿತ್ತು, ಕಾಯಕಯೋಗಿ ಫೌಂಡೇಶನ್‌ನ ಎಂ.ಶಿವಕುಮಾರ್ ಅವರು ಸ್ವಾಮೀಜಿಯವರ ಆದರ್ಶದಲ್ಲಿ ಬೆಳೆದವರು ಎಂದು ಅನುಮತಿ ಕೊಡಿಸಿದೆ. ಇದೀಗ ಅವರು ಹೇಳಿದಂತೆಯೇ ಧ್ಯಾನ ಮಂದಿರ ರೂಪುಗೊಂಡಿದೆ ಎಂದರು.
ಸ್ವಾಮೀಜಿಯವರ ಪುತ್ಥಳಿಗೆ ರುದ್ರಾಕ್ಷಿ ಹಾರ ಸಮರ್ಪಿಸಿ ಪುಷ್ಪನಮನ ಸಲ್ಲಿಸಿದ ಶಾಸಕರನ್ನು ವಿವಿಧ ಸಂಘಟನೆಯ ಮುಖಂಡರು ಅಭಿನಂದಿಸಿದರು.
ಸಮಾರಂಭದ ನಂತರ
ಅನ್ನದಾಸೋಹ ನಡೆಯಿತು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು.
ಬೇಬಿಬೆಟ್ಟದ ಶ್ರೀ ಶಿವಬಸವಸ್ವಾಮೀಜಿ,
ಶಿವಶಂಕರ ಸ್ವಾಮೀಜಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ನಗರಸಭೆ ಸದಸ್ಯರಾದ ಕೆ.ವಿದ್ಯಾ ಮಂಜುನಾಥ್, ಅನಿಲ್‌ಕುಮಾರ್, ಶ್ರೀಧರ್, ಕಾಂಗ್ರೆಸ್ ಮುಖಂಡ ಶಿವನಂಜು, ಬಿಜೆಪಿ ಮುಖಂಡ ಬೇಕರಿ ಅರವಿಂದ್, ರಾಮಲಿಂಗು, ಕನ್ನಡ ಸೇನೆ ಅಧ್ಯಕ್ಷ ಎಚ್.ಸಿ.ಮಂಜುನಾಥ್, ಸೋಮಣ್ಣ, ಎಂ.ಆರ್.ಮAಜುನಾಥ್, ಅನುಪಮ, ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಎಂ.ಎಸ್.ಮಂಜುನಾಥ್, ಮೆಣಸಗೆರೆ ಶಿವಲಿಂಗಪ್ಪ, ಎಚ್.ಎಸ್.ಶಿವರುದ್ರಪ್ಪ, ಜಿ.ಮಹಾಂತಪ್ಪ, ಸೋಮಶೇಖರ್,
ತಿಲಕ್ ಮತ್ತಿತರರಿದ್ದರು.
—–ಬಾಕ್ಸ್—-
ಬಸವ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ
ಮಂಡ್ಯ ನಗರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ ಒಂದು ಕೋಟಿ ರೂ ಅನುದಾನ ಒದಗಿಸಲಾಗುತ್ತಿದ್ದು ಈಗಾಗಲೇ ೫೦ ಲಕ್ಷ ರೂ ಬಿಡುಗಡೆಗೊಳಿಸಲಾಗಿದೆ ಇದರಿಂದ ಶೀಘ್ರದಲ್ಲೇ ಬಸವಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಎಲ್ಲರೂ ಕ್ರಮ ವಹಿಸಬೇಕು ಆನಂತರ ೫೦ ಲಕ್ಷ ರೂ ಬಿಡುಗಡೆಗೊಳಿಸುವುದು ನನ್ನ ಜವಾಬ್ದಾರಿಯಾಗಿದೆ ಸಮುದಾಯ ಭವನ ನಿರ್ಮಿಸುವುದರಿಂದ ಬಡವರಿಗೂ ಕಲ್ಯಾಣ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ ಮತ್ತು ಸಮುದಾಯದ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ತಮ ವೇದಿಕೆಯಾಗುತ್ತದೆ ಎಂದು ಹೇಳಿದರು.
Kalyanasiri Kannada News Live 24×7 | News Karnataka
