
Tribute to former MP and Minister H.Y. Matee from Gangavathi Kuruba Samaj
ಐದು ದಶಕಗಳ ರಾಜಕಾರಣದಲ್ಲಿ ಎಚ್.ವೈ.ಮೇಟಿಯವರು ಆಸ್ತಿ ಮಾಡದೇ ಜನಸೇವೆ ಮಾಡಿದರು.:ಯಮನಪ್ಪ.

*ಕುರುಬ ಸಮಾಜದಿಂದ ಎಚ್.ವೈ.ಮೇಟಿಯವರಿಗೆ ನುಡಿ ಶ್ರದ್ಧಾಂಜಲಿ.

ಗಂಗಾವತಿ: ಐದು ದಶಕಗಳಿಗೂ ಹೆಚ್ಚು ರಾಜಕೀಯ ಅಧಿಕಾರದಲ್ಲಿದ್ದ ಎಚ್.ವೈ.ಮೇಟಿಯವರು ಎಂದಿಗೂ ಆಸ್ತಿ, ಸ್ವಾರ್ಥ ರಾಜಕೀಯ ಮಾಡದೇ ಜನಸಾಮಾನ್ಯರ ರಾಜಕಾರಣಿಯಾಗಿ ಜೀವನ ನಡೆಸಿದ್ದರು. ಅವರ ನಿಧನ ಅಹಿಂದ ವರ್ಗದ ಜನರಿಗೆ ಅಪಾರ ಹಾನಿಯುಂಟು ಮಾಡಿದೆ ಎಂದು ಶ್ರೀ ಕನಕದಾಸ ಕುರುಬರ ಸಂಘದ ತಾಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ ಹೇಳಿದರು.
ಅವರು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಕನಕದಾಸರ ವೃತ್ತದಲ್ಲಿ ದಿವಂಗತ ಮಾಜಿ ಸಂಸದ, ಸಚಿವ ಎಚ್.ವೈ.ಮೇಟಿಯವರ ನುಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿಯಾಗಿದ್ದ ಮೇಟಿಯವರು ಸಿದ್ದರಾಮಯ್ಯನವರನ್ನು ಜೆಡಿಎಸ್ ನಿಂದ ಉಚ್ಚಾಟಿಸಿದ ಸಂದರ್ಭದಲ್ಲಿ ಅವರ ಜತೆ ಜೆಡಿಎಸ್ ನಿಂದ ಹೊರಗೆ ಬಂದು ಎಬಿಪಿ ಜೆಡಿ ಪಕ್ಷವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಜತೆಗೆ ಜಿ.ಪಂ.ತಾ.ಪಂ.ಚುನಾವಣೆಯಲ್ಲಿ ಎಬಿಪಿಜೆಡಿ ಪಕ್ಷದ ಅಧಿಕ ಸದಸ್ಯರು ಗೆಲ್ಲುವಂತೆ ಮಾಡಿ ಸಿದ್ದರಾಮಯ್ಯನವರ ಶಕ್ತಿ ವೃದ್ದಿಸಿದ್ದರು. ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದ ತಕ್ಷಣ ಮೇಟಿಯವರು ಕಾಂಗ್ರೆಸ್ ಸೇರ್ಪಡೆಯಾದರು. ಜತೆಗೆ ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು. ಅರಣ್ಯ ಸಚಿವರಾಗಿ ಮತ್ತು ಅಬಕಾರಿ ಸಚಿವರಾಗಿ ಹಲವು ಮಹತ್ವದ ಕಾರ್ಯ ಮಾಡಿದರು. ಅವರ ವಿರೋದಿಗಳು ಅವರ ಹೆಸರು ಕೆಡಿಸಿದರೂ ನಂತರದ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜನರು ಮೇಟಿಯವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ವಿರೋಧಿಗಳ ಷಡ್ಯಂತ್ರವನ್ನು ಹೊಡೆದು ಹಾಕಿದರು. ಅವರ ಮಗಳು ಬಾಯಕ್ಕ ಕೂಡ ಜನಪ್ರೀಯ ರಾಜಕಾರಣಿಯಾಗಿ ತಂದೆಯ ಕಾರ್ಯ ಮುಂದುವರಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಅಶೋಕಗೌಡ, ಶರಣೇಗೌಡ, ಸಣ್ಣಕ್ಕಿ ನೀಲಪ್ಪ, ಕೆ.ನಾಗೇಶಪ್ಪ, ಸಿದ್ದಲಿಂಗನಗೌಡ, ಹುಲಿಹೈದರ್ ಹನುಮಂತಪ್ಪ, ಬಿಂಗಿ ವೆಂಕಟೇಶ, ಅನೀಲ, ಅಡ್ಡಿಶಾಮಣ್ಣ, ಕೆ.ತಿರುಕಪ್ಪ, ಗೀತಾ ವಿಕ್ರಂ, ಹೊಸಳ್ಳಿ ವಿರೂಪಾಕ್ಷಪ್ಪ, ಮೋರಿ ದುರುಗಪ್ಪ, ಡ್ಯಾಗಿ ರುದ್ರೇಶ, ಶಿವಬಸಪ್ಪ, ಬಿ.ಶರಣಪ್ಪ, ಹೊಸಳ್ಳಿ ನಾಗಪ್ಪ,ಬಸವರಾಜ,ಮಂಜುನಾಥ ದೇವರಮನೆ, ನೀಲಪ್ಪ, ಕಂಪ್ಲಿ ಬೆಟ್ಟಪ್ಪ, ಉಪನ್ಯಾಸಕರಾದ ತಾಯಪ್ಪ ಮರ್ಚೇಡ್, ಶ್ರೀಶೈಲ ಯಾದಗಿರಿ ಸೇರಿ ಕುರುಬ ಸಮಾಜದವರಿದ್ದರು.




