Everyone should be aware of health - Asha Begum
ಆರೋಗ್ಯದತ್ತ ಪ್ರತಿಯೊಬ್ಬರಿಗೂ ಜಾಗೃತಿ ಇರಬೇಕು – ಆಶಾಬೇಗಂ

ಕೊಪ್ಪಳ ನವೆಂಬರ್ 05 (ಕರ್ನಾಟಕ ವಾರ್ತೆ): ನಮ್ಮ ಜೀವನದಲ್ಲಿ ಬಂಗಾರ, ಬೆಳ್ಳಿ, ಮಹಡಿ, ವಸ್ತು-ಒಡವೆ ಏನೆಲ್ಲವೂ ಇದ್ದರೇನು?, ನಾವು ಸುಖ-ಸಂತೋಷದಿಂದ ಇರಬೇಕಾದರೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆರೋಗ್ಯದತ್ತ ವಿಶೇಷವಾಗಿ ಕಾಳಜಿವಹಿಸಿ, ಜಾಗೃತರಾಗಬೇಕು ಎಂದು ಗಂಗಾವತಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಕರೆನೀಡಿದರು.
ಅವರು ಇತ್ತೀಚೆಗೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್.ಹೆಚ್.ಎಂ. ಯೋಜನೆಗಳು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕುಷ್ಟಗಿಯ ಶರಣಪ್ಪ ವಡಿಗೇರಿ ಅವರ ನೇತೃತ್ವದ ಜನಜಾಗೃತಿ ಕಲಾರಂಗ ಸಂಸ್ಥೆಯ ಕಲಾತಂಡದವರಿಂದ ನಡೆದ ಬೀದಿ ನಾಟಕ ಪ್ರದರ್ಶನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ದುರುಗೇಶ್, ಶ್ರೀದೇವಿ, ಶೋಭಾ, ಗುರುರಾಜ ಮತ್ತು ವೀರೇಶ, ಆಶಾ ಉಮಾದೇವಿ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ, ಸಣ್ಣ ಹುಲಿಗೆಮ್ಮಾ ಭಾಗವಹಿಸಿದ್ದರು.
ನಂತರ ತಂಡದವರಿಂದ ಆರೋಗ್ಯ ಯೋಜನೆಗಳಾದ ಕ್ಷಯರೋಗ, ಹಾವು ಕಡಿತ, ಹೃದಯಾಘಾತ, ಬಾಲ್ಯವಿವಾಹ, ತಾಯಿ-ಮಗುವಿನ ಆರೋಗ್ಯ, ಲಸಿಕಾ ಯೋಜನೆ, ಹದಿಹರೆಯದವರ ಸಮಸ್ಯೆಗಳು ಮಾನಸಿಕ ಕಾಯಿಲೆ ಮುಂತಾದ ವಿಷಯಗಳನ್ನು ತಿಳಿಸುವ ಸನ್ನಿವೇಶಗಳ ಮೂಲಕ ಅಭಿನಯಿಸಿದ ಬೀದಿನಾಟಕ, ಜಾಗೃತಿ ಗೀತೆಗಳ ಕಾರ್ಯಕ್ರಮವು ಜನಮನ ರಂಜಿಸಿತು.
ಕಲಾತಂಡದಲ್ಲಿ ದುರಗಪ್ಪ ಅಡವಿಭಾವಿ, ವೀರಯ್ಯಸ್ವಾಮಿ, ಶರಣಯ್ಯ, ರೇಣುಕಾ ಮಡಿವಾಳರ, ಮಂಜುಳಾ ಬೆಟಗೇರಿ, ದೇವೇಂದ್ರಪ್ಪ, ರಾಜಣ್ಣ ಕ್ಯಾದಿಗುಪ್ಪ ಕಲಾವಿದರು ಭಾಗವಹಿಸಿದ್ದರು. ಕೊನೆಯಲ್ಲಿ ದುರುಗೇಶ ಅವರು ವಂದಿಸಿದರು.
Kalyanasiri Kannada News Live 24×7 | News Karnataka
