Pro-Kannada organizations launch new protest, chanting slogans like "Why do you need a bribe?" at officials who have defied court orders

ಬೆಂಗಳೂರು,ಅ.27; ನೆಲದ ಕಾನೂನು ಧಿಕ್ಕರಿಸುತ್ತಿರುವ ಸಾಮರ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಕ್ರಮ ಕೈಗೊಳ್ಳದ ಅಲ್ಪಸಂಖ್ಯಾತ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಆಯುಕ್ತರ ಕಛೇರಿಗಳ ಮುಂಭಾಗ ನ್ಯಾಯಾಲಯದ ಆದೇಶ ಪಾಲಿಸಲು ನಿಮಗೆ “ಲಂಚ ಬೇಕೆ ಲಂಚ?” ಎಂಬ ವಿನೂತನ ಪ್ರತಿಭಟನೆ ನಡೆಸಲು ಕನ್ನಡಪರ ಸಂಘಟನೆಗಳು ಮುಂದಾಗಿವೆ. ಅಲ್ಲದೇ ಶಾಲಾ ಆಡಳಿತ ಮಂಡಳಿಯನ್ನು ರಕ್ಷಿಸುತ್ತಿರುವ ಅಧಿಕಾರಿಗಳನ್ನು ಸನ್ಮಾನಿಸುವ ಚಳವಳಿಯನ್ನು ಸಹ ಹಮ್ಮಿಕೊಳ್ಳಲು ತೀರ್ಮಾನಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಸೂರ್ಯ ಅಡಿಗ ಶ್ರೀನಿವಾಸ್ ಮಾತನಾಡಿ, ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸಲು ನಿಮಗೆ ಲಂಚ ಬೇಕೆ ಲಂಚ ಎಂದು ಪ್ರಶ್ನಿಸುವ ಹಾಗೂ ಅನಧಿಕೃತ ಶಾಲೆಯ ಬೆನ್ನೆಲುಬಾಗಿರುವ ಆಧಿಕಾರಿಗಳನ್ನು ಸನ್ಮಾನಿಸುವ ಹೋರಾಟಗಳನ್ನು ನ್ಯಾಯಾಲಯದ ಆದೇಶ ಪಾಲನೆಯಾಗುವ ತನಕ ಹಮ್ಮಿಕೊಳ್ಳುತ್ತೇವೆ ಎಂದರು.
ಈ ಆಡಳಿತ ಮಂಡಳಿಯ ವಸತಿ ಶಾಲೆಗೆ ಸರ್ಕಾರದ ಅನುಮತಿಯಿಲ್ಲ. ನಕಲಿ ದಾಖಲೆ ಸೃಷ್ಟಿಸಿ 5 ಲಕ್ಷ ರೂಪಾಯಿ ಪಡೆದಿರುವ ಶಾಲಾ ಮುಖ್ಯಸ್ಥ ಅರ್ಷದ್ ಮುಖ್ತಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಪಸಂಖ್ಯಾತ ಇಲಾಖೆಯಿಂದ ಮದರಸ ನಡೆಸಲು ಹಣ ಪಡೆದಿರುವ ಜಾಮಿಯ ಮೊಹಮ್ಮದಿಯ ಮನ್ಸೂರ, ಜಾಮಿಯ ಮೊಹಮ್ಮದಿಯ ಸೋಸೈಟಿ, ಆಲ್ ಜಾಮಿಯ ಮೊಹಮ್ಮದಿಯ ಎಜುಕೇಷನ್ ಸೊಸೈಟಿ ಸಂಸ್ಥೆಗಳು ದೇಶದ ಯಾವುದೇ ರಾಜ್ಯದಲ್ಲಿ ನೊಂದಣಿಯಾಗಿಲ್ಲ. ಹೀಗಿದ್ದರೂ 2017 ರಲ್ಲಿ ಅಲ್ಪಸಂಖ್ಯಾತ ಇಲಾಖೆ 10 ಲಕ್ಷ ಮಂಜೂರು ಮಾಡಿ, 5 ಲಕ್ಷ ರೂ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿದಾಗ ಹೈಕೋರ್ಟ್ ಸೆಪ್ಟೆಂಬರ್ 24 ರಂದು ಕ್ರಮ ತೆಗೆದುಕೊಳ್ಳುವಂತೆ ನೀಡಿದ ಆದೇಶ ಪಾಲನೆಯಾಗುತ್ತಿಲ್ಲ. ಇದೇ ಮೇ 30 ರಂದು ಈ ಶಾಲೆಯ 1 ರಿಂದ 10 ನೇ ತರಗತಿ ವರೆಗಿನ ಮಾನ್ಯತೆಯನ್ನು ರದ್ದು ಮಾಡಲಾಗಿದೆ. ಇದನ್ನು ಆಡಳಿತ ಮಂಡಳಿ ಪ್ರಶ್ನಿಸಿ ಒಂದು ತಿಂಗಳುಗಳ ಕಾಲ ತಡೆಯಾಜ್ಞೆ ತಂದಿತ್ತು. ಜುಲೈ 29 ರಂದು ನಾಲ್ಕು ತಿಂಗಳುಗಳ ಒಳಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ. ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯ ಹಾಗೂ ಅನಧಿಕೃತ ಸಂಸ್ಥೆಗಳ ಪರವಾಗಿನ ಒಲವನ್ನು ಇದು ಎತ್ತಿ ತೋರಿಸುತ್ತಿದೆ ಎಂದರು.
Kalyanasiri Kannada News Live 24×7 | News Karnataka
