Establishment of TJS George Endowment National Award at Media Academy: Legislative Council Member K. Shivakumar announces

ಬೆಂಗಳೂರು:ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಸಂಸ್ಥೆಗಳ ಸಂಪಾದಕರಿಗೆ ದತ್ತಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಘೋಷಿಸಿದರು.
ಅವರು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ತಾವು ಈಗಾಗಲೇ ಸಾಮಾಜಿಕ ನ್ಯಾಯದ ಕುರಿತು ಬರೆಯುವ ಅಂಕಣಕಾರರಿಗೆ “ಮೂಕನಾಯಕ ಡಾ. ಬಿ.ಆರ್. ಅಂಬೇಡ್ಕರ್ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರು ನಿಷ್ಪಕ್ಷಪಾತಿ ಪತ್ರಕರ್ತರಾಗಿದ್ದರು. ಅವರು ಸ್ವತಃ ಪತ್ರಕರ್ತರ ವರದಿಗಳನ್ನು ತಿದ್ದಿ , ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು. ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಗುರುತಿಸುವ ಸಲುವಾಗಿ 1.5 ಲಕ್ಷ ರೂ.ಗಳ ದತ್ತಿನಿಧಿ ಸ್ಥಾಪಿಸುವುದಾಗಿ ತಿಳಿಸಿದರು.
ತಾವು ಇನ್ನೂ ಪತ್ರಿಕೋದ್ಯಮದಿಂದ ಹೊರ ಬಂದಿಲ್ಲ. ಸದನದಲ್ಲಿಯೂ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಕುರಿತು ದನಿ ಎತ್ತುವುದಾಗಿ ಅವರು ತಿಳಿಸಿದರು. ತಮ್ಮ ಪತ್ರಕರ್ತ ವೃತ್ತಿ ಜೀವನ ಹಾಗೂ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಣೆಯ ಸಂದರ್ಭಗಳನ್ನು ಮೆಲುಕು ಹಾಕಿದ ಶಿವಕುಮಾರ್ ಅವರು ಅಕಾಡೆಮಿಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ಮಾತನಾಡಿ,
ಶಿವಕುಮಾರ್ ಅವರು ಮೂರು ದಶಕಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ನಿಷ್ಠುರ ವರದಿಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಇಂದು ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವುದು ಪತ್ರಕರ್ತರಿಗೆಲ್ಲ ಹೆಮ್ಮೆಯ ವಿಷಯ. ಅವರು ಅಕಾಡೆಮಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅವರ ಬೆಂಬಲ ಪತ್ರಕರ್ತರಿಗೆ ಸದಾ ಇರುವುದೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಸದಸ್ಯರಾದ ಕೆ. ನಿಂಗಜ್ಜ, ಕೆ.ವೆಂಕಟೇಶ್, ಶಿವಾನಂದ ತಗಡೂರು, ಅಬ್ಬಾಸ್ ಮುಲ್ಲಾ ಮೊದಲಾದವರು ಶಿವಕುಮಾರ್ ಅವರ ಕುರಿತು ಮಾತನಾಡಿದರು.
ಅಕಾಡೆಮಿ ಕಾರ್ಯದರ್ಶಿ ಸಹನ,ಆಧೀಕ್ಷಕ ಮುನಿರಾಜು,ಅಕಾಡೆಮಿ ಸದಸ್ಯರಿದ್ದರು
Kalyanasiri Kannada News Live 24×7 | News Karnataka
