Incomplete drainage work in Hanur town causes massive crop damage to farmer's land due to rainwater.

ವರದಿ: ಬಂಗಾರಪ್ಪ .ಸಿ .
ಹನೂರು : ಪಟ್ಟಣದ ಕೇಂದ್ರ ಭಾಗದಲ್ಲಿರುವ ತಹಶೀಲ್ದಾರ್ ರವರ ಕಚೇರಿಯ ಹಿಂಭಾಗದಲ್ಲಿನ ೧೧ನೇ ವಾರ್ಡಿನ ವಿನಾಯಕನಗರ ಪ್ರದೇಶದಲ್ಲಿ ಗುತ್ತಿಗೆದಾರನ ಯಡವಟ್ಟಿನಿಂದ ಅಪೂರ್ಣವಾಗಿ ಬಿಟ್ಟುಹೋಗಿರುವ ಚರಂಡಿ ಕಾಮಗಾರಿಯಿಂದಾಗಿ ಮಳೆ ಆರ್ಭಟಕ್ಕೆ ಸ್ಥಳೀಯ ರೈತನ ಜಮೀನಿಗೆ ನೀರು ನುಗ್ಗಿ ಫಸಲು ಹಾನಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ೧೧ನೇ ವಾರ್ಡಿನ ಸೋಮಣ್ಣ ಎಂಬ ರೈತನ ಜಮೀನು ಸಮೀಪದಲ್ಲಿಯೇ ಸುಮಾರು ಎರಡು ವರ್ಷಗಳ ಹಿಂದೆ ಚರಂಡಿ ಕಾಮಗಾರಿ ಪ್ರಾರಂಭವಾಗಿದ್ದರೂ ಇಂದಿಗೂ ಅದು ಪೂರ್ಣಗೊಂಡಿಲ್ಲ. ಪ್ರತೀ ಬಾರಿ ಮಳೆ ಸುರಿದಾಗ ಪಟ್ಟಣದ ಅನೇಕ ಬಡಾವಣೆಗಳ ನೀರು ಈ ಮಾರ್ಗವಾಗಿ ಹರಿದು ಸಮೀಪದಲ್ಲೆ ಹರಿಯುವ ಸ್ವಾಮಿಹಳ್ಳಕ್ಕೆ ಸೇರುವುದರ ಜೊತೆಗೆ ಮಧ್ಯದಲ್ಲಿನ ಜಮೀನಿಗೆ ನೀರು ನುಗ್ಗಿ ನಷ್ಟ ಉಂಟುಮಾಡುತ್ತಿದೆ.
ಈ ಕುರಿತು ಸ್ಥಳೀಯರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬುಧವಾರ ಸುರಿದ ಭಾರಿ ಮಳೆಯಿಂದ ಮತ್ತೆ ಸೋಮಣ್ಣ ಅವರ ಜಮೀನಿನಲ್ಲಿ ಬೆಳೆದಿದ್ದ ಫಸಲು ನೀರಿನಲ್ಲಿ ಮುಳುಗಿ ಹಾನಿಯಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಮತ್ತು ಹಾನಿಗೊಳಗಾದ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ತಮ್ಮ ಮೊಂಡುತನವನ್ನು ಪ್ರದರ್ಶಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
Kalyanasiri Kannada News Live 24×7 | News Karnataka
