Demand to withdraw the notification of the reserved forest area

ಗಂಗಾವತಿ 23-ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯು ಮುಖ್ಯಮಂತ್ರಿಗಳಿಗೆ ಗಂಗಾವತಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಶಿವಪ್ರಸಾದ್ ಕುಲಕರ್ಣಿ ಮೂಲಕ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಮ್ಯಾಗಳಮನಿ ರಾಜ್ಯದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಹಾಗೂ ಪ್ರಭಾವಿಗಳು ಸಾಕಷ್ಟು ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದಾರೆ ಅದನ್ನು ಸರ್ಕಾರ ಪಡೆಯಲು ಮುಂದಾಗುವ ಬದಲು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ರಾಂಪುರ ಮತ್ತು ಲಕ್ಷ್ಮಿ ಪುರ ಜನವಸತಿ ಪ್ರದೇಶದ 192.85 ಹೆಕ್ಟರ್ ಭೂಮಿಯನ್ನು ಅರಣ್ಯ ಇಲಾಖೆ ಸುಪರ್ದಿಗೆ ಪಡೆಯುವ ಅಧಿಸೂಚನೆ ಆದೇಶ ಹೊರಡಿಸಿದ್ದು ಇಲ್ಲಿನ ಜನರಿಗೆ ಮರಣ ಶಾಸನ ವಾಗಿದೆ. ಎಲ್ಲರೂ ಬಡವರು, ರೈತರು, ಅಹಿಂದ ಜನಾಂಗಕ್ಕೆ ಸೇರಿದವರಾಗಿದ್ದು, ಇವರೆಲ್ಲಾ ಆತಂಕ ಗೊಂಡಿದ್ದಾರೆ ಕಾರಣ ಕೂಡಲೇ ಆದೇಶ ಹಿಂಪಡೆಯಬೇಕು.ಇಲ್ಲಿನ ಜನರು 50 ವರ್ಷಗಳಿಂದ ಭೂಮಿಯನ್ನು ಬೆವರು ಸುರಿಸಿ ಹಸನ ಮಾಡಿ, ಬೇಸಾಯ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿಯೇ ವಾಸಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಆಶ್ರಯಮನೆ, ವಿದ್ಯುತ್, ಕುಡಿಯುವ ನೀರು, ಸಿ ಸಿ ರಸ್ತೆ, ಚರಂಡಿ, ಆಧಾರ್ ಕಾರ್ಡ, ಮತದಾರರ ಗುರುತಿನ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪತ್ರ ಉದ್ಯೋಗ ಖಾತ್ರಿಯೋಜನೆಯಲ್ಲಿ ಉದ್ಯೋಗ,ಹೀಗೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಸರ್ಕಾರ ನೀಡುತ್ತಾ ಬಂದಿದೆ. ಇದು ಅರಣ್ಯ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಸುಮಾರು 50 ವರ್ಷ ಗಳಿಂದ ಇವರೆಲ್ಲಾ ನಿದ್ದೆ ಮಾಡುತ್ತಿದ್ದಾರಾ? ಆಗ ಇಲಾಖೆ ಮತ್ತು ಸರ್ಕಾರ ಸತ್ತು ಹೋಗಿತ್ತಾ, ಈಗ ಇದ್ದಕ್ಕಿದ್ದಂತೆ ಈ ನಿರ್ಧಾರದ ಹಿಂದೆ ಏನೋ ದುರುದ್ದೇಶ ಇರಬಹುದೆಂದು ಸಂಶಯ ವಾಗುತ್ತಿದೆ.ಇಪತ್ತು ವರ್ಷ ಗಳ ಹಿಂದೆ ಈ ಪ್ರದೇಶ ಅಷ್ಟೊಂದು ಪ್ರಸಿದ್ದಿ ಪಡೆದಿರಲಿಲ್ಲ.ಆಗ ಇಲ್ಲಿ ಯಾರೂ ಗಮನ ಹರಿಸಿಲ್ಲ. ಈಗ ಹನುಮ ಜನಿಸಿದ ಸ್ಥಳವೆಂದು ಇತ್ತೀಚಿಗೆ ಪ್ರಸಿದ್ದಿ ಹೊಂದಿ ಗಮನ ಸೆಳೆದ ಪ್ರಯುಕ್ತ ಎಲ್ಲರ ಕಣ್ಣು ಇಲ್ಲಿನ ರೈತರ ಮತ್ತು ಅಹಿಂದ ಬಡವರ ಮೇಲೆ ಬಿದ್ದಿದೆ. ಇಲ್ಲಿನ ಜನ ಈ ಮಣ್ಣಿನಲ್ಲಿ ಬೆವರು ಸುರಿಸಿದ್ದಾರೆ. ಈ ಮಣ್ಣು ಅವರಿಗೆ ಆಸರೆಯಾಗಿದೆ. ಈ ನೆಲವೇ ಉಸಿರಾಗಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ತಾವುಗಳು ಸದಾ ಬಡವರ ಮತ್ತು ರೈತರ ಹಾಗೂ ಅಹಿಂದ ಜನಾಂಗದವರ ಹಿತವನ್ನು ಸದಾ ಬಯಸುವವರು. ಇಲ್ಲಿನ ಜನ ನೆಮ್ಮದಿಯಿಂದ ದುಡಿದು ಬದುಕು ಕಟ್ಟಿಕೊಳ್ಳಲು ಅರಣ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ಹಿಂಪಡೆಯಲು ಸೂಚಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘವು ಸ್ಥಳೀಯ ಶಾಸಕರ, ಸಂಸದರ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮನೆಮುಂದೆ ಪ್ರತಿಭಟನೆ, ಮಾಡುವದಲ್ಲದೆ,ಅಧಿಸೂಚನೆ ಹಿಂಪಡೆದು ಅಲ್ಲಿನ ಜನರಿಗೆ ನ್ಯಾಯ ಸಿಗುವ ವರೆಗೂ ಸರಕಾರದ ವಿರುದ್ದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವದು. ಆದ್ದರಿಂದ ಆದೇಶ ಹಿಂಪಡೆದು ಅಲ್ಲಿನ ಜನತೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಮಂಜುನಾಥ್ ಚನ್ನಾದಾಸರ್ ಬೋಗೇಶ್ ಆನೆಗುಂದಿ, ಮೇಘರಾಜ್, ಕೆ ಎಂ, ಅರವಿಂದ್,ಮಂಜುನಾಥ್ ಹಿರೇಮಠ್ ಮತ್ತಿತರರು ಇದ್ದರು
Kalyanasiri Kannada News Live 24×7 | News Karnataka
