MLA Darshan Puttannaiah appointed as Sarvodaya Party working president

ಬೆಂಗಳೂರು,ಅ.೧೬;ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಮೈಸೂರಿನ ಕರುಣಾಕರ.ಬಿ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಶಾಸಕರ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ನಂತರ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಸಭೆಗೆ ರಾಜ್ಯದ ಸುಮಾರು 10 ಜಿಲ್ಲೆಗಳಿಂದ ಪಕ್ಷದ ಮುಖಂಡರುಗಳು ಹಾಗೂ ರಾಜ್ಯ ರೈತ ಸಂಘದ ಮುಖ್ಯಸ್ಥರುಗಳು ಸಹ ಆಗಮಿಸಿದ್ದು, ಈ ಸಭೆಯಲ್ಲಿ ಚರ್ಚಿಸಿ ಪಕ್ಷದ ಚಟುವಟಿಕೆಗಳನ್ನು ಚುರುಕುಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಸರ್ವೋದಯ ಕರ್ನಾಟಕ ಪಕ್ಷ ಮುಂಬರುವ ಎಲ್ಲಾ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ನಾವು ಎಲ್ಲೆಡೆ ಸ್ಪರ್ಧೆ ಮಾಡುತ್ತೇವೆ. ವಿಶೇಷವಾಗಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಚುನಾವಣೆಗೆ ನಾವು ಸಜ್ಜಾಗುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಅಮ್ಮದ್ ಪಾಷಾ, ಖಜಾಂಚಿ ಶಿವರಾಜ್, ರಾಜ್ಯ ಸಮಿತಿ ಸದಸ್ಯ ಅರುಣಕುಮಾರ್ ಕುರಡಿ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಅರುಣ್ ಗೌಡ ಮತ್ತಿತರರು ಉಪಸ್ಥಿತರಿದ್ದರು.