Vijayalakshmi of Sultanpur village honored for not selling gutka and cigarettes at liquor shop

ರಾಯಚೂರು ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಣ್ಣದಾದ ಸೇವೆ ನೀಡುತ್ತಿರುವ ರಾಯಚೂರು ಜಿಲ್ಲೆಯ ಸುಲ್ತಾನಪುರ ಗ್ರಾಮದ ಪಾನ್ ಅಂಗಡಿಯ ವಿಜಯಲಕ್ಷ್ಮಿ ಅವರಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಅಕ್ಟೋಬರ್ 14ರಂದು ಸನ್ಮಾನಿಸಿದರು.
ಸುಲ್ತಾನ್‌ಪುರ ಗ್ರಾಮದಲ್ಲಿ ಈ ಮಹಿಳೆಯು ಕಳೆದ 20 ವರ್ಷದಿಂದ ತನ್ನ ಪತಿಯೊಂದಿಗೆ ಪಾನ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಗುಟುಕು ಹಾಗೂ ಸಿಗರೇಟ್ ವಿತರಕರು ಬಹಳಷ್ಟು ಬಾರಿ ಈ ಮಹಿಳೆಯ ಬಳಿಗೆ ಬಂದು ಗುಟುಕು ಹಾಗೂ ಸಿಗರೇಟ್ ಮಾರಲು ತಿಳಿಸಿದರು ಸಹ ಈ ಮಹಿಳೆಯರು ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಗುಟುಕಾ ಮತ್ತು ಸೀಗರೇಟನಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ; ನಾನು ಅವುಗಳನ್ನು ಮಾರುವುದಿಲ್ಲ ಎಂದು ತಿಳಿಸಿ, ಪಾನ ಅಂಗಡಿ ನಡೆಸುತ್ತಿರುವ ವಿಜಯಲಕ್ಷ್ಮಿ ಅವರು ಆದರ್ಶ ಜೀವನ ನಡೆಸುತ್ತ ಇತರರಿಗೆ ಮಾದರಿಯಾಗಿದ್ದಾರೆ. ಇಂತವರು ನಮ್ಮ ಸಮಾಜದಲ್ಲಿ ಸಿಗುವುದು ಅಪರೂಪ ಎಂದು ತಿಳಿಸಿ, ವಿಜಯಲಕ್ಷ್ಮಿ ಅವರ ಸೇವಾ ಕಾರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರು ರಾಯಚೂರ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಸನ್ಮಾನಿಸಿದರು.
ಸಮಾಜಮುಖಿ ವಿಚಾರಧಾರೆಯ ವಿಜಯಲಕ್ಷ್ಮಿ ಅವರಿಗೆ ನೀಡಿರುವ ಸನ್ಮಾನದಿಂದ ಆರೋಗ್ಯವಂತ ಹಾಗೂ ಸ್ವಾಸ್ಥ್ಯ ಸಮಾಜದ ಕಲ್ಪನೆಯನ್ನು ಮೈಗೂಡಿಸಿಕೊಂಡು ಬರಲು ಇಚ್ಛಿಸುವ ಪ್ರತಿಯೊಬ್ಬರಿಗೂ ಉತ್ತೇಜನೆ ಸಿಗುವಂತಾಗಲಿ. ಬಹಳಷ್ಟು ಜನರು ಉತ್ತಮ ಹಾಗೂ ಆರೋಗ್ಯವಂತ ಸಮಾಜಕ್ಕೆ ಸಣ್ಣದಾದ ಅಥವಾ ದೊಡ್ಡ ಮಟ್ಟದಲ್ಲಿ ಸೇವೆ ಹಾಗೂ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆದರೆ, ಅವರ ಸೇವೆಯನ್ನು ಗುರುತಿಸಿದರೆ ಇದು ಮತ್ತಷ್ಟು ಜನರಿಗೆ ಪ್ರೇರಣೆಯಾಗುತ್ತದೆ ಎಂದು ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ತಿಳಿಸಿದರು.