Lingayat religion of Guru Basavanna and Lingayat religion of the monasteries

ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಒಮ್ಮೆ ತಮ್ಮ ಪ್ರವಚನದಲ್ಲಿ ಹೀಗೆ ಹೇಳಿದ್ದರು: “ಗಂಗಾನದಿ ಹುಟ್ಟುವ ಜಾಗವಾದ ಗಂಗೋತ್ರಿಯಲ್ಲಿ ಅದು ಅತ್ಯಂತ ಪರಿಶುದ್ಧವಾಗಿರುತ್ತದೆ. ಹರಿಯುತ್ತ ಹರಿಯುತ್ತ ಹೋದಂತೆ ಅನೇಕರು ತಮ್ಮ ಸ್ವಾರ್ಥಕ್ಕಾಗಿ ಅದನ್ನು ಕಲುಷಿತಗೊಳಿಸುತ್ತಾರೆ. ಆ ನದಿ ಬಂಗಾಳ ಕೊಲ್ಲಿ ಸೇರುವ ವರೆಗೆ ಅತ್ಯಂತ ಮಲೀನವಾಗಿ ಬಿಡುತ್ತದೆ. ಅದೇ ರೀತಿ 12ನೇ ಶತನಮಾನದಲ್ಲಿ ಗುರು ಬಸವಣ್ಣನವರು ಹೃದಯ ಗಂಗೋತ್ರಿಯಲ್ಲಿ ಉದಿಸಿದ ಲಿಂಗಾಯತ ಧರ್ಮ ಅತ್ಯಂತ ಪರಿಶುದ್ಧವಾಗಿತ್ತು. ಮುಂದೆ ಬರುತ್ತ ಬರುತ್ತ ಈ ಧರ್ಮದಲ್ಲಿ ಮಠ ಪೀಠಗಳು ಹುಟ್ಟಿಕೊಂಡು ಧರ್ಮವನ್ನು ತನ್ನ ಮೂಲ ಸ್ವರೂಪದಿಂದ ತಮಗೆ ಬೇಕಾದಂತೆ ಕೆಡಿಸಿದರು. ನಾವೀಗ ಬಸವ ಧರ್ಮ ಪೀಠವೆನ್ನುವ ಶುದ್ಧೀಕರಣ ಘಟಕ (Filtering station) ಮೂಲಕ ಶುದ್ಧ ಲಿಂಗಾಯತ ಧರ್ಮವನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ“ ಎಂದು. ಆದರೆ ಈಗ ಅವರು ನಿರ್ಮಿಸಿದ ಶುದ್ಧೀಕರಣ ಘಟಕ (Filtering station)ವೂ ಕೆಟ್ಟು ನಿಂತಿದೆ. ಶುದ್ಧೀಕರಣ ಘಟಕದೊಳಗೆಯೇ ಅಶುದ್ಧಿ ಸೇರಿದೆ ಕಸ ಕಡ್ಡಿ ತುಂಬಿದೆ. ಫಿಲ್ಟರ್ ಎಲೆಮೆಂಟ್ ಬದಲಾಯಿಸುವ ವರೆಗೂ ಶುದ್ಧನೀರು ಸಿಗುವುದು ಕಷ್ಟ!

ಯಾವುದೇ ಒಂದು ವ್ಯವಸ್ಥೆ ಕಾಲಾನುಕ್ರಮದಲ್ಲಿ ಕೆಲವು ವರ್ಷಗಳ ನಂತರ ಜಡಗಟ್ಟುತ್ತದೆ, ಜಿಡ್ಡುಗಟ್ಟುತ್ತದೆ. ಅದನ್ನು ಮತ್ತೆ ಮತ್ತೆ ಪುನಶ್ಚೇತನಗೊಳಿಸಬೇಕಾಗುತ್ತದೆ. ವ್ಯವಸ್ಥೆ ಮತ್ತು ವ್ಯವಸ್ಥೆಯಲ್ಲಿ ಸೇರಿಕೊಳ್ಳುವ ಜನರೂ ಕೆಟ್ಟುಹೋದ ವ್ಯವಸ್ಥೆಯನ್ನೇ ಇದೇ ನಿಜವಾದ ವ್ಯವಸ್ಥೆ ಎಂದು ತಿಳಿದುಕೊಂಡು ವ್ಯವಸ್ಥೆಯಲ್ಲಿ ವ್ಯವಹರಿಸುತ್ತಾರೆ.
ಕೆಲವೊಮ್ಮೆ ಕೆಟ್ಟುಹೋದ ವ್ಯವಸ್ಥೆಯೇ ಅವರ ವ್ಯವಹಾರಕ್ಕೆ ಸಹಕಾರಿಯೂ ಆಗಿರುತ್ತದೆ!.
ಕ್ರಿಶ್ಚಿಯನ್ ಧರ್ಮವು ಅಂದಿನ ರೋಮನ್ನರ ಮೌಢ್ಯತೆಗಳ ವಿರುದ್ಧವಾಗಿ ಹೊರಹೊಮ್ಮಿದರೂ ಕಾಲಾನಂತರದಲ್ಲಿ ಅದರಲ್ಲೂ ಕೆಲವು ಮೌಢ್ಯತೆಗಳು ಹೊಕ್ಕಾಗ ಆಗ ಪ್ರೊಟೆಸ್ಟೆಂಟ್ ಎನ್ನುವ ಸುಧಾರಣವಾದಿಗಳು ಹುಟ್ಟಿಕೊಂಡು ಕ್ರೈಸ್ತ ಧರ್ಮದ ಒಂದು ಪ್ರಗತಿಪರ ವಿಚಾರವಾದಿಗಳಾಗಿ ಹೊರಹೊಮ್ಮಿ ಅದೊಂದು ಪಂಗಡವೇ ಆಗಿ ಹೋಯಿತು.
ಅದೇ ರೀತಿ ಗುರು ಬಸವಣ್ಣನವರು 12ನೇ ಶತಮಾನದಲ್ಲಿ ನೀಡಿದ ಲಿಂಗಾಯತ ಧರ್ಮವು ಅತ್ಯಂತ ಪರಿಶುದ್ಧವಾಗಿತ್ತು. ಆಗಿನ್ನು ಮಠೀಯ ವ್ಯವಸ್ಥೆ ಹುಟ್ಟಿರಲಿಲ್ಲ. ಕಾಲಾನಂತರದಲ್ಲಿ ಮಠೀಯ ವ್ಯವಸ್ಥೆ ಹುಟ್ಟಿಕೊಂಡು ಕೆಲವು ಮಠದವರು ಈ ಧರ್ಮವನ್ನು ತನ್ನ ಮೂಲ ರೂಪದಲ್ಲಿ ಪ್ರಚಾರ ಮಾಡಿದರು. ಅದೇ ಮಠದ ಮುಂದಿನ ಉತ್ತರಾಧಿಕಾರಿಗಳು ಕಾಲ ಕಾಲಕ್ಕೆ ಗುರು ಬಸವಣ್ಣನವರ ತತ್ವಗಳಿಗೆ ವಿರುದ್ಧವಾದ ನಡೆಯನ್ನು ಹೊಂದತೊಡಗಿದರು. ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಈ ಧರ್ಮದ ತತ್ವಗಳನ್ನು ಮಾರ್ಪಾಡು ಮಾಡತೊಡಗಿದರು ಇದರಿಂದ ಲಿಂಗಾಯತ ಧರ್ಮ ಇಂದು ಕಲುಷಿತವಾಗಿದೆ ಅನೇಕ ಮೂಲ ಆಚರಣೆಗಳು ಮರೆಯಾಗುತ್ತಿವೆ. ಈ ಕಾರಣಕ್ಕಾಗಿ ನಾವು ಗುರು ಬಸವಣ್ಣನವರ ಮೂಲ ಲಿಂಗಾಯ ಧರ್ಮ ಅವರ ಹೃದಯಾಂಗತ ಭಾವನೆಗಳನ್ನು ಮೂಲ ರೂಪದಲ್ಲಿಯೇ ಅರಿಯುವ ಮತ್ತು ಆಚರಿಸಿದರೇ ಮಾತ್ರ ಲಿಂಗಾಯತ ಧರ್ಮ ತನ್ನ ಮೂಲ ಸ್ವರೂಪದಲ್ಲಿ ಉಳಿಸಿಕೊಂಡುಹೋಗಲು ಸಾಧ್ಯವಿದೆ. ಕಿರು ಲೇಖನದಿಂದ ಆರಂಭ ಮಾಡಿರುವ ಈ ವಿಚಾರ ಮುಂದೆ ಒಂದು ಗ್ರಂಥವಾಗಿ ಹೊಮ್ಮಬಹುದು. ಗ್ರಂಥ ಬರೆಯುವಾಗ ಇನ್ನೂ ವಿವರವಾದ ವಿಚಾರಗಳನ್ನು ಮಂಡಿಸುವೆ
ಗುರು ಬಸವಣ್ಣನವರ ಲಿಂಗಾಯತ ಧರ್ಮಕ್ಕೂ ಮಠಗಳ ಲಿಂಗಾಯತ ಧರ್ಮಕ್ಕೂ ಇರುವ ವ್ಯತ್ಯಾಸಗಳನ್ನು ಒಂದೊಂದಾಗಿ ವಿವರಿಸುತ್ತೇನೆ ಶರಣರೊಪ್ಪುವ ಪರಿಯಲಿ.
- ಗುರು ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ವಿರಕ್ತರು ಗೃಹಸ್ಥರೂ ಒಬ್ಬರಿಗೊಬ್ಬರು ಶರಣು ಶರಣಾರ್ಥಿಗಳು ಎನ್ನುತ್ತಾರೆ. ಗೃಹಸ್ಥರ ಪಾದಕ್ಕೆ ವಿರಕ್ತರು, ವಿರಕ್ತರ ಪಾದಕ್ಕೆ ಗೃಹಸ್ಥರು ನಮಸ್ಕರಿಸುತ್ತಾರೆ ಶರಣು ಶರಣಾರ್ಥಿಗಳು ಎನ್ನುತ್ತಾರೆ. ಇಲ್ಲಿ ಗೃಹಸ್ಥರು ಮತ್ತು ವಿರಕ್ತರು ಸಮಾನರು. ವಿರಕ್ತರು ಗೃಹಸ್ಥರ ಪಾದ ಪೂಜೆ ಮಾಡುತ್ತಾರೆ. ಗೃಹಸ್ಥರು ವಿರಕ್ತರ ಪಾದ ಪೂಜೆ ಮಾಡುತ್ತಾರೆ.
ಎಮ್ಮಪ್ಪ ಬಸವಣ್ಣ ಎಮ್ಮವ್ವೆ ನೀಲಮ್ಮ
ಎಮ್ಮಯ್ಯ ಪ್ರಭುರಾಯ ಚನ್ನಬಸವ
ಇನ್ನುಳಿದ ಶರಣರ ಚರಣಕ್ಕೆ ಶರಣೆಂದು
ಧನ್ಯನಾದೆನು ಗುರುವೆ ಯೋಗಿನಾಥ
-ಗುರು ಸಿದ್ಧರಾಮೇಶ್ವರರು.
ಗುರು ಸಿದ್ಧರಾಮೇಶ್ವರರು ವಿರಕ್ತ ಜೀವನವನ್ನು ಸ್ವಯಂ ಇಚ್ಛೆಯಿಂದ ಆಯ್ಕೆ ಮಾಡಿಕೊಂಡವರು. ಮೇಲಿನ ವಚನದಲ್ಲಿ ಅವರು ಅನುಭಾವ ಮಂಟಪದ ಶರಣಗಣದ ಪಾದಕ್ಕೆ ಶರಣೆನ್ನುತ್ತಾರೆ. ಈ ರೀತಿಯ ಅನೇಕ ವಚನಗಳನ್ನು ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ಗುರು ಬಸವಣ್ಣನವರು ಗುರು ಅಲ್ಲಮಪ್ರಭುದೇವರ ಚರಣಕ್ಕೆ ಶರಣೆಂದರೆ ಗುರು ಅಲ್ಲಮಪ್ರಭುದೇವರು ಗುರು ಬಸವಣ್ಣನವರ ಶ್ರೀಪಾದಕ್ಕೆ ಶರಣೆನ್ನುತ್ತಾರೆ. ಗುರು ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಎಲ್ಲರೂ ಎಲ್ಲರ ಶ್ರೀಪಾದಕ್ಕೂ ಶರಣೆನ್ನುತ್ತಾರೆ
ಆದರೆ ಮಠಗಳ ಲಿಂಗಾಯತ ಧರ್ಮ ಹಾಗಲ್ಲ. ಇಲ್ಲಿ ಕೇವಲ ಗೃಹಸ್ಥರು ಮಾತ್ರ ಕಾವಿಧಾರಿಗಳ ಪಾದಕ್ಕೆ ನಮಸ್ಕರಿಸುತ್ತಾರೆ. ಗೃಹಸ್ಥರು ಮಾತ್ರ ಕಾವಿಧಾರಿಗಳ ಶ್ರೀಪಾದಕ್ಕೆ ಶರಣು ಶರಣಾರ್ಥಿಗಳು ಎನ್ನುತ್ತಾರೆ. ಕಾವಿಧಾರಿಗಳು ಗೃಹಸ್ಥರ ಶ್ರೀಪಾದಕ್ಕೆ ಶರಣು ಶರಣಾರ್ಥಿಗಳು ಎನ್ನುವುದಿಲ್ಲ. ಕೇವಲ ಗೃಹಸ್ಥರು ಮಾತ್ರ ಮಠಾಧೀಶರ ಪಾದ ಪೂಜೆ ಮಾಡುತ್ತಾರೆ. ಪಾದೋದಕ ತೆಗೆದುಕೊಳ್ಳುತ್ತಾರೆ. ಮಠಾಧೀಶರು ಗೃಹಸ್ಥರಾದ ಶರಣರ ಪಾದ ಪೂಜೆ ಮಾಡುವುದಿಲ್ಲ. ಅವರು ಪಾದೋದಕ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಅವರು ಅಷ್ಟಾವರಣದ ಒಂದು ಭಾಗವಾದ ಪಾದೋದಕವನ್ನು ತಿರಸ್ಕರಿಸಿದ ಹಾಗೆ ಆಯಿತು ಅಥವಾ ಅದನ್ನು ಆಚರಿಸದೇ ಲಿಂಗಾಯ ಧರ್ಮದ ಆಚರಣೆಗಳನ್ನು ಕೆಡಿಸಿದ್ದಾರೆ.
ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಇಂದಿನ ಕಾಲಕ್ಕೆ ಪಾದೋದಕ ತತ್ವ ಸರಿಹೊಂದುವುದಿಲ್ಲ ಎಂದು ಕರುಣೋದಕ ಎನ್ನುವ ತತ್ವವನ್ನು ಕೊಟ್ಟರು. ಆದರೆ ಇದನ್ನು ಮಾತಾಜಿಯವರು ಮಾಡಿದರು ಎನ್ನುವ ಕಾರಣಕ್ಕೆ ಇದನ್ನು ಕೆಲವು ಮಠಾಧೀಶರಿಗೆ ಸ್ವೀಕರಿಸುವ ಮನಸ್ಸಿಲ್ಲ. ವಾಸ್ತವಿಕವಾಗಿ ಇದು ಮಠಾಧೀಶರಿಗೆ ಸಹಾಯವಾಗುವ ತತ್ವವೇ! ಏಕೆಂದರೆ ಅವರು ಬೇರೆಯವರ ಪಾದೋದಕ ಸ್ವೀರಿಸುವುದಿಲ್ಲ! ಕೇವಲ ಪಾದೋದಕ ಕೊಡುತ್ತಾರೆ!
ಆದ್ದರಿಂದ ನಾವು ಮಠಗಳ ಲಿಂಗಾಯತ ಧರ್ಮ ಬಿಟ್ಟು ಗುರುಬಸವಣ್ಣವರ ಲಿಂಗಾಯತ ಧರ್ಮದಕಡೆಗೆ ತಿರುಗಬೇಕಾಗಿದೆ. ಅಂದರೆ ನಮ್ಮ ಪಾದ ಪೂಜೆ ಯಾರು ಮಾಡುತ್ತಾರೋ ಅವರ ಪಾದಪೂಜೆ ಮಾತ್ರ ನಾವು ಮಾಡಬೇಕು. ನಮ್ಮ ಪಾದಕ್ಕೆ ಯಾರು ನಮಸ್ಕಾರ ಮಾಡುತ್ತಾರೋ ಅವರ ಪಾದಕ್ಕೆ ಮಾತ್ರ ನಾವು ನಮಸ್ಕಾರ ಮಾಡಬೇಕು. ನಮ್ಮ ಪಾದಗಳಿಗೆ ಯಾರು ಶರಣು ಶರಣಾರ್ಥಿಯೆನ್ನುತ್ತಾರೋ ಅವರ ಪಾದಕ್ಕೆ ಮಾತ್ರ ನಾವೂ ಶರಣು ಶರಣಾರ್ಥಿಯೆನ್ನಬೇಕು ಇಲ್ಲದಿದ್ದರೆ ನಾವು ದಾಸ್ಯಕ್ಕೆ ಒಳಗಾಗುತ್ತೇವೆ ಆತ್ಮ ಗೌರವ ಕಳೆದುಕೊಂಡು, ಕಾಮ ಕ್ರೋದ ಲೋಭ ಮೋಹ ಮದ ಮತ್ಸಾರಾದಿಗಳನ್ನು ತುಂಬಿಕೊಂಡ ಕಾವಿ ಧಾರಿಗಳ ಪಾದದಡಿಯಲ್ಲಿ ಬಿದ್ದರೆ ಅವರ ದೃಷ್ಟಿಯಲ್ಲಿ ನಾವು ಕೀಳು ಅವರು ಮೇಲೆಂಬ ಭಾವನೆ ಶತ ಶತಮಾನಗಳ ವರೆಗೆ ಮುಂದುವರೆಯುತ್ತಲೇ ಹೋಗುತ್ತದೆ.
ನಾನು ಅತ್ಯಂತ ಆತ್ಮಬಲದಿಂದ ಹೇಳುತ್ತೇನೆ ಈ ಹಿಂದೆ ಅನೇಕ ಕಾವಿಧಾರಿಗಳ ಪಾದಕ್ಕೆ ನಾನೂ ಎರಗಿದ್ದೇನೆ ಪಾದ ಪೂಜೆ ಮಾಡಿದ್ದೇನೆ ಅದರಲ್ಲಿ ಕೆಲವರು ಒಳ್ಳೆಯವರು ಮತ್ತು ಕೆಲವರು ಕೆಟ್ಟವರು ಇದ್ದರು ಅದರ ಅರಿವು ನನಗೆ ಈಗ ಆಗುತ್ತಿದೆ. ಆದ್ದರಿಂದ ನಾನು ಇನ್ನು ಮುಂದೆ ನನ್ನ ಪಾದಕ್ಕೆ ನಮಸ್ಕರಿಸುವವರ ಪಾದಕ್ಕೆ ಮಾತ್ರ ನಮಸ್ಕರಿಸುತ್ತೇನೆ. ನನ್ನ ಪಾದ ಪೂಜೆ ಮಾಡುವವರ ಪಾದ ಪೂಜೆ ಮಾತ್ರ ನಾನು ಮಾಡುತ್ತೇನೆ ಅಂದಾಗ ಮಾತ್ರ ನಾವು ಗುರು ಬಸವಣ್ಣನವರ ಲಿಂಗಾಯತ ಧರ್ಮ ಆಚರಿಸದಂತಾಗುತ್ತದೆ. ಇಲ್ಲವಾದರೆ ಅದು ಅರಸರಿಯದ ಬಿಟ್ಟಿ!
ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವ್ಯತ್ಯಾಸದೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ನಾವು ಗುರು ಬಸವಣ್ಣನವರ ಲಿಂಗಾಯತ ಧರ್ಮವನ್ನು ಅರಿಯೋಣ…
–ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ