Bhimanna Khandre is not eligible for the Sharan Samaj Seva Ratna award - Sadhguru Basavaprabhu Swamiji

ಬಸವ ಕಲ್ಯಾಣ: ಬಸವ ಧರ್ಮ ಪೀಠದಿಂದ ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹರು ಎಂದು ಬಸವಕಲ್ಯಾಣದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠದ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಪ್ರಕಣೆ ಮೂಲಕ ಹೇಳಿಕೆ ನೀಡಿದ್ದಾರೆ.
24ನೇ ಕಲ್ಯಾಣ ಪರ್ವದಲ್ಲಿ ಲಿಂಗಾಯತ ಧರ್ಮ ವಿರೋಧಿ ಭೀಮಣ್ಣ ಖಂಡ್ರೆಯವರಿಗೆ ‘ಶರಣ ಸಮಾಜ ಸೇವಾ ರತ್ನ ಪ್ರಶಸ್ತಿ’ ಕೊಡುತ್ತಿರುವುದು ಕಳವಳಕಾರಿ ಸಂಗತಿ. ಐದು ದಶಕಗಳ ಕಾಲ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವಾಗ ಅಡಚಣೆ ಉಂಟುಮಾಡಿ, ಲಿಂಗಾಯತ ಧರ್ಮಿಯರ ಆಸ್ಮಿತೆಗೆ ಧಕ್ಕೆ ತಂದು, ಮೋಸದಿಂದ ವೀರಶೈವ ಲಿಂಗಾಯತ ಜಾತಿ ಪ್ರಮಾಣ ಕೊಡುವಂತೆ ಮಾಡಿ, ಲಿಂಗಾಯತ ಧರ್ಮಕ್ಕೆ ವೀರಶೈವ ತಳಕು ಹಾಕಿಸಿ ಐತಿಹಾಸಿಕ ದೋಷವೆಸಗಿದ ಭೀಮಣ್ಣ ಖಂಡ್ರೆಗೆ ಪ್ರಶಸ್ತಿ ಕೊಡುವುದು ಅಕ್ಷಮ್ಯ ಅಪರಾಧ. ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಮಾತಾಜಿಯವರು ಸ್ಪಷ್ಟೀಕರಣ ಕೊಟ್ಟಾಗ ಅದನ್ನು ವಿರೋಧಿಸಿದ ಭೀಮಣ್ಣ ಖಂಡ್ರೆಯವರು ಭಕ್ತರ ಮದುವೆಗೆಂದು ಬೀದರ ಜಿಲ್ಲೆಗೆ ಬರುವಾಗ ಮಾತೆ ಮಹಾದೇವಿಯವರನ್ನು ಬರದಂತೆ ತಡೆಯೊಡ್ಡಿದ್ದು ರಾಷ್ಟ್ರೀಯ ಬಸವದಳದ ಹಿರಿಯರು ಇನ್ನೂ ಮರೆತಿಲ್ಲ.
ಇಂದಿಗೂ ಅವರ ಮಗ ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಒಂದೇ ಎಂದು ಹೇಳುತ್ತಾ ವೇದಿಕೆಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರನ್ನು ತುಚ್ಚವಾಗಿ ಬೈದು; ಘಾತುಕ ಶಕ್ತಿಗಳೆಂದು ಹೇಳುತ್ತಿರುವಾಗ ಯಾವ ನೈತಿಕ ಆಧಾರದ ಮೇಲೆ ಪ್ರಶಸ್ತಿ ನೀಡುತ್ತಿರುವಿರಿ. ಇತ್ತ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುತ್ತಲೇ ಅತ್ತ ಒಳಗಿಂದೊಳಗೆ ವೀರಶೈವ ಲಿಂಗಾಯತ ಮಹಾಸಭೆಯ ಮುಖ್ಯಸ್ಥರಿಗೆ ಸತ್ಕಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇಂತಹ ಬೆಳವಣಿಗೆಗಳು ಲಿಂಗಾಯತ ಧರ್ಮಿಯರ ಅಂತಃಶಕ್ತಿಯನ್ನು ಕುಗ್ಗುವಂತೆ ಮಾಡುತ್ತಿದೆಯಲ್ಲದೆ ಬೆಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಲಿಂಗಾಯತ ಧರ್ಮ ಹೋರಾಟದ ಚುಕ್ಕಾಣಿ ಹಿಡಿದವರೇ ದಾರಿ ತಪ್ಪಿದರೆ ಲಿಂಗಾಯತ ಧರ್ಮಿಯರ ಗತಿ ಏನು? ಎಂಬ ಆತಂಕ ನಿರ್ಮಾಣವಾಗಿದೆ. ಮಾತಾಜಿ ಲಿಂಗೈಕ್ಯ ನಂತರ ಮಾತಾಜಿಯವರ ಆತ್ಮಕ್ಕೆ ಅಶಾಂತಿಯುಂಟು ಮಾಡುವ ಇಂತಹ ಘಟನೆಗಳು ಪದೇ ಪದೇ ಆಗುತ್ತಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿವೆ. ಮಾತಾಜಿಯವರು ಎಷ್ಟೇ ಕಷ್ಟ ಬಂದರೂ ರಾಜಕಾರಣಿಗಳಿಗೆ ಧರ್ಮದ್ರೋಹಿಗಳಿಗೆ ಮಣಿ ಹಾಕಿಲ್ಲ; ಅವರ ಶಿಷ್ಯರು ಅದರಂತೆ ನಡೆದುಕೊಳ್ಳಬೇಕು. ಅಷ್ಟಕ್ಕೂ ಭೀಮಣ್ಣ ಖಂಡ್ರೆಯವರಿಂದ ಲಿಂಗಾಯತ ಧರ್ಮಕ್ಕೆ ಏನು ಕೊಡುಗೆ ಇದೆ?. ಲಿಂಗಾಯತ ಧರ್ಮ ವಿರೋಧಿಸುವವರು ಎಷ್ಟೇ ಪ್ರಬಲವಾಗಿದ್ದರೂ ಮಣಿ ಹಾಕಬಾರದು. “ದೂಷಕನವನೊಬ್ಬ ದೇಶವ ಕೊಟ್ಟರೆ ಆಸೆ ಮಾಡಿ ಅವನ ಹೊರೆಯಲಿರಬೇಡ…” ಎನ್ನುವ ಧರ್ಮಪಿತ ಬಸವಣ್ಣನವರು ವಚನ ಅರ್ಥ ಮಾಡಿಕೊಳ್ಳುವುದು ಒಳಿತು. ಲಿಂಗಾಯತ ಧರ್ಮಿಯರ ಸ್ವಾಭಿಮಾನಕ್ಕೆ ಧಕ್ಕೆ ತಂದ ಭೀಮಣ್ಣ ಖಂಡ್ರೆಯವರಿಗೆ ಪ್ರಶಸ್ತಿ ನೀಡುವುದನ್ನು ನಾನೊಬ್ಬ ಮಾತಾಜಿ ಶಿಷ್ಯನಾಗಿ ಲಿಂಗಾಯತ ಧರ್ಮಿಯನಾಗಿ ಪ್ರಬಲವಾಗಿ ಖಂಡಿಸುತ್ತೇನೆ. ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿಯವರು ಈ ಪ್ರಶಸ್ತಿಯನ್ನು ಹಿಂಪಡೆದು, ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು ಅಡಿಯಲ್ಲಿ ಅಡಿಯಾಗಿ ನಡೆದು ಲಿಂಗಾಯತ ಸಮಾಜಕ್ಕೆ ಗುರುಗಳಂತೆ ಮಾದರಿಯಾಗಿ ನಿಲ್ಲಬೇಕು. ಇಲ್ಲವಾದರೆ ಲಿಂಗಾಯತ ಸಮಾಜ ನಿಮ್ಮನ್ನು ಕ್ಷಮಿಸಲಾರದು. ಒಂದು ವೇಳೆ ಪ್ರಶಸ್ತಿ ಕೊಡುವುದೇ ಆದರೆ ಅವರು ಲಿಂಗಾಯತ ಧರ್ಮವೆಂದು ಒಪ್ಪಿಕೊಂಡು ಪತ್ರಿಕೆಯಲ್ಲಿ ಹೇಳಿಕೆ ನೀಡಲಿ. ಅಷ್ಟಕ್ಕೂ ಮೀರಿ ನೀವು ಪ್ರಶಸ್ತಿ ಕೊಟ್ಟರೆ “ನಿಮ್ಮ ನಡೆಯೊಂದು ಪರಿ ನುಡಿಯೊಂದು ಪರಿ” ಎಂದು ಭಾವಿಸಬೇಕಾಗುತ್ತದೆ. ಮಾತಾಜಿ ಆತ್ಮ ಎಂದಿಗೂ ಕ್ಷಮಿಸಲಾರದು.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ