Swabhimani Kalyana Parva is a symbol of the self-respect of the 12th century Sharanas.

ಹನ್ನೆರಡನೇ ಶತಮಾನದ ನಮ್ಮ ಆದಿ ಶರಣರು ಅತ್ಯಂತ ಸ್ವಾಭಿಮಾನಿಯಾಗಿ ಬದುಕಿದರು ಎನ್ನುವುದಕ್ಕೆ ಅನೇಕ ವಚನಗಳು ಸಾಕ್ಷಿಯಾಗಿವೆ.
ವಚನ:
ಇತ್ತ ಬಾ ಎನ್ನದವನ ಹತ್ತೆ ಹೊದ್ದಲು ಬೇಡ ಇತ್ತ ಬಾ ಎಂಬ ಸದ್ಭಕ್ತನ ಬಾಗಿಲ ಹತ್ತಿಪ್ಪೆ ಕಾಣಾ ರಾಮನಾಥ.
ಅನುಭಾವ ಮಂಟಪದ ಶರಣ ಜೇಡರ ದಾಸಯ್ಯನವರು, ಮೇಲಿನ ವಚನದಲ್ಲಿ ಯಾರು ನಮ್ಮನ್ನು ಬನ್ನಿ ನಮ್ಮೊಂದಿಗೆ ಇರಿ. ಎಂದು ಕರೆಯುವುದಿಲ್ಲವೋ ಅಂಥವರ ಹತ್ತಿರಕ್ಕೂ ನಾನು ಹೋಗುವುದಿಲ್ಲ. ಇತ್ತ ಬಾ ಎಂಬ ಸದ್ಭಕ್ತನ ಬಳಿಗೆ ಮಾತ್ರ ನಾನು ಹೋಗುತ್ತೇನೆ. ಕರೆಯುವವನು ಸದ್ಭಕ್ತನಾಗಿದ್ದರೆ ಮಾತ್ರ ನಾನು ಹೋಗುತ್ತೇನೆ. “ದೂಷಕನವನೊಬ್ಬ ದೇಶವ ಕೊಟ್ಟಡೆ ಆಸೆ ಮಾಡಿ ಅವನ ಹೊರೆಯಲ್ಲಿರಬೇಡ” ಎನ್ನುವ ಗುರು ಬಸವಣ್ಣನವರ ಆದೇಶದಂತೆ, ದುಷ್ಟರಾದವರು, ದುರ್ಗುಣಿ ದುರಂಹಾಕಾರಿಗಳು ಕರೆದರೆ, ಇನ್ನೊಬ್ಬರನ್ನು ದ್ವೇಷಿಸುವುದಕ್ಕಾಗಿ ನನ್ನೊಂದಿಗಿರುವವರ ಸಂಖ್ಯೆ ಹೆಚ್ಚಿಗೆ ಕಾಣಬೇಕು ಎನ್ನುವ ದುರುದ್ದೇಶದಿಂದ ಕರೆಯುವವರ ಬಳಿಗೂ ನಾನು ಹೋಗುವುದಿಲ್ಲ ಎನ್ನುತ್ತಾರೆ.
ಬೆಂಗಳೂರಿನಲ್ಲಿ ನಡೆದ ಬಸವ ಸಂಸಕೃತಿ ಸಮಾರೋಪ ಸಮಾರಂಭದಲ್ಲಿ ಅನೇಕ ಜನ ಮಾತಾಜಿಯವ ಕರುಳ ಕುಡಿಯ ಶರಣ ಬಂಧುಗಳು ಭೇಟಿಯಾಗಿದ್ದರು. ಅದರಲ್ಲಿ ಕೆಲವರು ಏಕೆ ಎರಡು ಕಲ್ಯಾಣ ಪರ್ವಗಳು ನಡೆಯುತ್ತಿವೆ. ಒಂದೇ ಮಾಡಲಿಕ್ಕೆ ಆಗುವುದಿಲ್ಲವೇ ಎಂದು ಕೇಳಿದರು.
ಅದಕ್ಕೆ ನಾನು ಹೇಳಿದೆ, ಮಾತೆ ಮಹಾದೇವಿ ತಾಯಿಯವರು ಎಲ್ಲರನ್ನೂ ಇಂಬಿಟ್ಟುಕೊಳ್ಳುವ ಗುಣವನ್ನು ಹೊಂದಿದ್ದರು. ವಿಚಾರ ಭಿನ್ನಾಭಿಪ್ರಾಯವಿರುವ ತಮ್ಮ ವಿರೋಧಿಗಳಿಗೂ ವೇದಿಕೆಗಳಿಗೆ ಕರೆದು ಅವರ ವಿಚಾರವನ್ನು ಮಂಡಿಸಲು ಅವಕಾಶ ಕೊಡುತ್ತಿದ್ದರು ಮತ್ತು ತಮ್ಮ ವಿಚಾರಧಾರೆಯಿಂದ ಅವರ ಮೇಲೆ ಪ್ರಭಾವ ಬೀರುತ್ತಿದ್ದರು.
ಆದರೆ ಇಂದಿನ ಬಸವ ಧರ್ಮ ಪೀಠದ ಟ್ರಷ್ಟಿಗಳು ಮಾತಾಜಿಯವರಂತೆ ಧರ್ಮ ಪ್ರಚಾರ ಮಾಡಲು ಧರ್ಮ ಪೀಠಕ್ಕೆ ಬಂದವರಲ್ಲ. ತಮ್ಮ ಜೀವನವನ್ನು ಸಾಗಿಸಲು ಬಂದವರು. ಹೊಟ್ಟೆ ಹೊರೆಯಲು ಕಾವಿತೊಟ್ಟು ತಮ್ಮ ಬದುಕಿಗೆ ಉದ್ಯೋಗವನ್ನು ಮಾಡಿಕೊಂಡವರು. ಹೀಗಾಗಿ ಇವರಿಗೆ ಗುರು ಬಸವಣ್ಣನವ ತತ್ವಗಳ ಅರಿವಾಗಲೀ, ಪೂಜ್ಯ ಶ್ರೀ ಮಾತಾಜಿಯವ ಹೃದಯಾಂಗತ ಭಾವನೆಗಳ ಸ್ಪರ್ಷವಾಗಲೀ ಇವರಿಗೆ ಆಗಿಲ್ಲ. ಕೆಲವರು ಕೇವಲ ಗಿಳಿಪಾಠದಂತೆ ಪ್ರವಚನ ಮಾಡಿ ಹೊಟ್ಟೆಹೊರೆದರೆ, ಇನ್ನು ಕೆಲವರು ತಮ್ಮ ಸಹಪಾಠಿಗಳ ಮೇಲೆ ಛಾಡಿ ಹೇಳುತ್ತ, ಗಿಳಿಪಾಠದವರನ್ನು ಓಲೈಸುತ್ತ ತಮ್ಮ ಬದುಕು ಸಾಗಿಸುತ್ತಿದ್ದಾರೆ. ಅವರನ್ನು ದ್ವೇಷಿಸು ಎಂದರೆ ಗಿಳಿಪಾಠದವರು ಅವರನ್ನು ದ್ವೇಷಿಸುತ್ತಾರೆ. ಇವರನ್ನು ಆದರಿಸು ಎಂದರೆ ಗಿಳಿಪಾಠದವರು ಇವರನ್ನು ಆದರಿಸುತ್ತಾರೆ. ಮತ್ತವರನ್ನು ಹೊರಹಾಕು ಎಂದರೆ ಹೊರ ಹಾಕುತ್ತಾರೆ. ಅವರು ಯಾರು ಅವರನ್ನೇಕೆ ಆದರಿಬೇಸಬೇಕು ಇವರನ್ನೇಕೆ ದ್ವೇಷಿಸಬೇಕು ಇವರನ್ನೇಕೆ ಹೊರ ಹಾಕಬೇಕು ಎನ್ನುವ ಸ್ವಯಂಜ್ಞಾನ ಗಿಳಿಪಾಠದವರಿಗೆ ಇರುವುದಿಲ್ಲ.
ಹೀಗಾಗಿ ಈ ಎಲ್ಲಾ ಟ್ರಷ್ಟಿಗಳು ಸೇರಿ ತಮ್ಮ ಒಡನಾಡಿಯಾದ ಪೂಜ್ಯ ಶ್ರೀ ಚನ್ನಬಸವನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಸತ್ಯಾದೇವಿಯವರನ್ನು ಗುರು ಬಸವಣ್ಣನವರ ತತ್ವಕ್ಕಾಗಿ ತ್ಯಾಗಿಯಾದ ಜಂಗಮರನ್ನೇ ಬಸವ ಧರ್ಮ ಪೀಠದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹೊರಗಟ್ಟಿದ್ದಾರೆ. ತಮಗಾದ ಅನ್ಯಾಯವನ್ನು ಭಕ್ತರು ಸರಿಪಡಿಸಬೇಕಾಗಿತ್ತು. ಆದರೆ ಬಸವ ಧರ್ಮ ಪೀಠದ ಟ್ರಷ್ಟಿಗಳು ಭಕ್ತರ ಮೇಲೂ ಕೂಡ ಕೇಸುಗಳನ್ನು ದಾಖಲಿಸಿ, ಇವರೆಲ್ಲ ನಮ್ಮ ಕಾರ್ಯಕ್ರಮಕ್ಕೆ ಬರಬಾರದು ಎಂದು ಪೊಲೀಸ್ ಮತ್ತು ಕೊರ್ಟಗಳ ಮೂಲಕ ನೋಟೀಸ್ ಗಳನ್ನು ನೀಡಿರುವಾಗ ಭಕ್ತರಿಗೂ ಏನೂ ಮಾಡಲು ತೋಚದೇ ಇರುವಾಗ ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿಯವರು ಕಾನೂನಿನ ಮೊರೆ ಹೋದಾಗ ಅವರನ್ನು ಶಾಶ್ವತವಾಗಿ ಹೊರಗಟ್ಟಲು, ವಕೀಲರಿಗೆ ಕೋಟಿಗಟ್ಟಲೇ ಹಣ ಕೊಟ್ಟು ಹೊರಗಟ್ಟುವ ಕೆಲಸ ಮಾಡಿದ್ದಾರೆ.
ಬಸವ ಧರ್ಮ ಪೀಠದ ಟ್ರಷ್ಟಿಗಳು ಗುರು ಬಸವಣ್ಣನವರ ತತ್ವಕ್ಕೆ ಬಹುದೊಡ್ಡ ಅಪಚಾರ ಮಾಡುತ್ತಿದ್ದಾರೆ.
ಬಸವ ಧರ್ಮ ಪೀಠಕ್ಕೆ ಹೆಚ್ಚಿನ ಆದಾಯ ಬರುವುದು ಸಾರ್ವಜನಿಕ ಭಕ್ತರ ಕಾಣಿಕೆಯಿಂದಲೇ. ಬೇರೆ ಸಾರ್ವಜನಿಕರ ಹಣದಿಂದ ತಮ್ಮ ಬದುಕನ್ನು ನಡೆಸುವವರಿಗೆ ಇಷ್ಟೊಂದು ದುರಹಂಕಾರ ಇರಬಾರದು. ಹೀಗಿದ್ದರೂ ಕೂಡ ಬಸವ ಧರ್ಮಪೀಠದ ಟ್ರಷ್ಟಿಗಳು ತಮ್ಮ ಐಶಾರಾಮಿ ಜೀವನಕ್ಕಾಗಿ ಮತ್ತು ತಮ್ಮ ಅಹಂಕಾರದ ತೃಪ್ತಿಗಾಗಿ ಹಣವನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಈಗ ಬಸವ ಧರ್ಮ ಪೀಠದ ಟ್ರಷ್ಟಿಗಳಿಗೆ ಭಕ್ತರು ಹಣ ಕೊಟ್ಟರೆ ಅದು ಪಾಪ ಕರ್ಮಕ್ಕೆ ಉಪಯೋಗವಾಗಿ ಭಕ್ತರಿಗೂ ಪಾಪ ಅಂಟುತ್ತಿದೆ. ಪಾಪ ಕಾರ್ಯಗಳಿಗೆ ಭಕ್ತರ ಹಣ ಉಪಯೋಗಿಸುವ ಟ್ರಷ್ಟಿಗಳಿಗೆ ಹಣ ನೀಡುವುದನ್ನು ನಿಲ್ಲಿಸಿದ ಮೇಲೆ ನಮಗಂಟುವ ಪಾಪ ಕಡಿಮೆಯಾಗಿದೆ.
ರಾಜಕಾರಣದಲ್ಲಿ ಪ್ರಜೆಗಳಿಗೆ ಮತ ಚಲಾಯಿಸುವ ಅಧಿಕಾರ ಮತ್ತು ಚುನಾಯಿತ ಪ್ರತಿನಿಧಿಗಳು ತಪ್ಪುಮಾಡಿದಾಗ ಪ್ರತಿಭಟಿಸುವ ಅಧಿಕಾರವಿದೆ. ಆದರೆ ಇಂದಿನ ಧರ್ಮಕಾರಣದಲ್ಲಿ ಭಕ್ತರಿಗೆ ಯಾವ ಅಧಿಕಾರವೂ ಇಲ್ಲ. ಪೂಜ್ಯ ಶ್ರೀ ಮಾತೆ ಮಹಾದೇವಿಯವರು ರಾಷ್ಟ್ರೀಯ ಬಸವದಳವನ್ನು ಕಾನೂನಾತ್ಮಕವಾಗಿ ಕಟ್ಟಲಿಲ್ಲ ಭಾವನಾತ್ಮಕವಾಗಿ ಕಟ್ಟಿದ್ದರು. ಇದು ಇಂದಿನ ಟ್ರಷ್ಟಿಗಳಿಗೆ ಅರ್ಥವಾಗಿಲ್ಲ. ಇವರು ಎಲ್ಲವನ್ನೂ ಕಾನೂನಾತ್ಮಕವಾಗಿ ನೋಡ ಹೊರಟು. ಭಾವನಾತ್ಮಕವಾದ ನಂಟಿರುವ ಅನೇಕ ಭಕ್ತರನ್ನು ಮತ್ತು ಕೆಲವು ಜಂಗಮರನ್ನು ಬಸವ ಧರ್ಮ ಪೀಠದಿಂದ ಹೊರಹಾಕಿದ್ದಾರೆ.
ನೀವು ನಮ್ಮ ಕಾರ್ಯಕ್ರಮಕ್ಕೆ ಬರಬೇಡಿ ಎಂದು ಕಾನೂನಿನ ನೆರವಿನಲ್ಲಿ ಹೇಳುವಾಗ ಸ್ವಾಭಿಮಾನ ಹೊಂದಿದ ಶರಣರಿಗೆ ತಮ್ಮ ಸ್ವಾಭಿಮಾನದ ಪ್ರತೀಕವಾಗಿ, ಗುರು ಬಸವಣ್ಣನವರು ಆದಿ ಶರಣರು, ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ತೋರಿದ ಸೌಭಿಮಾನ ಪೂರಿತವಾದ ಭಾವನಾತ್ಮಕವಾದ ಮಾರ್ಗದಲ್ಲಿ ನಡೆಯುವುದು ಅಗತ್ಯವಾಗಿದೆ ಅದಕ್ಕಾಗಿಯೇ ನಡೆಯುತ್ತಿವೆ ಸ್ವಾಭಿಮಾನಿ ಕಲ್ಯಾಣ ಪರ್ವ ಮತ್ತು ಸ್ವಾಭಿಮಾನಿ ಶರಣಮೇಳಗಳು.
ಗುರು ಬಸವಣ್ಣನವರನ್ನು ಪ್ರಜಾಪ್ರಭುತ್ವದ ಪಿತಾಮಹ ಅನುಭಾವ ಮಂಟಪವನ್ನು ಜಗತ್ತಿನ ಪ್ರಪ್ರಥಮ ಸಂಸತ್ ಎನ್ನುತ್ತಲೇ ಬಸವ ಧರ್ಮ ಪೀಠದಲ್ಲಿ ಪ್ರಜಾ ಪ್ರಭುತ್ವದ ಕೊಲೆಮಾಡಲಾಗಿದೆ. ಅನುಭಾವ ಮಂಟಪದ ಸಂಸ್ಕೃತಿಯನ್ನು ನಾಶ ಮಾಲಾಗಿದೆ. ಅಪಾರವಾದ ಭಕ್ತರ ವಿರೋಧದ ನಡುವೆಯೂ ಮಾತಾಜಿಯವರ ಕಾರುಣ್ಯಕ್ಕೆ ಪಾತ್ರರಾದ ಇಬ್ಬರು ಪೂಜ್ಯರನ್ನು ಬಸವ ಧರ್ಮ ಪೀಠದಿಂದ ಹೊರಗಟ್ಟಿದ್ದಾರೆ. ಪೀಠಕ್ಕೆ ಕಾಣಿಕೆ ಕೊಟ್ಟು ಪೀಠವನ್ನು ಬೆಳೆಸಿದ ಅನೇಕ ಶರಣರನ್ನು ನಮ್ಮ ಕಾರ್ಯಕ್ರಮಕ್ಕೆ ಬರಬೇಡಿ ಎಂದು ಹೇಳಿದ್ದಾರೆ. ಇಂತಹ ಪೂಜ್ಯರ ಮತ್ತು ಭಕ್ತರ ಸಮಾವೇಶವೇ ಸ್ವಾಭಿಮಾನಿ ಕಲ್ಯಾಣ ಪರ್ವ. ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಇಂತಹ ಕೆಟ್ಟ ಟ್ರಷ್ಟಿಗಳನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ.
ಭಕ್ತರ ಜೀವನ ಬಸವ ಧರ್ಮ ಪೀಠದ ಟ್ರಷ್ಟಿಗಳ ಒಡನಾಟವಿಲ್ಲದೆ ನಡೆಯುತ್ತದೆ. ಆದರೆ ಬಸವ ಧರ್ಮ ಪೀಠದ ಟ್ರಷ್ಟಿಗಳ ಜೀವನ ಭಕ್ತರ ಒಡನಾಟವಿಲ್ಲದೇ ನಡೆಯುವುದಿಲ್ಲ. ಇದರ ಅರಿವಿದ್ದರೂ ಅಜ್ಞಾನ ಮತ್ತು ಅಹಂಕಾರದಿಂದ ತುಂಬಿ ತುಳುಕುವ ಬಸವ ಧರ್ಮ ಪೀಠದ ಟ್ರಷ್ಟಿಗಳು ಭಕ್ತರನ್ನು ಸಂಘಟಿಸುವ ಬದಲಾಗಿ ಅವರಲ್ಲೇ ಒಡಕು ಹಟ್ಟಿಸಿ ಒಂದು ಬಣದ ಭಕ್ತರನ್ನು ಅಜ್ಞಾನದಲ್ಲಿಟ್ಟು, ಕಾರ್ಯಕರ್ಮಗಳಲ್ಲಿ ಯಾವುದೇ ಜ್ಞಾನ ನೀಡದೇ ಕೇವಲ ಜಾತ್ರೆಯಂತೆ ಮಾಡಿ ಭಕ್ತರನ್ನು ವಂಚಿಸುತ್ತಿದ್ದಾರೆ.
ಕೆಲವೊಂದು ವ್ಯವಸ್ಥೆಗಳು ಅದನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುವವರು ಇಲ್ಲವಾದಮೇಲೆ ಅವುಗಳು ಜಿಡ್ಡುಗಟ್ಟುತ್ತವೆ. ಇಂತಹ ಜಿಡುಗಟ್ಟಿದ ವವ್ಯಸ್ಥೆಯನ್ನು ಸರಿಪಡಿಸಲು ಇರುವುದು ಎರಡೇ ದಾರಿಗಳು.
1.ಹೋರಾಟದ ಮೂಲಕ 2. ಪರ್ಯಾಯ ವ್ಯವಸ್ಥೆ ನಿರ್ಮಿಸುವ ಮೂಲಕ.
ಹೋರಾಟದ ಮೂಲಕ ಸರಿಪಡಿಸಲು ಮೂಲ ವ್ಯವಸ್ಥೆ ನಿರ್ಮಾಪಕರು ಸಂಘಟನೆಯನ್ನು ಕಾನೂನಾತ್ಮಕವಾಗಿ ಕಟ್ಟದೇ ಭಕ್ತಿಯ ತಳಹದಿಯ ಮೇಲೆ ಭಾವನಾತ್ಮಕವಾಗಿ ಕಟ್ಟಿದ್ದಾರೆ. ಆದರೆ ಈಗಿನ ಟ್ರಷ್ಟಿಗಳು ಭಕ್ತಿ ಮತ್ತು ಭಾವನಾತ್ಮಕ ಸಂಬಂಧ ತೊರೆದು ಕಾನೂನಾತ್ಮಕವಾಗಿ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮಾತೆತ್ತಿದರೆ, ಕೋರ್ಟ್, ಪೋಲೀಸ್ ಠಾಣೆ ಎನ್ನುವ ಇವರು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ನಮ್ಮ ವ್ಯಾಜ್ಯಗಳು ಕೋರ್ಟಿಗೆ ಹೋಗಬಾರದು ಸಂಸ್ಥೆಯಲ್ಲಿ ಸರಕಾರ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಈಗಿನ ಟ್ರಸ್ಟಿಗಳು ಮಾತಾಜಿಯವ ಮೂಲ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಭಕ್ತರಿಗೆ ಕಾನೂನಾತ್ಮಕವಾದ ಯಾವುದೇ ಹಕ್ಕುಗಳನ್ನು ನೀಡಲಿಲ್ಲ. ಭಕ್ತರನ್ನು ಟ್ರಷ್ಟಿಗಳನ್ನಾಗಿ ಮಾಡಲಿಲ್ಲ. ಭಕ್ತರಿಂದ ಕೇವಲ ಕಾಣಿಕೆ ಪಡೆದು ದೊಡ್ಡ ಸಂಸ್ಥೆಗಳನ್ನು ಕಟ್ಟಿ ಅದನು ದುಷ್ಟರ ಕೈಗಿ ನೀಡಿ ಬಹುದೊಡ್ಡ ತಪ್ಪು ಮಾಡಿದರು ಎನಿಸುತ್ತಿದೆ.
ಬಸವ ಧರ್ಮ ಪೀಠ ಮತ್ತು ಇದರ ಎಲ್ಲಾ ಕಾರ್ಯಗಳಲ್ಲಿ ನಮ್ಮ ಲಕ್ಷ ಲಕ್ಷ ಕಾಣಿಕೆ ಇದೆ. ಕಳೆದ 18 ವರ್ಷಗಳಲ್ಲಿ ಪ್ರತಿ ವರ್ಷ ನನ್ನ ದುಡಿಮೆಯ 10% ಹಣ ನಾನು ಮಾತಾಜಿಯವರಿಗೆ ಕಾಣಿಕೆಯಾಗಿ ಸಲ್ಲಿಸುತ್ತ ಬಂದಿದ್ದೇನೆ. ಪ್ರತಿ ವರ್ಷ 50 ಸಾವಿರದಿಂದ ಒಂದು ಲಕ್ಷದ ವರೆಗೆ ಕಾಣಿಕೆ ನೀಡಿದ್ದೇನೆ. ನನಗಿಂತ ಹೆಚ್ಚು ಕಾಣಿಕೆ ನೀಡಿದ ಅನೇಕ ಸ್ವಾಭಿಮಾನಿ ಶರಣರು ಇದ್ದಾರೆ. ಆದರೂ ನಮ್ಮಂತಹ ಅನೇಕ ಶರಣರನ್ನು ಕಡೆಗಣೆಸಿ ನಮ್ಮ ಆಶಯಕ್ಕೆ ವಿರುದ್ದವಾಗಿ ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಸತ್ಯಾದೇವಿ ಮಾತೆಯವರನ್ನು ಅನೇಕ ಶರಣರನ್ನು ಬಸವ ಧರ್ಮ ಪೀಠಕ್ಕೂ ಇವರಿಗೂ ಯಾವ ಸಂಬಂಧವೂ ಇಲ್ಲ ಎನ್ನುವಂತೆ ವರ್ತಿಸುವ ಇಂದಿನ ಟ್ರಷ್ಟಿಗಳು ಅಹಂಕಾರದ ಮತ್ತು ದ್ವೇಷದ ಪರಮಾವಧಿಯನ್ನು ತಲುಪಿದ್ದಾರೆ.
ಇವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಹೋರಾಟ ಫಲ ಕೊಡುವವರೆಗೂ ಅನಿವಾರ್ಯವಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಮಾರ್ಗ ಬಿಟ್ಟರೆ ಬೇರೆ ಆಯ್ಕೆಯೇ ಸ್ವಾಭಿಮಾನಿ ಶರಣರಿಗಿಲ್ಲದಿರುವ ಕಾರಣಕ್ಕೆ ಸ್ವಾಭಿಮಾನಿ ಕಲ್ಯಾಣ ಪರ್ವ ಮತ್ತು ಸ್ವಾಭಿಮಾನಿ ಶರಣಮೇಳಗಳು ನಿರಂತರವಾಗಿ ನಡೆಯುತ್ತಿವೆ.
ಸ್ವಾಭಿಮಾನವಿರುವ ಪ್ರತಿಯೊಬ್ಬ ಶರಣ ಶರಣೆಯರು ಸ್ವಾಭಿಮಾನಿ ಕಲ್ಯಾಣ ಪರ್ವವನ್ನು ಬೆಂಬಲಿಸಿದ್ದಾರೆ. ಅದರಲ್ಲಿ ಭಾಗವಹಿಸುತ್ತಾರೆ. ಭಾವನಾತ್ಮಕವಾದ ನಂಟು ಹೊಂದಿ ನಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಗುರು ಬಸವಣ್ಣನವರ ತತ್ವದಿಂದ ಹಿಂದೆ ಸರಿದಿರುವ ಕಾವಿ ಧಾರಿಗಳಿಗೆ ನಾವು ಆಶ್ರಯ ನೀಡುತ್ತಿದ್ದೇವೆ ಎನ್ನುವುದನ್ನು ಇನ್ನೂ ಜಾಗ್ರತಗೊಳ್ಳದ ಭಕ್ತರು ಮತ್ತು ಇಲ್ಲೇ ಇದ್ದು ಈ ವ್ಯವಸ್ಥೆಯನ್ನೇ ಅಪ್ಪಾಜಿ ಮಾತಾಜಿಯವರು ಕಟ್ಟಿದ ವ್ಯವಸ್ಥೆಯಂತೆ ಮಾಡುತ್ತೇವೆ ಎನ್ನುವ ಕೆಲವರು ಎಂದಿನಂತೆ ಕಲ್ಯಾಣ ಪರ್ವ ಶರಣ ಮೇಳಗಳಲ್ಲಿ ಭಾಗವಹಿಸುತ್ತಾರೆ.
ಗುರು ಬಸವಣ್ಣನವರು ಎಷ್ಟು ಸ್ವಾಭಿಮಾನಿಯಾಗಿದ್ದರು ಎನ್ನುವುದಕ್ಕೆ ಈ ಕೆಳಗಿನ ವಚನ ಸಾಕ್ಷಿಯಾಗಿದೆ.
ವಚನ:
ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ?
ನಮಗೆ ನಮ್ಮ ಲಿಂಗದೇವನುಳ್ಳನ್ನಕ್ಕ
ನಾನಷ್ಟೇ ಏಕೆ ನಮ್ಮ ಮನೆಯ ನಾಯಿಯಯೂ ಗುರುದ್ರೋಹಿಗಳ, ಧರ್ಮ ದ್ರೋಹಿಗಳ ಮನೆಯ ಊಟವನ್ನು ತಿನ್ನದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ಗುರು ಬಸವಣ್ಣನವರು.
ವಚನ:
ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು, ಒರೆಯಾವಿನ ಬೆನ್ನ ಹರಿಯಲದೇಕಯ್ಯಾ? ಲಜ್ಜೆಗೆಡಲೇಕೆ ನಾಣುಗೆಡಲೇಕೆ? ಲಿಂದದೇವನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ.
ಊರ ಮುಂದೆ ಹಾಲಿನ ಹಳ್ಳವೇ ಹರಿಯುತ್ತಿರುವಾಗ ಒದೆಯುವ ಹಸುವಿನ ಹಿಂದೆ ನಾನೇಕೆ ಹೋಗಲಿ?
ನನಗೆ ನಮ್ಮ ಲಿಂಗದೇವನ ಕಾರುಣ್ಯವಿರುವಾಗ ಬಿಜ್ಜಳನ ಭಂಡಾರ ನನಗೇಕಯ್ಯಾ ಎಂದು ಸ್ವಾಭಿಮಾನ ಮೆರೆದವರು ನಮ್ಮ ಅಪ್ಪ ಗುರು ಬಸವಣ್ಣನವರು.
*ಹೀಗಿರುವಾಗ, ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿ ತಾಯಿಯವರ ಜ್ಞಾನ ಪರಂಪರೆಯ ವಾರಸುದಾರರಾಗಿರುವ ನಮಗೆ ಜ್ಞಾನ ದಾರಿದ್ರ್ಯತನ ಜನ್ಮ ಜನ್ಮಾಂತರದಲ್ಲೂ ಸುಳಿಯುವುದಿಲ್ಲ. ಅವರ ಜ್ಞಾನಾಮೃತದ ಹಾಲನ್ನು ಸವೆದಿರುವು ನಾವು ಒದೆಯುವ ಹಸುವಿನ ಹಿಂದೆ ಏಕೆ ಹರಿಯಬೇಕು? ಆದ್ದರಿಂದ ಅಹಂಕಾರ ತುಂಬಿದ ಅಜ್ಞಾನಿಗಳ ಸಂಗ, ಮನ ವಾಕ್ ಕಾಯವೆಂಬ ತ್ರಿಕರಣಗಳಲ್ಲಿಯೂ ದ್ವೇಷವನ್ನೇ ತುಂಬಿಕೊಂಡಿರುವವರಲ್ಲಿ ಮಾತಾಜಿಯವರ ಜ್ಞಾನ ಕಿರಣಗಳು ಪ್ರವಹಿಸಲು ಹೇಗೆ ಸಾಧ್ಯ? ಇಂಥವ ಸಂಗ ನಮಗೇಕೆ? ಅನುಭಾವ ಮತ್ತು ಭಕ್ತಿ ಪ್ರಧಾನವಾಗಿ ಕಾರ್ಯಕ್ರಮ ಮಾಡದೆ, ರಾಜಕೀಯ ಕಾರ್ಯಕ್ರಮದಂತೆ, ಜಾತ್ರೆಯಂತೆ ನಡೆಯುವ ಅವರ ಕಾರ್ಯಕ್ರಮದಿಂದ ನಗೇನೂ ಆಗಬೇಕಾಗಿಲ್ಲ. ಸ್ವಾಭಿಮಾನಿ ಶರಣರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅಲ್ಲಿಯೂ ಕೆಲವೊಮ್ಮೆ ಹೋದ ಶರಣರು *ಅಲ್ಲಿ ವೈಭವವಿದೆ ಇಲ್ಲಿ ಜ್ಞಾನವಿದೆ* ಎಂದು ಹೇಳಿದ್ದಾರೆ. ಅದಕ್ಕಾಗಿ ಸ್ವಾಭಿನದ ಸಂಕೇತವಾಗಿ ಜ್ಞಾನ ಪರಂಪರೆಯ ಉತ್ತರಾಧಿಕಾರಿಗಳ ಸಂಕೇತವಾಗಿ ಸ್ವಾಭಿಮಾನಿ ಕಲ್ಯಾಣ ಪರ್ವ ಮತ್ತು ಸ್ವಾಭಿಮಾನಿ ಶರಣಮೇಳಗಳು ನಿರಂತರವಾಗಿ ನಡೆಯುತ್ತವೆ. ಮಾತಾಜಿ ಅಪ್ಪಾಜಿಯವ ಜ್ಞಾನಾಮೃತದ ಹಾಲನ್ನು ಕುಡಿದು ಬೆಳದ ಎಲ್ಲಾ ಸ್ವಾಭಿಮಾನಿ ಶರಣರಿಗೂ ಹೃದಯ ತುಂಬಿ ಸ್ವಾಭಿಮಾನಿ ಕಲ್ಯಾಣ ಪರ್ವಕ್ಕೆ ಆಹ್ವಾನಿಸುತ್ತೇನೆ.
ನಾನೂ ಹನ್ನೆರಡನೇ ಶತಮಾನದ ಶರಣರಂತೆ ಸ್ವಾಭಿಮಾನಿಯಾಗಿದ್ದೇನೆ ಅದಕ್ಕಾಗಿ ಇತ್ತ ಬಾ ಎನ್ನದವನ ಹತ್ತಿರವೂ ಸುಳಿಯುವುದಿಲ್ಲ. ಇತ್ತ ಬಾ ಎಂದು ಕರೆಯುವ ಸದ್ಭಕ್ತರಲ್ಲಿಗೆ ಮಾತ್ರ ಹೋಗುತ್ತೇನೆ. ಇತ್ತ ಬಾ ಎಂದು ಕರೆಯುವ ದುರಭಿಮಾನಿಗಳ, ಗುರುದ್ರೋಹಿಗಳ, ಧರ್ಮದ್ರೋಹಿಗಳ, ಜ್ಞಾನ ದಾರಿದ್ರ್ಯ ಹೊಂದಿ ಶರಣ ಪರಂಪರೆ ಮರೆತವರ ಬಳಿಗೆ ಹೋಗುವ ಅಗತ್ಯ ನಮಗಿಲ್ಲ.
ಅದಕ್ಕಾಗಿ ನಾಲ್ಕನೇ ಸ್ವಾಭಿಮಾನಿ ಶರಣ ಮೇಳಕ್ಕೆಹೋಗುತ್ತೇವೆ. ಆ ದಾಸೋಹದಲ್ಲಿ ಸವೆಯುತ್ತೇವೆ. ಸ್ವಾಭಿಮಾನಿ ಶರಣರನ್ನು ಜಂಗಮರನ್ನು ಹೃದಯದಲ್ಲಿಂಬಿಟ್ಟುಕೊಂಡು ಗುರು ಬಸವ ಭಕ್ತಿಯನ್ನು ಆದಿ ಶರಣ ಸ್ವಾಭಿಮಾನಿ ಪರಂಪರೆಯನ್ನು ಮೆರೆಯುತ್ತೇವೆ.

–ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ.