Chief Minister's program: Koppal District In-charge Minister reviews preparations

ಕೊಪ್ಪಳ ಅಕ್ಟೋಬರ್ 04 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 6ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಜಿಲ್ಲಾ ವ್ಯಾಪ್ತಿಯ ರೂ. 2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದ ನಿಮಿತ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಶನಿವಾರ ಸಿದ್ಧತೆಗಳನ್ನು ಪರಿಶೀಲಿಸಿದರು.
ಅ. 6ರ ಕಾರ್ಯಕ್ರಮಕ್ಕೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಮಾರುತಿ ಸುಜೂಕಿ ಶೋ ರೂಂ ಎದುರುಗಡೆಯ ಅಗಡಿ ಲೇಔಟನಲ್ಲಿ ನಿರ್ಮಿಸಲಾಗಿರುವ ಮುಖ್ಯ ವೇದಿಕೆ, ಮಾಧ್ಯಮದ ಗ್ಯಾಲರಿ, ಗಣ್ಯರು, ಸಾರ್ವಜನಿಕರಿಗೆ ಕೂಡುವ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳು ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಸಚಿವರು ವೀಕ್ಷಣೆ ಮಾಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇದೇ ವೇಳೆ ಸಚಿವರು ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಫಲಾನುಭವಿಗಳು ಒಳಗೊಂಡಂತೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದು, ಎಲ್ಲರಿಗೂ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು. ಕಾರ್ಯಕ್ರಮಕ್ಕೆ ಬರುವ ಜನರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಭದ್ರತೆಯನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.
ಫಲಾನುಭವಿಗಳನ್ನು ಕರೆದುಕೊಂಡು ಬರುವ ಬಸ್‌ಗಳ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಿ ಸರಿಯಾಗಿ ನಿರ್ವಹಿಸಬೇಕು. ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳ ಮೂಲಕ ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತಂತೆ ಸಮಗ್ರ ಮಾಹಿತಿ ಸಿಗುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮತ್ತಿತರರಿದ್ದರು.
