Breaking News

ಗಾಂಧಿ ಬಳಗ’ದಿಂದ ಬಿನ್ನಾಳದಲ್ಲಿ ಅರ್ಥಪೂರ್ಣ ‘ಗಾಂಧಿ ಜಯಂತಿ’

The short URL of the present article is: https://kalyanasiri.in/wd7q
Meaningful 'Gandhi Jayanti' in Binnala from 'Gandhi Balag'

Screenshot 2025 10 02 20 59 11 91 E307a3f9df9f380ebaf106e1dc980bb61296491259022379198

ಬಿನ್ನಾಳ (ಕುಕನೂರು ತಾ.): ಮದ್ಯ ಮಾರಾಟ ಹಾಗೂ ಜೂಜಾಟ ನಿಷೇಧದ ಮಹತ್ವದ ನಿರ್ಣಯ ತೆಗೆದುಕೊಂಡ ಗ್ರಾಮಸ್ಥರನ್ನು ಅಭಿನಂದಿಸುವ ನಿಟ್ಟಿನಲ್ಲಿ ಕೊಪ್ಪಳದ ಗಾಂಧಿ ಬಳಗ ಗುರುವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಗ್ರಾಮದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.

ಜಾಹೀರಾತು

‘ಗಾಂಧಿ ಜಯಂತಿ’ಯನ್ನು ಅರ್ಥಪೂರ್ಣವಾಗಿ ಆಚರಿಸಿದ ಬಿನ್ನಾಳ ಗ್ರಾಮಸ್ಥರನ್ನು ‘ಗಾಂಧಿ ಬಳಗ’ದ ಸುಮಾರು 70ಕ್ಕೂ ಹೆಚ್ಚು ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿ, ಗೌರವಿಸಿದರು.

ಕೊಪ್ಪಳದಿಂದ ನಸುಕಿನ ಜಾವ ಹೊರಟು, ಭಟಪನಹಳ್ಳಿಯಿಂದ ಚಿಕೇನಕೊಪ್ಪ ಮೂಲಕ ಪಾದಯಾತ್ರಿಗಳು ಗ್ರಾಮವನ್ನು ತಲುಪುತ್ತಿದ್ದಂತೆ, ಪುಷ್ಪವೃಷ್ಟಿ ಮಾಡಿ ಸಂಗೀತ ವಾದ್ಯಗಳೊಂದಿಗೆ ಊರಿನ ಜನರು ಖುಷಿಯಿಂದ ಬರಮಾಡಿಕೊಂಡರು, ಗ್ರಾಮದ ಬೀದಿಗಳ ಮೂಲಕ ಯಾತ್ರೆಯು ದೇವಸ್ಥಾನ ತಲುಪಿತು. ದೇಗುಲದ ಮುಂದಿನ ರಸ್ತೆಯಲ್ಲಿ ಸರಳವಾಗಿ ಅಲಂಕರಿಸಲಾಗಿದ್ದ ವೇದಿಕೆಯಲ್ಲಿ ಕಾರ್ಯಕ್ರಮಗಳು ಜರುಗಿದವು. ಇಲ್ಲಿನ ಅಶೋಕ ವೃತ್ತದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.

ಆಶೀರ್ವಚನ ನೀಡಿದ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಗಾಂಧಿ ಆಶಯವನ್ನು ಸಾಕಾರಗೊಳಿಸಿದ ಬಿನ್ನಾಳ ಗ್ರಾಮಸ್ಥರನ್ನು ಅಭಿನಂದಿಸಿದರು. “ಸರಳ ಜೀವನವೇ ಗಾಂಧೀಜಿಯ ಧ್ಯೇಯವಾಗಿದೆ. ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿದ್ದರೆ ಬದುಕು ಸುಂದರವಾಗಿರುತ್ತದೆ. ಇಂಥ ಬದುಕಿಗೆ ಬಿನ್ನಾಳ ಗ್ರಾಮಸ್ಥರು ಮುಂದಾಗಿದ್ದು, ಇದು ಉಳಿದ ಹಳ್ಳಿಗಳಿಗೂ ವಿಸ್ತರಿಸಬೇಕು” ಎಂದು ಸ್ವಾಮೀಜಿ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಗಾಂಧೀಜಿಯ ಆದರ್ಶವನ್ನು ಬಿನ್ನಾಳ ಜನರು ಪಾಲಿಸಲು ನಿರ್ಧರಿಸಿದ್ದು ಸಂತಸದ ಸಂಗತಿ. ಈ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಸಮಾರಂಭದಲ್ಲಿ ದೂರವಾಣಿ ಮೂಲಕ ಗ್ರಾಮಸ್ಥರನ್ನು ಉದ್ದೇಶಿಸಿ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, “ಮದ್ಯ ಮಾರಾಟ ಹಾಗೂ ಜೂಜಾಟ ನಿಷೇಧಿಸುವ ಮೂಲಕ ಬಿನ್ನಾಳ ಗ್ರಾಮ ಮಾದರಿಯಾಗಿದೆ. ಮುಂದಿನ ಪೀಳಿಗೆಯ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ತೆರನಾದ ನಿರ್ಧಾರ ತೆಗೆದುಕೊಂಡ ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು” ಎಂದು ಹೇಳಿದರು.

‘ಗ್ರಾಮಾಭಿವೃದ್ಧಿ, ಆರೋಗ್ಯ ಮತ್ತು ನೈರ್ಮಲ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಪ್ರಭುರಾಜ ನಾಯಕ್, “ವಾಣಿಜ್ಯ ಬೆಳೆಗಳ ಅಬ್ಬರದಲ್ಲಿ ಸಿರಿಧಾನ್ಯಗಳು ಕಾಣೆಯಾಗಿವೆ. ಆರೋಗ್ಯಯುತ ಜೀವನಕ್ಕೆ ಬೇಕಾದ ಅಂಶಗಳನ್ನು ಮರೆತ ಕಾರಣ, ಈಗ ಜನರ ಬದುಕು ಸಂಕಟಕ್ಕೆ ಸಿಲುಕಿದೆ. ಗ್ರಾಮ ಸ್ವರಾಜ್ಯ ಸ್ಥಾಪನೆಯ ಗಾಂಧೀಜಿಯ ಆಶಯಗಳನ್ನು ಸಾಕಾರಗೊಳಿಸುವುದು ಅಗತ್ಯವಾಗಿದ್ದು, ಬಿನ್ನಾಳ ಗ್ರಾಮ ಇಂಥದೊಂದು ಪ್ರಯತ್ನಕ್ಕೆ ಮಾರ್ಗದರ್ಶನ ನೀಡಿದೆ” ಎಂದು ನುಡಿದರು.

ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತ ಆನಂದತೀರ್ಥ ಪ್ಯಾಟಿ, “ಭಾರತದ ಆತ್ಮ ಹಳ್ಳಿಯಲ್ಲಿದೆ ಅಂತ ಗಾಂಧೀಜಿ ಹೇಳಿದ್ದರು. ಹಳ್ಳಿಯೊಂದು ಮದ್ಯ- ಜೂಜು ನಿಷೇಧದ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ಊರಿನ ಹಿರಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ಮುಂದುವರಿಸುವುದು ಯುವಕರ ಜವಾಬ್ದಾರಿ. ಈ ಚಳವಳಿ ಮುಂದಿನ ಹಳ್ಳಿಗೆ ಹಬ್ಬುವ ಮೂಲಕ, ಬಹುಕಾಲ ಚರಿತ್ರೆಯಲ್ಲಿ ಉಳಿಯಲಿದೆ” ಎಂದರು.

ಬಿನ್ನಾಳ ಗ್ರಾಮದ ಇತಿಹಾಸ ಕುರಿತು ಡಾ. ಸಿದ್ಧಲಿಂಗಪ್ಪ ಕೊಟ್ನೇಕಲ್ ಮಾತನಾಡಿದರು. ಗವಿಮಠ ಶ್ರೀಗಳು ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರ ಸಂದೇಶಗಳನ್ನು ಬಸವರಾಜ ಸವಡಿ ಓದಿದರು.

ತಂಗಡಗಿ ಶ್ರೀ ಹಡಪದ ಅಪ್ಪಣ್ಣ ಪೀಠದ ಸ್ವಾಮೀಜಿಗಳು, ರಾಜ್ಯ ಸರ್ಕಾರಿ ನೌಕಕರ ಸಂಘದ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ, ಗಾಂಧಿ ಬಳಗದ ಸದಸ್ಯರಾದ ಬಸವರಾಜ ಸವಡಿ, ಪ್ರಮೋದ ಕುಲಕರ್ಣಿ, ಶರಣಪ್ಪ ಬಾಚಲಾಪುರ ಇತರರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಂಡಿತ್ ಮಾರುತಿ ನಾವಲಗಿ ಅವರಿಂದ ಶಹನಾಯ್ ವಾದನ ನಡೆಯಿತು. ಶಂಕರ ಬಿನ್ನಾಳ ಹಾರ್ಮೋನಿಯಂ, ಪುಟ್ಟರಾಜ ಬಿನ್ನಾಳ ಕೀಪ್ಯಾಡ್ ಹಾಗೂ ಕುಮಾರ್ ಬಿನ್ನಾಳ ತಬಲಾ ಸಾಥ್ ನೀಡಿದರು..ಇದರ ಜತೆಯಲ್ಲೇ ಸಮನ್ವಿ, ಪ್ರತಿಭಾ, ಪೂಜಾ, ತೇಜಸ್ವಿನಿ, ಮಹಾಂತೇಶ್ ಹಾಗೂ ಯೋಗಣ್ಣ ಅವರಿಂದ ಗಾಂಧಿ ಭಜನ್ ಜರುಗಿತು.

ಅಂಚೆ ಕಾರ್ಡಿನಲ್ಲಿ ಗಾಂಧಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಪ್ರದಾನ ಮಾಡಲಾಯಿತು. ಜೀವನಸಾಬ ಬಿನ್ನಾಳ ಸ್ವಾಗತಿಸಿದರು. ಪ್ರಾಣೇಶ ಪೂಜಾರ ನಿರೂಪಿಸಿದರು. ನಾಗರಾಜ ನಾಯಕ ಡೊಳ್ಳಿನ ಪ್ರತಿಜ್ಞಾ ವಿಧಿ ಬೋಧಿಸಿದರು.

ಚಿಕೇನಕೊಪ್ಪದಲ್ಲಿ ಸ್ವಾಗತ: ಇದಕ್ಕೂ ಮುನ್ನ ಪಾದಯಾತ್ರೆಯನ್ನು ಚಿಕೇನಕೊಪ್ಪದಲ್ಲಿ ಗ್ರಾಮಸ್ಥರು ಗೌರವದಿಂದ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, “ಮೌನತಪಸ್ವಿ ಚನ್ನವೀರ ಶರಣರು ಹಾಗೂ ಹಿರಿಯ ಸಾಹಿತಿ, ವಿದ್ವಾಂಸ ಡಾ. ದೇವೇಂದ್ರಕುಮಾರ ಹಕಾರಿ ಅವರಂತಹ ದಿಗ್ಗಜರನ್ನು ಕೊಟ್ಟ ಗ್ರಾಮವು ಸ್ವಾತಂತ್ರ್ಯ ಹೋರಾಟ ಹಾಗೂ ಹೈದರಾಬಾದ್ ವಿಮೋಚನೆಯಲ್ಲಿಯೂ ಭಾಗವಹಿಸಿದೆ” ಎಂದು ಬಣ್ಣಿಸಿದರು.

ಚಿಕ್ಕೇನಕೊಪ್ಪದಲ್ಲಿ 1947ರ ಶ್ರಾವಣಮಾಸದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದಾಗ ಸೆಪ್ಟಂಬರ್ 12ರಂದು ಮಹದೇವಪ್ಪ ಹುಚ್ಚಪ್ಪ ದೊಡ್ಡಮನಿ, ತೇದಿ, ವಕ್ಕಳದ ಚನ್ನಪ್ಪ, ಅಡಿಗೆ ಮನಿ ಶಿವಲಿಂಗಪ್ಪ, ಮಲ್ಲಪ್ಪ ಹಕಾರಿ, ಮಹಾಲಿಂಗಯ್ಯ, ಅಕ್ಕಸಾಲಿ ಗುರಪ್ಪ, ದೇವಪ್ಪ ಮೊದಲಾದವರು ‘ವಂದೇ ಮಾತರಂ’ ಘೋಷಣೆ ಹಾಕುತ್ತ ಚಳವಳಿ ನಡೆಸಿದರು. ಈ ಸತ್ಯಾಗ್ರಹಿಗಳನ್ನು ಬಂಧಿಸಿದ ಪೋಲೀಸರು, ಬಗೆಬಗೆಯಾಗಿ ಹಿಂಸೆ ನೀಡಿ ಅವರ ಮನೆಗಳನ್ನು ಲೂಟಿ ಮಾಡಿದರು. ಮಹಾದೇವಪ್ಪ ಅವರು ಸ್ಥಾಪಿಸಿದ ವಾಚನಾಲಯವನ್ನು ಸುಟ್ಟು ಬೂದಿ ಮಾಡಿದ ಘಟನೆಯನ್ನು ಸ್ಮರಿಸಿದರು. “ಈಗ ಚಿಕೇನಕೊಪ್ಪ ಗ್ರಾಮಸ್ಥರು ಕೂಡ ಸ್ವಯಂ ಪ್ರೇರಣೆಯಿಂದ ಮದ್ಯ ಮಾರಾಟ ಮುಕ್ತಗೊಳಿಸಲು ಮುಂದಾಗಿರುವುದು ಶ್ಲಾಘನೀಯ” ಎಂದು ಡೊಳ್ಳಿನ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ್ತಿ ಶಾರವ್ವ ಶಿವಪ್ಪ ಕಂಬಳಿ ಅವರ ಮನೆಗೆ ತೆರಳಿದ ಪಾದಯಾತ್ರಿಗಳು, ಅವರನ್ನು ಸತ್ಕರಿಸಿ ಗೌರವಿಸಿದರು.

The short URL of the present article is: https://kalyanasiri.in/wd7q

About Mallikarjun

Check Also

screenshot 2025 10 07 20 38 18 90 a71c66a550bc09ef2792e9ddf4b16f7a.jpg

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

Many of my deepfake videos are circulating everywhere: Nirmala Sitharaman ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.