Welfare Revolution"
The massacre of refugees

ಲಿಂಗಾಯತ ಧರ್ಮದ ಸಿದ್ಧಾಂತವನ್ನು ಉಳಿಸಲು ಹುತಾತ್ಮರಾದ ಹರಳಯ್ಯ-ಕಲ್ಯಾಣಮ್ಮ ದಂಪತಿಗಳು..
ಪಾದರಕ್ಷೆ ತಯಾರಿಸುವ ಸಮಗಾರ ಜಾತಿಯ ಹರಳಯ್ಯನವರ ಮನೆಯಲ್ಲಿ ಬಸವಣ್ಣನವರು ಪ್ರಸಾದ ಮುಗಿಸಿಕೊಂಡು ಹೊರಡುವಾಗ ಹರಳಯ್ಯ ಶರಣು ಎಂದು ವಂದಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಬಸವಣ್ಣನವರು ತಲೆಬಾಗಿ ಶರಣು ಶರಣಾರ್ಥಿ ಎಂದು ಎರಡು ಬಾರಿ ವಂದಿಸುತ್ತಾರೆ. ಬಸವಣ್ಣನವರು ತನಗೆ ತೋರಿದ ಗೌರವಕ್ಕೆ, ಪ್ರೀತಿಗೆ ಅಚ್ಚರಿಯಿಂದ ರೋಮಾಂಚಿತನಾದ ಹರಳಯ್ಯ ಈ ಘಟನೆಯನ್ನು ತನ್ನ ಪತ್ನಿ ಕಲ್ಯಾಣಮ್ಮನ ಬಳಿ ಹೇಳಿದರು. ಬಸವಣ್ಣನವರ ಪ್ರೀತಿಗೆ ಏನಾದರೂ ಉಡುಗೊರೆ ಕೊಡಲೇ ಬೇಕೆಂದು ಕಲ್ಯಾಣಮ್ಮ ಚಿಂತಿಸಿ ತಮ್ಮ ಮೈ ಚರ್ಮ ತೆಗೆದು ಚಮ್ಮಾವುಗೆ ಮಾಡಲು ಗಂಡನಿಗೆ ಹೇಳುತ್ತಾರೆ. ಹರಳಯ್ಯ ಇದಕ್ಕೆ ಒಪ್ಪಿಕೊಂಡು ಹಲವು ದಿನಗಳ ಕಾಲ ಹಗಲು ಇರುಳು ಶ್ರಮಿಸಿ ತನ್ನ ಹಾಗು ಪತ್ನಿಯ ಚರ್ಮವನ್ನು ತೆಗೆದು ಸುಂದರವಾದ ಒಂದು ಜೊತೆ ಪಾದರಕ್ಷೆಯನ್ನು ತಯಾರು ಮಾಡಿ, ಅವುಗಳನ್ನು ಶ್ವೇತ ವಸ್ತ್ರದಲ್ಲಿ ಸುತ್ತಿ, ಎದೆಗವಚಿಕೊಂಡು ಆಸ್ಥಾನಕ್ಕೆ ತೆರಳಿ ಬಸವಣ್ಣನವರಿಗೆ ಕೊಟ್ಟು, ಇವುಗಳನ್ನು ಧರಿಸಿ ತಾವು ಈ ಧರೆಯ ಮೇಲೆ ಓಡಾಡಿದರೆ ನನ್ನ ಜನ್ಮ ಸಾರ್ಥಕ ಎಂದು ಹರಳಯ್ಯ ದಂಪತಿಗಳು ಬಸವಣ್ಣನವರಲ್ಲಿ ಭಿನ್ನವಿಸಿಕೊಳ್ಳುತ್ತಾರೆ. ಹರಳಯ್ಯನ ಪ್ರೀತಿ, ಕಂಡು ಅಚ್ಛರಿಗೊಳಗಾದ ಬಸವಣ್ಣನವರು, ಈ ಪಾದುಕೆಗಳನ್ನು ಕಾಲಲ್ಲಿ ಧರಿಸುವಷ್ಟು ಯೋಗ್ಯ ನಾನಲ್ಲ, ಶರಣರ ಚರ್ಮದಿಂದ ಮಾಡಿದ ಚಮ್ಮಾವುಗೆಗಳು ದೇವರಿಗೆ ಮಾತ್ರ ಮೀಸಲು ಎಂದು ತಿಳಿಸಿ ಅವುಗಳನ್ನು ತನ್ನ ಶಿರದ ಮೇಲೆ ಹೊತ್ತುಕೊಂಡು ಮರಳಿ ಕೊಡುತ್ತಾರೆ. ಹರಳಯ್ಯ ಪಾದರಕ್ಷೆಗಳನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಬ್ರಾಹ್ಮಣರಾದ ಮಧುವರಸರು ಎದುರಾಗಿ ಸುಂದರವಾದ ಚಮ್ಮಾವುಗೆ ನೋಡಿ ಕೇಳಿ, ಕೊಡದಿದ್ದಾಗ ಅವುಗಳನ್ನು ಕಸಿದುಕೊಂಡು ಧರಿಸಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೈಯಲ್ಲಾ ಉರಿ ಪ್ರಾರಂಭವಾಯುತು. ಹರಳಯ್ಯನ ಮನೆಯ ಚರ್ಮ ತೊಳೆದ ನೀರಿನಿಂದ ಸ್ನಾನ ಮಾಡಿದಾಗ ಮೈ ಉರಿ ಕಡಿಮೆಯಾಯಿತು. ಈ ಘಟನೆಯಿಂದ ಶರಣರ ಮಹತ್ವವನ್ನು ಅರಿತ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು..
ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಜಾತಿ ಸಂಕರಗೊಂಡು ಬಸವಣ್ಣನವರ ಜಾತ್ಯತೀತ ಧರ್ಮವಾದ ಲಿಂಗವಂತ ಧರ್ಮದ ಭಾಗವಾದರು. ನಡೆ ನುಡಿ ಸಿದ್ಧಾಂತದ ಶರಣರು ’ಜಾತಿ ನಿರರ್ಥಕ, ನೀತಿ ಲೋಕ ರಕ್ಷಕ’ ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಪ್ರತಿಯೊಬ್ಬರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನೀತಿವಂತರಾದಾಗ ಅವರ ವರ್ಣ, ಜಾತಿ ಮತ್ತು ಉಪಜಾತಿಗಳು ನಿರ್ನಾಮವಾಗಿ ಕೇವಲ ಶರಣರಾದರು. ಜಾತಿ ಮತ್ತು ಅಸ್ಪೃಶ್ಯತೆಯ ವಿಷವನ್ನು ನಮ್ಮ ಸಮಾಜದಿಂದ ಹೊರಹಾಕಿ ಎಲ್ಲರೀತಿಯ ಸಮಾನತೆಯನ್ನು ಸಾಧಿಸುವುದು ಶರಣರ ಉದ್ದೇಶವಾಗಿತ್ತು. ಇಂಥ ಘನ ಉದ್ದೇಶದಿಂದಲೇ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಶರಣರು ಏರ್ಪಡಿಸಿದರು. ವರ್ಣ ಮತ್ತು ಜಾತಿಪದ್ಧತಿಯ ಮೇಲೆ ನಿಂತ ಮನುಧರ್ಮದ ಸಮಾಜಕ್ಕೆ ದೊಡ್ಡ ಸವಾಲು ಒಡ್ಡಿ ಸಮಾನತೆಯ ಕ್ರಾಂತಿ ಕಹಳೆಯನ್ನು ಊದಿದರು. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆ ಆಯಿತು.
ಆದರೆ ಮನುವ್ಯಾದಿಗಳು ರೊಚ್ಚಿಗೆದ್ದರು. ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ಅನುಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಶರಣರು ಸಾವು ನೋವು ಮತ್ತು ಕಷ್ಟ ನಷ್ಟಗಳನ್ನು ಅನುಭವಿಸಿದರೂ ತಮ್ಮ ನಡೆ ನುಡಿ ಸಿದ್ಧಾಂತವನ್ನು ಬಿಡದೆ ಅದಕ್ಕಾಗಿ ಅವರು ಎಂಥ ತ್ಯಾಗಕ್ಕೂ ಸಿದ್ಧರಾದರು. ಅದಕ್ಕಾಗಿ ನಾಡು ಎಂದೂ ಕಂಡರಿಯದಂಥ ದುರಂತವನ್ನು ಅನುಭವಿಸಿದರು. ಕಾದ ಕಬ್ಬಿಣದ ಸಲಾಕೆಯಿಂದ ಅವರ ಕಣ್ಣು ಕಿತ್ತರು, ಆನೆ ಕಾಲಿಗೆ ಕಟ್ಟಿ ಎಳೆಹೂಟೆ ಶಿಕ್ಷೆ ನೀಡಿದರು, ಚಿತ್ರ ಹಿಂಸೆ ಕೊಟ್ಟು ಹತ್ಯೆ ಮಾಡಿದರು.. ಸಮಗಾರ ಹರಳಯ್ಯ, ಕಲ್ಯಾಣಮ್ಮ, ಲಾವಣ್ಯ, ಶೀಲವಂತ ಮತ್ತು ಮಧುವರಸರು ಹುತಾತ್ಮರಾದರು.
ಸನಾತನವಾದಿ ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಲಿಂಗಾಯತರ ಹತ್ಯಾಕಾಂಡವಾಯಿತು.
ವಿಭೂತಿ-ರುದ್ರಾಕ್ಷಿ ಧರಿಸಿದವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಲಿಂಗಾಯತರ ಮನೆಗಳನ್ನು ಸುಟ್ಟು ನಾಶ ಮಾಡಲಾಯಿತು. ಮಹಿಳೆ ಮಕ್ಕಳನ್ನೂ ಹಿಂಸೆ ಕೊಟ್ಟು ಕೊಂದರು. ಶರಣರ ಸಹಸ್ರಾರು ವಚನ ಕಟ್ಟುಗಳನ್ನು ವೈದಿಕಶಕ್ತಿಗಳು ಸುಟ್ಟು ಹಾಕಿದವು, ಲಕ್ಷ ಲಕ್ಷ ವಚನಗಳ ತಾಡೋಲೆ ಕಟ್ಟುಗಳು ಬೆಂಕಿಗೆ ಆಹುತಿಯಾದವು. ಶೋಷಿತ ಜನರನ್ನು ವಿಮೋಚನೆಗೊಳಿಸುವಂಥ ವಚನಸಾಹಿತ್ಯವನ್ನು, ಶರಣರನ್ನು, ಸಂಪ್ರದಾಯವಾದಿಗಳು ಕಂಡ ಕಂಡಲ್ಲಿ ನಾಶ ಮಾಡ ತೊಡಗಿದರು. ಲಿಂಗಾಯತ ಮತ್ತು ಬಿಜ್ಜಳನ ಸೈನಿಕರ ನಡುವೆ ವಚನ ಸಾಹಿತ್ಯಕ್ಕಾಗಿ ಹೋರಾಟ ನಡೆಯಿತು, ನಂತರ ನಡೆದ ದಂಗೆಯಿಂದ ಬಿಜ್ಜಳನು ಕೊಲ್ಲಲ್ಪಡುತ್ತಾನೆ. ಇದೇ 12 ನೇ ಶತಮಾನದ ಬಸವಕ್ರಾಂತಿ – ಶರಣರ ಕ್ರಾಂತಿ – ಕಲ್ಯಾಣ ಕ್ರಾಂತಿ ಎಂದು ಪ್ರಸಿದ್ಧಿ ಪಡೆದಿದೆ. ಈ ಅನಿರೀಕ್ಷಿತ ಕ್ರಾಂತಿಯಿಂದ ಶರಣರು ಚೆಲ್ಲಾಪಿಲ್ಲಿಯಾಗುತ್ತಾರೆ. ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸುತ್ತಾರೆ. ವಚನ ಸಾಹಿತ್ಯ ಹೊತ್ತು ಸಿದ್ದರಾಮರು ಸೊಲ್ಲಾಪುರದ ಕಡೆ, ಚನ್ನಬಸವಣ್ಣರು ಪಶ್ಚಿಮ ಘಟ್ಟದ ಉಳವಿಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಶರಣರು ಕಟ್ಟಿದ ಕಲ್ಯಾಣ ರಾಜ್ಯ ನಾಶವಾಗಿ ಮತ್ತೆ ಮನು ರಾಜ್ಯ ಆರಂಭವಾಯಿತು.
ಇಂದು ಲಿಂಗಾಯತರು ಎಂದು ಕರೆಯಿಸಿಕೊಳ್ಳುವವರ ಹೃದಯಗಳಲ್ಲಿ ನಿರಂತರ ನೋವಿನ ಜ್ವಾಲೆಯಾಗಿ ಅವರ ತ್ಯಾಗ ಜೀವಂತವಾಗಿರಬೇಕಿತ್ತು. ಆದರೆ ನಮ್ಮ ಜನರ ವಿಸ್ಮೃತಿಯಿಂದಾಗಿ ಹತ್ತಾರು ಸಹಸ್ರ ಶರಣರ ಸಾವು ನೋವುಗಳು ನಮಗೆ ಬಾಧಿಸದೆ ಮರೆಯಾಗಿವೆ. ಎಲ್ಲಾ ಕಾಯಕಜೀವಿ ಶರಣರ ಈ ತ್ಯಾಗಕ್ಕೆ ಬೆಲೆ ಇಲ್ಲದಂತಾಗಿದೆ. ಅದಕ್ಕಾಗಿ ಲಿಂಗಾಯತರು ಜಾಗೃತರಾಗಿ ಶರಣರು ಹೋರಾಟ ಮಾಡಿ ಉಳಿಸಿಕೊಟ್ಟಿರುವ ವಚನ ಸಾಹಿತ್ಯವನ್ನು ಸಾಧ್ಯವಾದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಆವಾಗಲೆ ನಮ್ಮ ಹುತಾತ್ಮ ಶರಣರ ತ್ಯಾಗಕ್ಕೆ ಒಂದು ಬೆಲೆ…💐
ಶರಣು ಶರಣಾರ್ಥಿಗಳು..🙏