The youth community should develop the quality of questioning - DIGP Ravi D. Channannavar
ಗಂಗಾವತಿ :ಯುವ ಸಮುದಾಯಕ್ಕೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು,ಮತ್ತು ಪ್ರತಿಯೊಬ್ಬರೂ ಎಲ್ಲ ವಿಷಯಗಳ ಕುರಿತು ಜ್ಞಾನ ಪಡೆದು, ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳುವುದು ತುರ್ತು ಅಗತ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ರಾಜ್ಯ ಅಗ್ನಿಶಾಮಕ ದಳದ ಡಿಐಜಿಪಿ ರವಿ ಡಿ.ಚನ್ನಣ್ಣನವರ್ ಅವರು ಹೇಳಿದರು.
ಶನಿವಾರ ಸಾಯಂಕಾಲ ನಗರದ ಅಮರ್ ಆಸ್ಪತ್ರೆ ಆವರಣದಲ್ಲಿ ಲಿವ್ ವಿಥ್ ಹ್ಯೂಮಾನಿಟಿ ಹಾಗೂ ಕಿಷ್ಕಿಂದ ಯುವ ಚಾರಣ ಬಳಗದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಬಲಿಷ್ಠ ವ್ಯಕ್ತಿತ್ವ – ಬಲಿಷ್ಠ ರಾಷ್ಟ್ರ ವಿಷಯ ಕುರಿತು ಉಪನ್ಯಾಸ ನೀಡುತ್ತ
ಏನಾದರೂ ಸಾಧಿಸಬೆಕಾದರೆ ಇನ್ನೊಬ್ಬರ ಮೇಲೆ ನಂಬಿಕೆ ಇಡಬಾರದು, ನಮ್ಮ ಉದ್ದಾರ, ನಮ್ಮ ವ್ಯಕ್ತಿತ್ವ ನಿರ್ಮಾಣ ನಮ್ಮಿಂದಾನೇ ಆಗಬೇಕು. ರಾಜ್ಯದಲ್ಲಿ ಬುದ್ದಿವಂತರ ಕೊರತೆ ಇಲ್ಲ, ಆದರೆ ಸಮಾಜದ ಒಳಿತಿಗೆ ಬುದ್ದಿವಂತಿಕೆ ತೋರಿಸುವವರ ಕೊರತೆ ಎದುರಾಗಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಸಮಾನ ಅವಕಾಶ, ಸಮಾನ ಶಿಕ್ಷಣ ದೊರೆಯಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಆಸಕ್ತ ವೃತ್ತಿಪರ ಶಿಕ್ಷಣ ವಿದ್ಯಾಭ್ಯಾಸ ಮಾಡಲು ಯಾವುದೇ ತೊಂದರೆ ಆಗದಿರುವ ವಾತಾವಾರಣ ಸಮಾಜದಲ್ಲಿ ನಿರ್ಮಾಣವಾಗಬೇಕು.
ಜೊತೆಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗಬೇಕು ಎಂದರು.ಪ್ರೌಢ ವಯಸ್ಸಿನಲ್ಲಿ ನಾವು ಯಾವ ವಿಚಾರ, ಆಚರಗಳ ಪಾಲನೆ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಿರ್ಧಾರ ಆಗುತ್ತದೆ. ಯುವ ಸಮುದಾಯ ಮೊಬೈಲ್ ಗೀಳಿಗೆ ಬೀಳದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಒತ್ತು ನೀಡಬೇಕು.
ಸೋಮಾರಿತನ ಬೆಳೆಸಿಕೊಳ್ಳದೇ ದೊರೆತ ಅವಕಾಶಗಳನ್ನು ಕೈಚೆಲ್ಲಬಾರದು. ಗಟ್ಟಿಯಾದ ವ್ಯಕ್ತಿತ್ವ ಎಂಬುದು ನಮ್ಮ ಅವಿಭಾಜ್ಯ ಅಂಗ ಆಗಬೇಕು. ಹಿಂದೆ ಖಡ್ಗ ಜಗತ್ತು ಆಳಿದ್ದರೆ, ಇಂದು ವಿದ್ಯೆ ಜಗತ್ತು ಆಳುತ್ತಿದೆ. ಹೀಗಾಗಿ, ಎಲ್ಲರೂ ನಿರಂತರ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗಂಗಾವತಿ ತಾಲೂಕಿನ ಸಮಾನ ಮನಸ್ಕರು ಯುವ ಚಾರಣ ಬಳಗ ಕಟ್ಟಿಕೊಂಡು ಅಂಜನಾದ್ರಿಯನ್ನು ನಾಲ್ಕು ಬಾರಿ ಸ್ವಚ್ಛಗೊಳಿಸಿದ್ದಾರೆ. ಕಿಷ್ಕಿಂದ ಭಾಗದ ಐತಿಹಾಸಿಕ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ರವಿ ಡಿ.ಚನ್ನಣ್ಣನವರ್ ಬಣ್ಣಿಸಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಕ್ಕಳ ತಜ್ಞರು ಹಾಗೂ ಕೆವೈಟಿಸಿ ಮಾರ್ಗದರ್ಶಕರಾದ ಡಾ.ಅಮರೇಶ ಪಾಟೀಲ್ ಅವರು ಮಾತನಾಡಿ, ಕಡುಬಡತನದಲ್ಲಿ ಹುಟ್ಟಿ ಉನ್ನತ ಸ್ಥಾನ ಪಡೆದಿರುವ ರವಿ ಡಿ.ಚನ್ನಣ್ಣನವರ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು. ಎಲ್ಲರಿಗೂ ನಮ್ಮತನದ ಅರಿವು ಇರಬೇಕು.
ನಮ್ಮ ಕಿಷ್ಕಿಂದ ಕ್ಷೇತ್ರ ಪುಣ್ಯ ಕ್ಷೇತ್ರವಾಗಿದೆ. ದಸರಾ ಆರಚಣೆಗೆ ಗಂಗಾವತಿಯೇ ಮೂಲವಾಗಿದೆ ಎಂದರು. ನಂತರ ಕುಮಾರರಾಮಬೆಟ್ಟ, ಹಿರೇಬೆಣಕಲ್ ಮೋರೇರ್ ಬೆಟ್ಟ, ಅಂಜನಾದ್ರಿ, ಹಂಪಿ, ಆನೆಗೊಂದಿ ಇತಿಹಾಸದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಮುಖರಾದ ಕೆ. ಪಂಪಾಪತಿ, ಪಿಐ ಪ್ರಕಾಶ ಮಾಳೆ, ಕಿಷ್ಕಿಂದ ಯುವ ಚಾರಣ ಬಳಗ ಹಾಗೂ ಲಿವ್ ವಿಥ್ ಹ್ಯೂಮಾನಿಟಿ ಪ್ರಮುಖರಾದ ಚನ್ನಪ್ಪ ಬಳ್ಳೊಳ್ಳಿ, ಪವನ್ ಗುಂಡೂರು, ಅಭಿಷೇಕ್ ಡಿ.ಎಂ, ಅರ್ಜುನ್ ಜಿಆರ್, ಸೌಮ್ಯ ಎಸ್ .ಪಿ, ಹರನಾಯಕ, ಸುರೇಶ ಸಮಗಂಡಿ, ಪ್ರಕಾಶ ಮುರ್ನಾಳ, ಸಂತೋಷ ಕುಂಬಾರ, ಪಂಪಾಪತಿ ಮುದಗಲ್, ಅಯಣ್ಣ, ದೇವರಾಜ ಹೇಮಗುಡ್ಡ, ಮಂಜುಳಾ, ಶ್ರೀಧರ, ಶಿವು ಗುಂಜಳ್ಳಿ, ಕಲ್ಯಾಣಕುಮಾರ್, ಕಿರಣ್ ಐಲಿ ಸೇರಿದಂತೆ ಮುಂತಾದವರು ಇದ್ದರು.