High Court orders: Examine all legal aspects and take action regarding the Minority Department's grant of Rs 5 lakh to the Madrasa
ಬೆಂಗಳೂರು; ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಐದು ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯುವುದು ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನನ್ವಯ ಪರಿಶೀಲಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.
ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿರುವ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಆದೇಶಿಸಿದೆ.
ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಅರ್ಜಿದಾರರ ಆರೋಪಗಳ ಸತ್ಯಾಸತ್ಯತೆ ಕುರಿತು ನ್ಯಾಯಾಲಯ ಯಾವುದೇ ಅಭಿಪ್ರಾಯ ನೀಡುವುದಿಲ್ಲ. 5 ಲಕ್ಷ ರೂ ವಾಪಸು ಪಡೆಯುವ ವಿಷಯ ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕು, ಅನಗತ್ಯವಾಗಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಮದರಸಾಗೆ ಅಲ್ಪ ಸಂಖ್ಯಾತ ಇಲಾಖೆ ನೀಡಿರುವ 5 ಲಕ್ಷ ರೂ ಮೊತ್ತವನ್ನು ವಾಪಸ್ ಪಡೆಯಬೇಕು. ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದೆ.
ಈ ಸಂಸ್ಥೆ ಪಬ್ಲಿಕ್ ಟ್ರಸ್ಟ್ ಆಗಿ ನೋಂದಣಿಯಾಗಿಲ್ಲ. ಈ ವರ್ಷದ ಮೇ 14 ರಂದು ಮೂವರು ಸದಸ್ಯರ ಸಮಿತಿ ರಚಿಸಿದ್ದು, ಬಳಿಕ ವರದಿ ಪಡೆದು ಮೇ 30 ರಂದು ಶಾಲಾ ಶಿಕ್ಷಣ ಆಯುಕ್ತರು ಕರ್ನಾಟಕ ಶಿಕ್ಷಣ ಕಾಯ್ದೆ, 1983 ರ 39(ಎಫ್) ಉಲ್ಲಂಘನೆಯ ಆಧಾರದ ಮೇಲೆ, ಸಂಘದ ಮಾನ್ಯತೆಯನ್ನು ರದ್ದುಪಡಿಸಿತ್ತು. ಆದರೆ ಸಂಸ್ಥೆಗೆ ನೀಡಲಾದ 5 ಲಕ್ಷ ರೂ ವಾಪಸು ಪಡೆದಿಲ್ಲ. ಅಧಿಕಾರಿಗಳು ಆ ಹಣವನ್ನು ವಾಪಸು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರ ಬೆಂಗಳೂರಿನ ನಾಯಂಡಹಳ್ಳಿ ನಿವಾಸಿ ಅಬ್ದುಲ್ ಹಮೀದ್ ಪಾಷ
ಕೋರಿದ್ದರು.