Breaking News

78ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ


78th Kalyana Karnataka Utsav Day: National flag hoisted by District In-charge Minister

5ad07a28 1177 49c3 baae bf084f2a1b67


ಸ್ವಾತಂತ್ರ‍್ಯ ಸೇನಾನಿಗಳನ್ನು ಇಂದು ನಾವು ಸ್ಮರಿಸಬೇಕಿದೆ- ಸಚಿವ ಶಿವರಾಜ ತಂಗಡಗಿ


ಕೊಪ್ಪಳ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ನಮ್ಮ ಭಾಗದ ಹಲವಾರು ಸ್ವಾತಂತ್ರ‍್ಯ ಸೇನಾನಿಗಳನ್ನು ಇಂದು ನಾವು ಸ್ಮರಿಸಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.

 ಅವರು ಬುಧವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 78ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
 ಭಾರತಕ್ಕೆ ಸ್ವಾತಂತ್ರ‍್ಯ ಪಡೆದು 1947ರ ಆಗಸ್ಟ್ 15ಕ್ಕೆ ತನ್ನ ಸಂಭ್ರಮದ ಹಬ್ಬ ಆಚರಿಸಿದರೆ, ಬ್ರಿಟಿಷರ ಕುಮ್ಮಕ್ಕಿನಿಂದ ಹೈದ್ರಾಬಾದ್ ಪ್ರಾಂತ್ಯವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು ಭಾರತಕ್ಕೆ ಸ್ವಾತಂತ್ರ‍್ಯ ಅಧಿಕೃತವಾಗಿ ಬಂದರೂ, ಭಾರತ ಒಕ್ಕೂಟಕ್ಕೆ ಸೇರಲು ಕಾಶಿಂ ರಜ್ವಿ ಕುಮ್ಮಕ್ಕಿನಿಂದ ನಿರಾಕರಿಸಿದರು.
 ನಿಜಾಮರ ವಿರುದ್ಧ ಹೋರಾಡಲು ನಮ್ಮ ಭಾಗದ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸುತ್ತಾ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಶಿಬಿರಗಳನ್ನು ತೆರೆದರು. ಕಲಬುರ್ಗಿ ಭಾಗದಲ್ಲಿ ಸರದಾರ್ ಶರಣಗೌಡ ಇನಾಂದಾರ, ರಾಮಚಂದ್ರ ವೀರಪ್ಪ ಇವರ ನೇತೃತ್ವದಲ್ಲಿ ಹಾಗೂ ಕೊಪ್ಪಳ ಭಾಗದಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಅಳವಂಡಿ ಶಿವಮೂರ್ತಿ ಸ್ವಾಮಿಗಳು ಕ್ಯಾಂಪಿನ ಅಧ್ಯಕ್ಷರಾಗಿ ಮುಂಡರಗಿಯಲ್ಲಿ ಶಿಬಿರ ತೆರೆದರು. ಶಿಬಿರದಲ್ಲಿ ಪುಂಡಲೀಕಪ್ಪ ಜ್ಞಾನ ಮೋಠೆರವರು, ವೀರಭದ್ರಪ್ಪ ಶಿರೂರುರವರು, ಸಿ.ಎಂ. ಚರ್ಚಿಹಾಳ ಮಠರವರು, ಸೋಮಪ್ಪ ಡಂಬಳರವರು, ಯರಾಶಿ ಶಂಕ್ರಪ್ಪನವರು, ಎಂ.ವಿರುಪಾಕ್ಷಪ್ಪನವರು, ನರಸಿಂಗರಾವ್, ಜನಾರ್ಧನರಾವ್ ದೇಸಾಯಿ, ಡಾ. ದೇವೇಂದ್ರಕುಮಾರ ಹಕಾರಿ, ಡಾ. ಪಂಚಾಕ್ಷರಿ ಹಿರೇಮಠ ಹಾಗೂ ಇನ್ನೂ ಹಲವರು ಈ ಭಾಗದ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ‍್ಯ ದೊರೆಯಿತು.
 ನಿಜಾಮರು ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿರುವುದರಿಂದ ಹಾಗೂ ರಾಷ್ಟ್ರದ ಸಾರ್ವಭೌಮತ್ವದ ಹಿತದೃಷ್ಟಿಯಿಂದ ಉಕ್ಕಿನ ಮನುಷ್ಯರೆಂದೇ ಹೆಸರಾಗಿರುವ ಸರ್ದಾರ್ ವಲ್ಲಭ ಬಾಯಿ ಪಟೇಲರ ದಿಟ್ಟತನದಿಂದ ಕೈಗೊಂಡ ಸೈನಿಕ ಕಾರ್ಯಾಚರಣೆಯಲ್ಲಿ, ನಿಜಾಮನು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ 1948ರ ಸೆಪ್ಟೆಂಬರ್ 17 ರಂದು ಈ ಭಾಗಗಳು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರ‍್ಯವಾಗಿ ಉಸಿರಾಡಲು ಸಾಧ್ಯವಾಯಿತು ಎಂದು ಹೇಳಿದರು.
 ಕಲ್ಯಾಣ ಕರ್ನಾಟಕ ಭಾಗವು ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ‍್ಯಗೊAಡು 77 ವರ್ಷಗಳನ್ನು ಪೂರೈಸಿ 78ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಈ ಉತ್ಸವದಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಸಂತೋಷವೆನಿಸುತ್ತಿದೆ. ಇದಕ್ಕಾಗಿ ಹೋರಾಡಿದ ಎಲ್ಲಾ ಮಹನಿಯರಿಗೆ ಗೌರವ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
 ನಿಜಾಮರ ಆಡಳಿತದಲ್ಲಿ ಜನ ಸಾಮಾನ್ಯರಿಗೆ ವಾಕ್ ಸ್ವಾತಂತ್ರ‍್ಯ, ಸಂಘಟನಾ ಸ್ವಾತಂತ್ರ‍್ಯ ಹಾಗೂ ಪತ್ರಿಕಾ ಸ್ವಾತಂತ್ರ‍್ಯಕ್ಕೆ ಅವಕಾಶವಿರಲಿಲ್ಲ. ನಿಜಾಮರು ಉಸ್ಮಾನಾಬಾದಿನ ಕಾಶಿಂ ರಜ್ವಿ ನೇತೃತ್ವದಲ್ಲಿ ರಜಾಕರ ಪಡೆ ಎಂಬ ದಂಗೆಕೋರರನ್ನು ಒಳಗೊಂಡ ಸೈನ್ಯವನ್ನು ಕಟ್ಟಿ ಜನ ಸಾಮಾನ್ಯರ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡುತ್ತಿದ್ದರು. ಇದನ್ನು ಸಹಿಸದ ಸ್ವಾಮಿ ರಮಾನಂದ ತೀರ್ಥರು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟವನ್ನು ಅಹಿಂಸಾತ್ಮಕವಾಗಿ ಪ್ರಾರಂಭಿಸಿದರು ಎಂದರು.
*ಪಂಚ ಗ್ಯಾರಂಟಿ ಯೋಜನೆಗಳು:* ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡುತ್ತಾ ನಾವು ಬರುತ್ತಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ. 2023ರ ಜೂನ್ 11 ರಿಂದ ಆರಂಭಗೊAಡ ಶಕ್ತಿ ಯೋಜನೆಯು ಜನ ಮೆಚ್ಚುಗೆಗಳಿಸಿದ ಯೋಜನೆಯಾಗಿದ್ದು, ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣದ ಸೌಲಭ್ಯ ಆರಂಭವಾದಾಗಿನಿAದ 2025ರ ಆಗಸ್ಟ್ ಮಾಹೆಯ ಅಂತ್ಯದವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 8.72 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇದಕ್ಕಾಗಿ 316.98 ಕೋಟಿ ರೂ.ಗಳು ವೆಚ್ಚ ಮಾಡಲಾಗಿರುತ್ತದೆ ಎಂದರು.

 2025ರ ಆಗಸ್ಟ್ 31 ರವರೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಲ್ಲಿ ಒಟ್ಟು 2 ಲಕ್ಷ 96 ಸಾವಿರದ 448 ಗ್ರಾಹಕರ ಪೈಕಿ 2 ಲಕ್ಷ 78 ಸಾವಿರದ 548 ಫಲಾನುಭವಿಗಳು ನೋಂದಾಯಿಸಿದ್ದು, ಶೇ 93.96 ರಷ್ಟು ಪ್ರಗತಿಯಾಗಿದೆ. ಈ ಯೋಜನೆಯಡಿ ಆಗಸ್ಟ್-2023 ರಿಂದ ಆಗಸ್ಟ್-2025ರ ವರೆಗೆ ಒಟ್ಟು ರೂ. 308.65 ಕೋಟಿ ಸಬ್ಸಿಡಿ ನೀಡಲಾಗಿರುತ್ತದೆ. ಅದೇ ರೀತಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 37 ಸಾವಿರದ 191 ಅಂತ್ಯೋದಯ ಕಾರ್ಡ್ಗಳು, 2 ಲಕ್ಷ 90 ಸಾವಿರದ 999 ಪಿ.ಹೆಚ್.ಹೆಚ್ ಪಡಿತರ ಚೀಟಿಗಳಿದ್ದು, ಅವುಗಳಲ್ಲಿನ 12 ಲಕ್ಷ 33 ಸಾವಿರದ 998 ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ 5 ಕೆಜಿ ಆಹಾರ ಧಾನ್ಯ ಹಾಗೂ ರಾಜ್ಯ ಸರ್ಕಾರದ ವತಿಯಿಂದ 5 ಕೆಜಿ ಸೇರಿ ಪ್ರತಿ ಸದಸ್ಯರಿಗೆ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಂತೆ ಸಂಗ್ರಹಿಸಲಾದ ಬಿಳಿಜೋಳವನ್ನು ಪಡಿತರ ಕಾರ್ಡುದಾರರಿಗೆ ವಿತರಿಸಲಾಗುತ್ತಿದೆ. ರೈತರು ಬೆಳೆದ ಒರಟು ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗುತ್ತಿದೆ. ಜಿಲ್ಲೆಯ ರೈತರು ಬೆಳೆಯುವ ಬಿಳಿಜೋಳವನ್ನು ಕನಿಷ್ಠ ಬೆಂಬಲ ಬೆಲೆಯಂತೆ ನಿಗದಿಪಡಿಸಿದ ದರ ರೂ. 3,371 ಇದ್ದು, ಅದರಂತೆ ರೈತರಿಂದ ಖರೀದಿಸುವ ಯೋಜನೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.
 2023ರ ಡಿಸೆಂಬರ್ 26 ರಂದು ಮಾನ್ಯ ಮುಖ್ಯಮಂತ್ರಿಗಳಿಂದ ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಲಾಗಿತ್ತು. 2024ರ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು ರೂ.3000 ಹಾಗೂ ಡಿಪ್ಲೊಮಾದಾರರಿಗೆ ಪ್ರತಿ ತಿಂಗಳು ರೂ.1500 ಗಳ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ 2025ರ ಸೆಪ್ಟೆಂಬರ್ 9 ರವರೆಗೆ 9,809 ಫಲಾನುಭವಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು ರೂ. 17 ಕೋಟಿ 20 ಲಕ್ಷ 8 ಸಾವಿರ ನಿರುದ್ಯೋಗ ಭತ್ಯೆಯನ್ನು ನೀಡಲಾಗಿದೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮೀ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಜಿಲ್ಲೆಯಲ್ಲಿ ಜೂನ್-2025ರ ಅಂತ್ಯಕ್ಕೆ ಒಟ್ಟು 3,26,823 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿದ್ದು, ಇದುವರೆಗೂ 20 ಕಂತುಗಳಲ್ಲಿ ಒಟ್ಟು ಮೊತ್ತ ರೂ. 1277.14 ಕೋಟಿ ರೂಪಾಯಿ ಸಹಾಯ ಧನ ಫಲಾನುಭವಿಗಳ ಖಾತೆಗೆ ಸಂದಾಯವಾಗಿರುತ್ತದೆ ಎಂದು ತಿಳಿಸಿದರು.
*ಕ.ಕ. ಪ್ರದೇಶಾಭಿವೃದ್ಧಿ ಮಂಡಳಿ:* ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ನಮ್ಮ ಭಾಗದ ಸರ್ವೋತೋಮುಖ ಅಭಿವೃದ್ಧಿಗೆ ತುಂಬಾ ಅನುಕೂಲವಾಗಿದ್ದು, ಈ ಮಂಡಳಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ 5 ಸಾವಿರ ಕೋಟಿ ರೂ. ಅನುದಾನವನ್ನು ನೀಡುವ ಮೂಲಕ ನಮ್ಮ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. 2025-26ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ ರೂ. 236.39 ಕೋಟಿ ಹಾಗೂ ಮ್ಯಾಕ್ರೋ ವಲಯದಲ್ಲಿ ರೂ. 99.68 ಕೋಟಿ ಹೀಗೆ ಒಟ್ಟು ರೂ. 336.08 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಜಿಲ್ಲೆಗೆ ನಿಗದಿಪಡಿಸಿದ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಬಜೆಟ್ ಪ್ಯಾರಗಳು, ರಾಜ್ಯ ವಲಯ ಮತ್ತು ಇತರೆ ವಲಯದ ಅನುದಾನದಲ್ಲಿ ಪೊಲೀಸ್ ಇಲಾಖೆಯ ಕಾಮಗಾರಿಗಳಿಗೆ ರೂ.7 ಕೋಟಿ, ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ರೂ.100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸೆಷಾಲಿಟಿ ಆಸ್ಪತ್ರೆ ಆರಂಭಿಸಲು ರೂ.34 ಕೋಟಿ, ಯಲಬುರ್ಗಾ ತಾಲ್ಲೂಕಿನಲ್ಲಿ ಹೊಸದಾಗಿ ನರ್ಸಿಂಗ್ ಕಾಲೇಜು ಪ್ರಾರಂಭಿಸಲು ರೂ.3.00 ಕೋಟಿ, ಕೊಪ್ಪಳದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ರೂ.50 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕುಕನೂರು ಮತ್ತು ಕಾರಟಗಿ ತಾಲೂಕಿನಲ್ಲಿ ಜೆ.ಎಂ.ಎಪ್.ಸಿ. ನ್ಯಾಯಾಲಯವನ್ನು ಸ್ಥಾಪಿಸಲು ತಲಾ ರೂ.9 ಕೋಟಿಗಳನ್ನು, ಕನಕಗಿರಿ ತಾಲ್ಲೂಕಿನ ಸಿರವಾರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಉನ್ನತ ಮಟ್ಟದ ತೋಟಗಾರಿಕೆ ತಂತ್ರಜ್ಞಾನ ಪಾರ್ಕನ ಅಭಿವೃದ್ಧಿ ಕಾಮಗಾರಿಗೆ ರೂ.10 ಕೋಟಿ ಹಾಗೂ ಕೊಪ್ಪಳ ತಾಲೂಕಿನಲ್ಲಿ “ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಲು ರೂ.10 ಕೋಟಿಗಳನ್ನು ನಿಗದಿಪಡಿಸಲಾಗಿರುತ್ತದೆ ಎಂದರು.
*ಜಿಲ್ಲಾ ಪಂಚಾಯತಿ:* ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿಗೆ 83 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು 2025ರ ಸೆಪ್ಟಂಬರ್ 10 ಕ್ಕೆ 48.58 ಲಕ್ಷ ಮಾನವ ದಿನಗಳು ಸೃಜಿಸಿ ಶೇ. 58 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
*ಕೃಷಿ ಇಲಾಖೆ:* ಈ ವರ್ಷ 2025ರ ಸೆಪ್ಟೆಂಬರ್ 8 ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 349 ಮಿ.ಮಿ. ಆಗಿದ್ದು, ವಾಸ್ತವಿಕವಾಗಿ 465 ಮಿ.ಮಿ. ಮಳೆಯಾಗಿದೆ. ಇದು ಶೇ. 33 ರಷ್ಟು ಅಧಿಕವಾಗಿದೆ. ಈ ವರ್ಷ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಮುಂಗಾರು ಹಂಗಾಮು ಆಶಾದಾಯಕವಾಗಿದೆ. ಜಿಲ್ಲೆಯ ಬಿತ್ತನೆ ಗುರಿ 3.17 ಲಕ್ಷ ಹೆಕ್ಟರ್ ಆಗಿದ್ದು, 3.76 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಶೇ. 119ರಷ್ಟು ಬಿತ್ತನೆಯಾಗಿದೆ. ರೈತರು ಮುಖ್ಯವಾಗಿ ಮೆಕ್ಕೆಜೋಳ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡಿರುತ್ತಾರೆ ಎಂದು ಹೇಳಿದರು.
*ತೋಟಗಾರಿಕೆ ಇಲಾಖೆ:* ಕರ್ನಾಟಕ ಸರ್ಕಾರದಿಂದ 2025-26ನೇ ಸಾಲಿನ ಬಜೆಟ್ ನಲ್ಲಿ ಅನುಮೋದನೆಗೊಂಡಿರುವ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ 200 ಎಕರೆ ಪ್ರದೇಶದಲ್ಲಿ ಹೊಸದಾಗಿ ಅನುಷ್ಟಾನಗೊಳಿಸಲಾಗುತ್ತಿರುವ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ನ ಪ್ರಸ್ತುತ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು ಆರ್ಥಿಕ ಬಿಡ್ಡ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಈ ತೋಟಗಾರಿಕೆ ತಂತ್ರಜ್ಞಾನ ಪಾರ್ಕ ಒಂದು ವರದಾನವಾಗಲಿದೆ. 2025-26ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ಹಣ್ಣು ಮತ್ತು ಜೇನು ಮೇಳ-2026 ಅನ್ನು ಆಯೋಜಿಸಲಾಗುವುದು ಎಂದರು.
*ಸಮಾಜ ಕಲ್ಯಾಣ ಇಲಾಖೆ:* ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ ಗೆ ರೂ. 20 ಸಾವಿರ, ಪದವಿಯಲ್ಲಿ ರೂ. 25 ಸಾವಿರ ಹಾಗೂ ಸ್ನಾತಕೋತ್ತರ ಪದವಿಗೆ ರೂ. 30 ಸಾವಿರ, ವೃತ್ತಿಪರ ಕೋರ್ಸ್ಗಳಾದ ಮೆಡಿಕಲ್/ಇಂಜಿನಿಯರಿAಗ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ. 35 ಸಾವಿರಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.
*ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:* ಒಟ್ಟು 56 ಸ್ವಂತ ಕಟ್ಟಡಗಳಿದ್ದು, 1 ವಸತಿ ನಿಲಯದ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, 4 ವಸತಿ ನಿಲಯಗಳಿಗೆ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಒಟ್ಟು 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 4 ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ನಿರ್ವಹಣೆಯಾಗುತ್ತಲಿವೆ. 3 ವಸತಿ ಶಾಲೆಗಳಿಗೆ ನಿವೇಶನಗಳು ಲಭ್ಯವಿದ್ದು, ಕನಕಗಿರಿ ಹಾಗೂ ಹನುಮನಾಳ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
*ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:* ಶಿಕ್ಷಣದಿಂದ ವಂಚಿತರಾಗಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ಮಾದರಿಯಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
*ಶಿಕ್ಷಣ ಇಲಾಖೆ:* ಕೊಪ್ಪಳ ಜಿಲ್ಲೆಯ ಇಟಗಿ, ಟಣಕನಕಲ್, ತಳುವಗೇರಾ ಹಾಗೂ ಕನಕಗಿರಿ ಸೇರಿ ಜಿಲ್ಲೆಯಲ್ಲಿ ಒಟ್ಟು 4 ಸರಕಾರಿ ಆದರ್ಶ ಪದವಿ ಪೂರ್ವ ಕಾಲೇಜುಗಳನ್ನು 2025-26ನೇ ಸಾಲಿನಿಂದ ಪ್ರಾರಂಭ ಮಾಡಲಾಗಿದೆ. 2024-25ನೇ ಸಾಲಿಗೆ ಕೆ.ಕೆ.ಆರ್.ಡಿ.ಬಿ ಅನುದಾನದಿಂದ ಕುಕನೂರು ತಾಲೂಕಿನ ರಾಜೂರು-ಆಡೂರು ಹಾಗೂ ಯಲಬುರ್ಗಾ ತಾಲೂಕಿನ ಮುಧೋಳ-ಕರಮುಡಿ ಸೇರಿ ಜಿಲ್ಲೆಯಲ್ಲಿ 2 ಹೊಸ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿರುತ್ತವೆ ಎಂದರು.
*ಜಿಲ್ಲಾ ನಗರಾಭಿವೃದ್ಧಿ ಕೋಶ:* ಕೊಪ್ಪಳ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಅಮೃತ 2.0 ಯೋಜನೆಯಡಿಯಲ್ಲಿ ಕೊಪ್ಪಳ-ಭಾಗ್ಯನಗರ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.139.94 ಕೋಟಿ, ಯಲಬುರ್ಗಾ-ಕುಕನೂರು ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.242.23 ಕೋಟಿ. ಕನಕಗಿರಿ-ಕಾರಟಗಿ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ 195.79 ಕೋಟಿ ರೂಪಾಯಿ ಮೊತ್ತಕ್ಕೆ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಕುಷ್ಟಗಿ ಕುಡಿಯವ ನೀರಿನ ಯೋಜನೆಯ 28 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿರುತ್ತದೆ.
 ಸ್ವಚ್ಛತೆಯೇ ಸೇವೆ-ಸ್ವಚ್ಛೋತ್ಸವ 2025ರ ಅಂಗವಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮನೆ-ಮನೆಯಿಂದ ಹಸಿ ಕಸ, ಒಣ ಕಸ ಬೇರ್ಪಡಿಸಿ ಸಂಗ್ರಹಣೆ ಮಾಡಲು ಸ್ವಸಹಾಯ ಗುಂಪಿನ ಸದಸ್ಯರನ್ನು ಕಮ್ಯುನಿಟಿ ಮೊಬೈಲೈಸರ್‌ಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ತ್ಯಾಜ್ಯ ಹಾಕುತ್ತಿರುವ ಸ್ಥಳಗಳನ್ನು ಗುರ್ತಿಸಿ, ಸದರಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಶುಚಿಗೊಳಿಸಿ, ಸ್ಥಳಗಳಲ್ಲಿ ರಂಗೋಲಿ ಬಿಡಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಹಾಗೂ ಈ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಡದಂತೆ ಗೋಡೆಬರಹ ಮೂಲಕ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಹಸಿ ಕಸ ಒಣ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ ನೀಡುವಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಚ್ಛ ಸುಂದರ ಹಾಗೂ ಹಸಿರು ನಗರಗಳನ್ನಾಗಿ ಮಾಡುವುದು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ದ್ಯೇಯೋದ್ದೇಶವಾಗಿದೆ ಎಂದು ಹೇಳಿದರು.
*ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ:* 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಬಜೆಟ್ ಪ್ಯಾರಗಳು, ರಾಜ್ಯ ವಲಯ ಮತ್ತು ಇತರೆ ವಲಯದ ಅನುದಾನದಲ್ಲಿ ಜಿ.ಟಿ.ಟಿ.ಸಿ. ಬಹುಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊಪ್ಪಳದ ತಳಕಲ್‌ನಲ್ಲಿ ಸ್ಥಾಪಿಸಲು ರೂ.25 ಕೋಟಿ ನಿಗದಿಪಡಿಸಲಾಗಿರುತ್ತದೆ ಹಾಗೂ ಗರಿಷ್ಠ 25 ಎಕರೆ ಜಮೀನು ಒದಗಿಸಲು ನಿರ್ಣಯಿಸಲಾಗಿರುತ್ತದೆ. ಇದರಿಂದ ಜಿಲ್ಲೆಯ ವೃತ್ತಿಪರ ಕೋರ್ಸಗಳಾದ ಐ.ಟಿ.ಐ, ಸರ್ಕಾರಿ ಪಾಲಿಟೆಕ್ನಿಕ್, ಇಂಜಿನೀಯರ್ ಹಾಗೂ ಇನ್ನಿತರೆ ಪದವಿಧರ ವಿದ್ಯಾರ್ಥಿಗಳಿಗೆ ಭವಿಷ್ಯದ ಕೌಶಲ್ಯ ತರಬೇತಿಯನ್ನು ಪಡೆಯಲು ಹಾಗೂ ಹೆಚ್ಚಿನ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
*ಪ್ರವಾಸೋದ್ಯಮ ಇಲಾಖೆ:* ಮಾನ್ಯ ಮುಖ್ಯಮಂತ್ರಿಗಳು, 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (372) ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು ಮೊದಲನೇ ಹಂತದಲ್ಲಿ ರೂ. 100 ಕೋಟಿಗಳನ್ನು ಒದಗಿಸಲಾಗುವುದು ಎಂದು ಘೋಷಿಸಿರುತ್ತಾರೆ. 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 372ರಲ್ಲಿ ಘೋಷಿಸಿರುವಂತೆ ಶ್ರೀ ಆಂಜನೇಯಸ್ವಾಮಿಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಎರಡನೇ ಹಂತದಲ್ಲಿ ಪ್ರವಾಸಿಗರಿಗೆ ಈ ಕೆಳಕಂಡಂತೆ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ರೂ. 100 ಕೋಟಿಗಳ ಅಂದಾಜು ಮೊತ್ತದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ(ಕೆ.ಟಿ.ಐ.ಎಲ್) ಬೆಂಗಳೂರುರವರ ಮೂಲಕ ಅನುಷ್ಠಾನಗೊಳಿಸಲು ಹಾಗೂ ಈ ಉದ್ದೇಶಕ್ಕೆ ಅಗತ್ಯವಿರುವ ರೂ.100 ಕೋಟಿಗಳ ಪೈಕಿ. ರೂ.40 ಕೋಟಿಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
 ನಮ್ಮ ಭಾಗದ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಪಣತೊಡುತ್ತಾ ಮತ್ತೊಮ್ಮೆ ತಮ್ಮೆಲ್ಲರಿಗೂ “ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ” ಶುಭಾಶಯಗಳನ್ನು ತಿಳಿಸಿ, ನನ್ನ ಮಾತಿಗೆ ವಿರಾಮ ಹೇಳುತ್ತೇನೆ ಎಂದರು.
ಸ್ವಚ್ಛತಾ ಪ್ರತಿಜ್ಞೆ ಸ್ವೀಕಾರ: ಸ್ವಚ್ಛತೆಯೇ ಸೇವೆ-2025ರ ವಿಶೇಷ ಜನಾಂದೋಲನ ನಿಮಿತ್ತ ಸ್ವಚ್ಛತಾ ಪ್ರತಿಜ್ಞೆಯನ್ನು ಕಾರ್ಯಕ್ರಮದಲ್ಲಿ ಸ್ವೀಕರಿಸಲಾಯಿತು.
*ಆಕರ್ಷಕ ಪಥಸಂಚಲನ:* 78ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆ, ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ & ಗೈಡ್ಸ್ ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.
*ಲ್ಯಾಪ್‌ಟಾಪ್ ವಿತರಣೆ:* ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಪ್ರವೇಶ ಪಡೆದಿರುವ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಮಹತ್ವಾಕಾಂಕ್ಷಿ ಜಿಲ್ಲೆಯ ವಿವಿಧ ತಾಲ್ಲೂಕುಗಳಡಿಯಲ್ಲಿ ಬರುವ ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 23 ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್‌ಗಳನ್ನು ವಿತರಿಸಲಾಯಿತು.
*ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪತ್ರಗಳ ವಿತರಣೆ:* ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಕೊಪ್ಪಳದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಮತ್ತು ಕಾಳಿದಾಸ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ, ಸನ್ಮಾನಿಸಲಾಯಿತು.
 ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಸೇರಿದಂತೆ ಇತರೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ಎನ್.ಸಿ.ಸಿ, ಭಾರತ ಸ್ಕೌಟ್ಸ್ & ಗೈಡ್ಸ್, ಭಾರತ ಸೇವಾದಳ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *