Tips for managing roundworm leaf spot disease in rice
ಕೊಪ್ಪಳ ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ): ಭತ್ತದಲ್ಲಿ ದುಂಡಾಣು ಎಲೆಮಚ್ಚೆ ರೋಗ ನಿರ್ವಹಣೆಗಾಗಿ ಕೃಷಿ ಇಲಾಖೆಯಿಂದ ರೈತರಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ನಿರಂತರ ಮಳೆ ಜತೆಗೆ ಹವಾಮಾನ ವೈಪರೀತ್ಯದಿಂದ ಮುಂಗಾರು ಭತ್ತದ ಬೆಳೆಗೆ ದುಂಡಾಣು ಅಂಗಮಾರಿ ಮಚ್ಚೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರಿಗೆ ‘ಪ್ರಸ್ತುತ ರೋಗದ ಚಿಹ್ನೆ ಪ್ರಾರಂಭಿಕ ಹಂತದಲ್ಲಿ ಭತ್ತದ ಎಲೆಗಳ ಮೇಲೆ ತೇವಯುಕ್ತ ಕಂದುಬಣ್ಣದ ಗೆರೆಗಳು ಕಂಡುಬಂದಿದ್ದು, ಕಾಲಕ್ರಮೇಣ ಎಲೆಗಳ ಗೆರೆಗಳು ಹಳದಿಯಾಗಿ ರೋಗ ತೀವ್ರತೆಯಾದಾಗ ಸಂಪೂರ್ಣ ಸುಟ್ಟಂತೆ ಕಾಣುತ್ತದೆ.
ಈ ರೋಗ ಹತೋಟಿಗೆ ಲೀಟರ್ ನೀರಿಗೆ ಬ್ಯಾಕ್ಟೇರಿಯನಾಶಕ 0.5 ಗ್ರಾಂ ಮತ್ತು ತಾಮ್ರದ ಆಕ್ಸಿಕ್ಲೋರೈಡ್ 2.5 ಗ್ರಾಂ ಮಿಶ್ರಣ ಮಾಡಿ, ಅಂಟು ದ್ರಾವಣ ಸೇರಿಸಿ ಸಿಂಪರಣೆ ಮಾಡಬೇಕು. ರೋಗ ಹೆಚ್ಚಾದಲ್ಲಿ ಲೀಟರ್ ನೀರಿಗೆ ಸ್ಪೆಪ್ಪೋಸೈ-ಕ್ಲಿನ್ ಸಲೈಟ್ 0.5 ಗ್ರಾಂ ಮತ್ತು ತಾಮ್ರದ ಅಕ್ಸಿಕ್ಲೋರೈಡ್ 2.5ಗ್ರಾಂ (ಸಿಒಸಿ) ಸಿಂಪರಣೆ ಮಾಡಬೇಕು.
ತೆನೆ ಬಿಚ್ಚುವ, ಹಾಲು ತುಂಬುವ ಹಂತದಲ್ಲಿರುವ ಬೆಳೆಗೆ ಲೀಟರ್ ನೀರಿಗೆ ಸ್ಪೆಪ್ಪೋಸೈಕ್ಲಿನ್ ಸಟ್ 0.5 ಗ್ರಾಂ ಮತ್ತು ಕಾರ್ಬೆಂಡಜಿಮ್ 1 ಗ್ರಾಂ ದ್ರಾವಣ ಬೆರೆಸಿ ಎಕರೆಗೆ 180ರಿಂದ 200 ಲೀಟರ್ ಸಿಂಪಡಣೆ ದ್ರಾವಣವನ್ನು ಉಪಯೋಗಿಸಿ ಚೆನ್ನಾಗಿ ತೋಯುವಂತೆ ಸಿಂಪಡಣೆ ಮಾಡಬೇಕು. ಎರಡನೇ ಹಂತದಲ್ಲಿ ಲಘು ಪೋಷಕಾಂಶ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ ಮೂರು ಗ್ರಾಂ ದ್ರಾವಣ ಬೆರೆಸಿ ಸಿಂಪರಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ಕುಂಠಿತವಾಗಿರುವ ಭತ್ತದ ಬೆಳೆ ಪುನಶ್ಚತನಗೊಳಿಸಲು ಸಹಾಯವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ಗಂಗಾವತಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


