Murdered by pouring diesel and setting it on fire: Parents, brother arrested
ಕುಡಿತದ ಚಟಕ್ಕೆ ಅಂಟಿ ಸಾಲ ಮಾಡಿ ಪೀಡಿಸುತ್ತಿದ್ದ ಯುವಕನ ಬರ್ಬರ ಹತ್ಯೆ



ಸಾವಳಗಿ: ದುಶ್ಚಟಗಳ ದಾಸನಾಗಿ ಸಾಲ ಮಾಡಿಕೊಂಡು ಆಸ್ತಿಯಲ್ಲಿ ಪಾಲು ಕೇಳಿ ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಕಣ್ಣಿಗೆ ಕಾರದ ಪುಡಿ ಎರಚಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಎರಡೂ ಕೈ ಕಟ್ಟಿ ಹೊರಗೆಳೆದು ತಂದು ಡೀಸೆಲ್ ಸುರಿದು ಸಜೀವ ದಹನ ಮಾಡಿದ ಘಟನೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಅನೀಲ ಪರಪ್ಪ ಕಾನಟ್ಟಿ (32) ಕೊಲೆಯಾದ ಯುವಕ. ಅನೀಲನ ಸಹೋದರ ಬಸವರಾಜ ಪರಪ್ಪ ಕಾನಟ್ಟಿ (35 ), ತಂದೆ ಪರಪ್ಪ ಮಲ್ಲಪ್ಪ ಕಾನಟ್ಟಿ (62 ), ತಾಯಿ ಶಾಂತಾ ಪರಪ್ಪ ಕಾನಟ್ಟಿ (55) ಬಂಧಿತರು.
ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟದ ದಾಸನಾಗಿದ್ದ ಅನೀಲ ಸಾಲ ಮಾಡಿಕೊಂಡು ಮೇಲಿಂದ ಮೇಲೆ ಮನೆಯವರೊಂದಿಗೆ ಜಗಳ ಕಾಯುತ್ತಿದ್ದ. ಹಿಂದೆ ಮಾಡಿದ್ದ ಸಾಲ ತೀರಿಸಿ ಬುದ್ದಿವಾದ ಹೇಳಿದ್ದರೂ ಮತ್ತೆ ₹4 ಲಕ್ಷ ಸಾಲ ಮಾಡಿ ಹಣ ಕೊಡಿ, ಇಲ್ಲದಿದ್ದರೆ ನನ್ನ ಪಾಲಿನ ಜಮೀನು ಕೊಡಿ ಎಂದು ಜಗಳ ಮಾಡುತ್ತಿದ್ದ. ಶುಕ್ರವಾರ ರಾತ್ರಿ ಫ್ಯಾನ್ ಹಚ್ಚುವ ವಿಚಾರಕ್ಕೆ ಜಗಳ ಮಾಡಿ ನಿಮ್ಮೆನ್ನೆಲ್ಲ ಸಾಯಿಸುತ್ತೇನೆಂದು ಸ್ಕೂಡ್ರೆವರ್ನಿಂದ ಅಣ್ಣನ ಮಗಳಿಗೆ ಚುಚ್ಚಲು ಹೋಗಿದ್ದು, ಮನೆಯವರು ಸೇರಿಕೊಂಡು ಅದನ್ನು ಕಸಿದುಕೊಂಡಿದ್ದಾರೆ.
ಆಗ ಪಕ್ಕದಲ್ಲೇ ಇದ್ದ ಸಿಲಿಂಡರ್ ಗ್ಯಾಸ್ ಪೈಪ್ ಕಿತ್ತು ಕ್ಯಾನ್ ಸಿಲಿಂಡರ್ ಎತ್ತಿ ಒಗೆಯಲು ಹೋಗಿದ್ದು, ಆಗತಂದೆ-ತಾಯಿ ಹಾಗೂ ಅಣ್ಣ ಸೇರಿಕೊಂಡು ಕಣ್ಣಿಗೆ ಕಾರದ ಪುಡಿ ಎರಚಿ ಕುತ್ತಿಗೆಗೆ ಹಗ್ಗ ಬಿಗಿದು, ಕೈಕಾಲು ಕಟ್ಟಿಹಾಕಿ ಮನೆಯಿಂದ ಹೊರಗೆ ಎಳೆದುತಂದು ಕ್ಯಾನ್ನಲ್ಲಿದ್ದ ಡೀಸೆಲ್ ಮೈಮೇಲೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಲ್ಲದೆ, ಪೊಲೀಸರಿಗೆ ವಿಷಯ ತಿಳಿಸದೇ ಘಟನೆ ಮುಚ್ಚಿಹಾಕಲು ಯತ್ನಿಸಿದ್ದಾರೆ.
ಜಮಖಂಡಿ ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್ಐ ಅಪ್ಪಣ್ಣ ಐಗಳಿ, ಅಪರಾಧ ವಿಭಾಗ ಪಿಎಸ್ಐ ಎನ್.ಎಲ.ಎಲಿಗ್ಪರ ನೇತೃತ್ವದಲ್ಲಿ ಕೊಲೆ ಪ್ರಕರಣ ಬೇಧಿಸಿ ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.