Woman dies after being bitten by cobra, demands compensation
ಗಂಗಾವತಿ : ತಾಲ್ಲೂಕಿನ ಮಲ್ಲಾಪೂರ ಗ್ರಾಮದ ಬಡ ಕೂಲಿ ಕಾರ್ಮಿಕ ಕುಟುಂಬದ ಭೋವಿ ವಡ್ಡರ್ ಸಮಾಜದ ನಿಂಗಮ್ಮ(37) ಗಂ. ಭೋಜಪ್ಪ ಎನ್ನುವ ಮಹಿಳೆ ರಾಂಪೂರ ಸೀಮಾದ ಗದ್ದೆಗೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ನಾಗರಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಶನಿವಾರದಂದು ಬೆಳಗ್ಗೆ 11ಗಂಟೆಗೆ ಜರುಗಿದೆ.
ಬಡ ಕೂಲಿ ಕಾರ್ಮಿಕಳಾದ ನಿಂಮ್ಮ ಜೀವನ ನಿರ್ವಹಣೆಗಾಗಿ ಎಂದಿನಂತೆ ರಾಂಪೂರ ಸೀಮಾದ ಗದ್ದೆಯಲ್ಲಿ ಕಸ ಕೀಳುವ ಕೆಲಸಕ್ಕೆಂದು ಮಹಿಳೆಯರೊಂದಿಗೆ ತೆರಳಿದ ಸಂದರ್ಭದಲ್ಲಿ ಬೃಹತ್ ಗಾತ್ರದ ನಾಗರಹಾವು ಕಾಲಿಗೆ ಕಚ್ಚಿದೆ. ಕಚ್ಚಿದ ಕೂಡಲೇ ಗಮನಕ್ಕೆ ಬಂದಿದ್ದು ನಾಗರಹಾವು ಕಚ್ಚಿದನ್ನು ಕಂಡ ಮಹಿಳೆ ತಡವರಿಸುತ್ತಾ, ತನ್ನ ಜೊತೆಗೆ ಬಂದ ಮಹಿಳೆಯರಿಗೆ ದೂರ ಓಡುವಂತೆ ಸೂಚಿಸಿದ್ದಾಳೆ.
ನಂತರ ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಗಾಬರಿಗೊಂಡು ದೂರ ಓಡಿ ಹೋಗಿ ನಿಲ್ಲುವಷ್ಟರಲ್ಲಿ ನಿಂಗಮ್ಮ ಯಾರು ಹತ್ತಿರ ಬರಬೇಡಿ ಇಲ್ಲಿ ದೊಡ್ಡ ನಾಗರಹಾವು ಇದ್ದು ಅದು ನನಗೆ ಕಚ್ಚಿದೆ. ನೀವು ಹತ್ತಿರ ಬಂದರೇ ನಿಮಗೂ ಕಚ್ಚುತ್ತೆ ನಾನು ಬದುಕುವುದಿಲ್ಲಾ, ಹತ್ತಿರ ಯಾರು ಬರಬೇಡಿ ಎಂದಿದ್ದಾಳೆ.
ಉಳಿದ ಮಹಿಳೆಯರು ಗಾಬರಿಗೊಂಡು ದೂರ ಬಂದು ನಿಂತು ಅವರಿವರನ್ನು ಕರೆಯುವಷ್ಟರಲ್ಲಿ ನಾಗರಹಾವು ಅಲ್ಲಿಂದ ಹೋಗಿರುವುದನ್ನು ಖಚಿತ ಪಡಿಸಿಕೊಂಡು ಮಹಿಳೆಯನ್ನು ಹೊರಗೆ ತಂದು ಆಸ್ಪತ್ರೆಗೆ ಸಾಗಿಸುವ ಮದ್ಯೆದಲ್ಲಿ ಮಹಿಳೆ ಅಸುನಿಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ತಿಳಿದು ಬಂದಿದೆ.
ನಿಂಗಮ್ಮನಿಗೆ ಒಂದು ಗಂಡು ಎರಡು ಹೆಣ್ಣು ಮಕ್ಕಳಿದ್ದು, ಇನ್ನೂ ಮಕ್ಕಳು ಚಿಕ್ಕವರಿದ್ದು, ಮಹಿಳೆ ಹಾವು ಕಚ್ಚಿ ಮೃತಳಾದ ಸುದ್ದಿ ತಿಳಿದ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಕಂದಮ್ಮಗಳನ್ನು ಬಿಟ್ಟು ಅಗಲಿದ ಮಕ್ಕಳನ್ನು ಕಂಡು ಗ್ರಾಮಸ್ಥರು ಮಮ್ಮಲು ಮರುಗುವ ದೃಶ್ಯ ಕಂಡುಬಂದಿತು.
ಈ ನಿಂಗಮ್ಮ ಎನ್ನುವ ಬಡ ಭೋವಿ ವಡ್ಡರ್ ಸಮಾಜದ ಮಹಿಳೆಯ ಕುಟುಂಬವು ತುಂಬಾ ಸಂಕಷ್ಟದಲ್ಲಿದ್ದು ಇವರು ಜನತಾ ಮನೆಯಲ್ಲಿ ವಾಸವಾಗಿದ್ದು, ಕಿತ್ತು ತಿನ್ನುವ ಬಡತನದ ಮದ್ಯೆ ದಂಪತಿಗಳು ಕೂಲಿ, ನಾಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಾ ಮೂವರು ಮಕ್ಕಳನ್ನು ಸಲುಹುತ್ತಿದ್ದರು.
ಮೃತ ನಿಂಗಮ್ಮನ ಕುಟುಂಬಕ್ಕೆ ಇಲ್ಲಿಯವರೆಗೆ ಸರಕಾರದ ಯಾವುದೇ ಸೌಲಭ್ಯವಿಲ್ಲದೇ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದು, ಸರಕಾರ ಮೃತ ಮಹಿಳೆಯ ಕುಟುಂಬಕ್ಕೆ ಗಂಗಾವತಿ ಶಾಸಕ ಜನಾರ್ಧನ್ ರೆಡ್ಡಿಯವರು ಹಾಗೂ ಅವರ ಸಮಾಜದವರೇ ಆದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ಬಡ ಕುಟುಂಬಕ್ಕೆ ಸರಕಾರದಿಂದ ಹಾಗೂ ವಯಕ್ತಿಕ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
*ಬಾಕ್ಸ್,,*
ನಿಂಗಮ್ಮ ಕುಟುಂಬದವರು ತುಂಬಾ ಬಡ ಕುಟುಂಬದವರಾಗಿದ್ದು,ಪ್ರತಿ ನಿತ್ಯ ಕೂಲಿ ಕೆಲಸದಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಡ ಭೋವಿ ಸಮಾಜದವರಾಗಿದ್ದು, ಅವರ ಸಮಾಜದವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದು, ಈ ಘಟನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಬಡ ಕುಟುಂಬಕ್ಕೆ ವಯಕ್ತಿಕ ಹಾಗೂ ಸರಕಾರದಿಂದ ಪರಿಹಾರ ಒದಗಿಸಬೇಕು.
*ಅಮರಯ್ಯಸ್ವಾಮಿ ಹಿರೇಮಠ, ಆಂಜನೇಯಗೌಡ ಮಲ್ಲಪೂರ, ಲಕ್ಷ್ಮಣ ನಾಯಕ್ ಗ್ರಾಮಸ್ಥರು.*
ಸ್ಥಳೀಯ ಶಾಸಕ ಜನಾರ್ಧನ್ ರೆಡ್ಡಿಯವರು ಮೃತ ಮಹಿಳೆ ನಿಂಗಮ್ಮನವರ ಕುಟುಂಬಕ್ಕೆ ವಯಕ್ತಿಕ ಹಾಗೂ ಸರಕಾರದಿಂದ ಪರಿಹಾರ ನೀಡಲು ಮುಂದಾಗಬೇಕು.
*ಹನುಮರೆಡ್ಡಿ ಮಲ್ಲಪೂರ, ಛತ್ರಪ್ಪ ನಾಯಕ್, ಗ್ರಾಪಂ ಅಧ್ಯಕ್ಷರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.*