Don’t worry about dengue fever, be careful

(ವಿಶೇಷ ಲೇಖನ)
ಮನುಷ್ಯನ ಆರೋಗ್ಯವು ಸಂಪೂರ್ಣವಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿಯಾಗಿದೆ. ಅದು ಕೇವಲ ರೋಗ ಅಥವಾ ದೌರ್ಬಲ್ಯದ ಅನುಪಸ್ಥಿತಿಯಲ್ಲ, ದೈನಂದಿನ ಜೀವನಕ್ಕೆ ಸಂಪನ್ಮೂಲವಾಗಿದೆ. ಆರೋಗ್ಯವಂತ ವ್ಯಕ್ತಿ ಆರೋಗ್ಯವಂತ ಸಮಾಜ ನಿರ್ಮಿಸಬಲ್ಲ ಎನ್ನುವಂತೆ ನಾವು ಆರೋಗ್ಯದಿಂದ ಇದ್ದಾಗ ಮಾತ್ರ ನಮ್ಮ ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು. ಇಂದಿನ ಜನರ ಜೀವನ ಶೈಲಿ ಅವರ ಆಹಾರ ಪದ್ದತಿ ಸೇರಿದಂತೆ ಇತರೆ ದುಶ್ಚಟಗಳಿಂದಲು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಕಾಣುತ್ತೆವೆ. ಇದರ ಹೊರತಾಗಿಯು ಆಯಾ ಕಾಲಕ್ಕೆ ತಕ್ಕಂತೆ ಕಾಯಿಲೆಗಳು ಬರುತ್ತವೆ. ಈಗ ಮಳೆಗಾಲ ಇರುವುದರಿಂದ ಮಳೆ ನೀರು ಎಲ್ಲೆಂದರಲ್ಲಿ ಹರಡಿ ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚಾಗಿ ಅವುಗಳಿಂದ ವಿವಿಧ ರೀತಿಯ ಕಾಯಿಲೆಗಳು ಬರುತ್ತವೆ, ಹಾಗಂತ ನಾವು ಹೆದರಬೇಕಿಲ್ಲ ಮುಂಜಾಗ್ರತೆ ವಹಿಸಿದರೆ ಈ ಕಾಯಿಲೆಗಳಿಂದ ನಾವು ದೂರ ಇರಬಹುದು.

ಸೊಳ್ಳೆಗಳಲ್ಲಿ ಅನೇಕ ಜಾತಿಗಳು ಮತ್ತು ಉಪ ಜಾತಿಗಳಿವೆ, ಎಲ್ಲಾ ಜಾತಿಯ ಸೊಳ್ಳೆಗಳಿಂದ ರೋಗಗಳು ಹರಡುವುದಿಲ್ಲ. ಭಾರತದಲ್ಲಿ ಮೂರು ಜಾತಿಯ ಸೊಳ್ಳೆಗಳಿಂದ ಮಾತ್ರ ವಿವಿಧ ರೀತಿಯ ರೋಗಗಳು ಹರಡುತ್ತವೆ. ಅನಾಫಿಲಿಸ್ ಜಾತಿಯ ಸೊಳ್ಳೆಯಿಂದ ಮಲೇರಿಯಾ, ಕ್ಯೂಲಿಕ್ಸ್ ಜಾತಿಯ ಸೊಳ್ಳೆಯಿಂದ ಫೈಲೇರಿಯಾ ಮತ್ತು ಮಿದುಳು ಜ್ವರ ಹಾಗೂ ಈಡಿಸ್ ಜಾತಿಯ ಸೊಳ್ಳೆಯಿಂದ ಡೆಂಗ್ಯೂ ಜ್ವರ ಮತ್ತು ಚಿಕುಂಗುನ್ಯಾ ಕಾಯಿಲೆ ಬರುತ್ತದೆ.
ಈಗ ಮಳೆಗಾಲ ಇರುವುದರಿಂದ ಡೆಂಗ್ಯೂ ಜ್ವರದ ಕುರಿತು ಮುಂಜಾಗ್ರತೆ ವಹಿಸಬೇಕಿದೆ. ಡೆಂಗ್ಯೂ ಜ್ವರ ವೈರಸನಿಂದ ಬರುವ ರೋಗವಾಗಿದ್ದು, ಇದು ಸೋಂಕಿತ ಈಡೀಸ್ ಜಾತಿಯ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನಿಂತ ನೀರಿನಲ್ಲಿ ಹಾಗೂ ನೀರು ಶೇಖರಣೆ ಸಲಕರಣೆಗಳಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ದಿ ಮಾಡುತ್ತವೆ. ಈ ಸೊಳ್ಳೆಗಳು ಬಹುತೇಕ ಹಗಲಿನಲ್ಲಿಯೇ ಕಚ್ಚುತ್ತವೆ, ಇದಕ್ಕೆ ಯಾವುದೇ ರೀತಿಯಲ್ಲಿ ನಿರ್ದಿಷ್ಟ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ, ರೋಗದ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಡೆಂಗ್ಯೂ ಜ್ವರದ ಲಕ್ಷಣಗಳು;- ಸೋಂಕಿತ ಸೊಳ್ಳೆಯು ಮನುಷ್ಯನನ್ನು ಕಚ್ಚಿದ 8 ರಿಂದ 14 ದಿನಗಳ ನಂತರ ಡೆಂಗ್ಯೂ ಜ್ವರದ ಲಕ್ಷಣಗಳು ಕಂಡು ಬರುತ್ತವೆ. ಅವುಗಳಲ್ಲಿ ಇದ್ದಕ್ಕಿದಂತೆ ತೀವ್ರಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಚರ್ಮದ ಮೇಲೆ ಗುಳ್ಳೆಗಳು, ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳುವುದು. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.
ಡೆಂಗ್ಯೂ ಜ್ವರವನ್ನು ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು:- ಮನೆಯಲ್ಲಿನ ನೀರಿನ ತೊಟ್ಟಿ, ಡ್ರಮ್, ಬ್ಯಾರಲ್, ಏರ್‌ಕೂಲರ್‌ಗಳನ್ನು ವಾರಕ್ಕೊಮ್ಮೆ ಖಾಲಿಮಾಡಿ ಸ್ವಚ್ಚಗೊಳಿಸಿ, ಒಣಗಿಸಿ ಪುನ: ನೀರು ತುಂಬಿ ಸೊಳ್ಳೆಗಳನ್ನು ನುಸುಳದಂತೆ ಭದ್ರವಾಗಿ ಮುಚ್ಚಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಮ್ಮ ಅಕ್ಕ-ಪಕ್ಕ ಹಾಗೂ ಮನೆಯ ಮೇಲಿನ ಟೈರು, ಟ್ಯುಬ್, ಒಡೆದ ಬಕೆಟ, ಏಳೆನೀರು ಚಿಪ್ಪು, ಹೂವಿನ ಕುಂಡ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಈಡೀಸ್ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಈ ಸಮಯದಲ್ಲಿ ಮೈತುಂಬ ಬಟ್ಟೆಗಳನ್ನು ಧರಿಸಬೇಕು, ಮನೆಯ ಒಳಗಡೆ ಸೊಳ್ಳೆಗಳು ಬಾರದಂತೆ ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸಿ ಸೊಳ್ಳೆ ನಿರೋಧಕವನ್ನು ಉಪಯೋಗಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಹಾಕಿಕೊಂಡು ಮಲಗಬೇಕು.

ಸಾರ್ವಜನಿಕರು ತಮ್ಮ ಮನೆಯ ಸುತ್ತಲು ಸ್ವಚ್ಚತೆ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಜ್ವರವಿರಲಿ ನಿರ್ಲಕ್ಷಿಸದೇ ತಮ್ಮ ಸಮೀಪದ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈಗ ಮಳೆಗಾಲ ಇರುವುದರಿಂದ ಶೀತ, ಚಳಿ, ಜ್ವರ ಸೇರಿದಂತೆ ಇತರೆ ಕಾಯಿಲೆಗಳು ಹೆಚ್ಚಿನ ಜನರಲ್ಲಿ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತವೆ ಹಾಗಾಗಿ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕವಾಗಿದೆ. ಡೆಂಗ್ಯೂ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯವಾಗಿದೆ ಎಂಬುದು ಈ ಕಾಯಿಲೆಯ ಧ್ಯೇಯ ವಾಕ್ಯವಾಗಿದೆ. ಆರೋಗ್ಯವೇ ಭಾಗ್ಯ ಎನ್ನುವಂತೆ ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಡೆಂಗ್ಯೂ ಜ್ವರ ಬರದಂತೆ ನೋಡಿಕೊಳ್ಳಲು ನಾವೆಲ್ಲರೂ ಮುಂಜಾಗ್ರತೆವಹಿಸೋಣ.

ಲೇಖನ :- ಡಾ. ಸುರೇಶ ಜಿ.
ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ.