Postgraduate admissions deadline extended until September 10
ಕೊಪ್ಪಳ ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ): ಕೊಪ್ಪಳ ವಿಶ್ವವಿದ್ಯಾಲಯದ 2025-26ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ ಪ್ರಥಮ ವರ್ಷದ ಪ್ರವೇಶಾತಿ ಅರ್ಜಿ ದಿನಾಂಕ ಸೆಪ್ಟೆಂಬರ್ 10ರ ವರೆಗೆ ವಿಸ್ತರಿಸಲಾಗಿದೆ.
ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ ಮತ್ತು ಗಂಗಾವತಿ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಸಂಯೋಜಿತ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನೇತರ ಮಹಾವಿದ್ಯಾಲಯಗಳಲ್ಲಿನ ಪ್ರಥಮ ವರ್ಷದ ಎಂ.ಎ. ಕನ್ನಡ, ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪ್ರದರ್ಶನ ಕಲೆ, ಮಹಿಳಾ ಅಧ್ಯಯನ ವಿಭಾಗ, ಪತ್ರಿಕೋದ್ಯಮ, ಎಂ.ಕಾಂ., ಎಂ.ಎಸ್ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸುಗಳಿಗೆ UUMS https://uucms.Karnataka.gov.in/ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದ್ದ ದಿನಾಂಕವನ್ನು ಮತ್ತೆ ಸೆಪ್ಟೆಂಬರ್ 10ರ ವರೆಗೆ ವಿಸ್ತರಿಸಲಾಗಿದ್ದು, ಅರ್ಜಿ ಶುಲ್ಕಗಳ ವಿವರ ಹಾಗೂ ಅರ್ಜಿಗಳನ್ನು ಸಲ್ಲಿಸಲು ಪಾಲಿಸಬೇಕಾದ ಮಾನದಂಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿಶ್ವವಿದ್ಯಾಲಯದ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಪ್ರವೇಶಾತಿ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಕೊಪ್ಪಳ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ತಳಕಲ್ ಮುಖ್ಯ ಆವರಣ 4ನೇ ಮಹಡಿ, ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ ಮತ್ತು ಗಂಗಾವತಿ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.