HIV AIDS: Awareness through bike rally

ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): ಹೆಚ್.ಐ.ವಿ. ಏಡ್ಸ್ ಕುರಿತು ಬೈಕ್ ರ‍್ಯಾಲಿ ಮೂಲಕ ಕೊಪ್ಪಳದಲ್ಲಿ ಶನಿವಾರದಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಮಟ್ಟದ ತೀವ್ರಗೊಂಡ ಐಇಸಿ ಅಭಿಯಾನ (Intensified IEC Campaign) ಅಂಗವಾಗಿ “ಬೈಕ್ ರ‍್ಯಾಲಿ” ಕಾರ್ಯಕಮವನ್ನು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಬೈಕ್ ರ‍್ಯಾಲಿಗೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎ. ಶಶಿಧರ ಅವರು ಜಿಲ್ಲಾಡಳಿತ ಭವನದ ಆಚರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಕೆ.ಎಸ್. ಆಸ್ಪತ್ರೆಯ ನಿರ್ವಾಹಕ ಪ್ರದೀಪ್ ಸೋಮಲಾಪುರ, ಸನಾತನ ಹಿಂದೂ ಮಹಾಮಂಡಳಿ ಕೊಪ್ಪಳದ ಗೌರವ ಅಧ್ಯಕ್ಷರಾದ ಶೇಖರಪ್ಪ ಮುತ್ತೇನವರ್ ಸೇರಿದಂತೆ ವಿವಿಧ ಸಂಸ್ಥೆಯವರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಬೈಕ್ ರ‍್ಯಾಲಿಯು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪ್ರಾರಂಭಗೊಂಡು ಗಂಜ್ ಸರ್ಕಲ್, ಅಶೋಕ ಸರ್ಕಲ್, ಬಸ್‌ಸ್ಟ್ಯಾಂಡ್ ಮಾರ್ಗವಾಗಿ ಲೇಬರ್ ಸರ್ಕಲ್ ಮುಖಾಂತರ ಗಡಿಯಾರ ಕಂಬ, ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಿಂದ ಪುನಃ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ನಡೆಯಿತು.
ಈ ಬೈಕ್ ರ‍್ಯಾಲಿಯಲ್ಲಿ 120 ಕ್ಕೂ ಹೆಚ್ಚು ಬೈಕ್ ಸವಾರರು ಬೈಕ್‌ಗಳೊಂದಿಗೆ ಹಾಜರಾಗಿದ್ದರು. ಡ್ಯಾಪ್ಕ್ಯೂ, ಐಸಿಟಿಸಿ, ಎ.ಆರ್.ಟಿ., ಡಿ.ಎಸ್.ಆರ್.ಸಿ. ಎನ್.ಟಿ.ಇ.ಪಿ. ಸಿಬ್ಬಂದಿಗಳು, ಕೊಪ್ಪಳದ ಸ್ನೇಹಾ ಮಹಿಳಾ ಸಂಘ (ಎಫ್.ಎಸ್.ಡಬ್ಲ್ಯೂ ಮತ್ತು ಎಂ.ಎಸ್.ಎಂ.ಟಿಐ), ಚೈತನ್ಯ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಂರಕ್ಷ ಸಂಸ್ಥೆ, ಇನ್ವಾಲ್ವ್ ಲರ್ನಿಂಗ್ ಸಲ್ಯೂಷನ್ ಫೌಂಡೇಷನ್ ಮತ್ತು ಸನಾತನ ಹಿಂದೂ ಮಹಾಮಂಡಳಿಯ ಯುವಕರು, ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.