Exams for Group C posts of various departments on Sept. 2 and 3: Prohibitory order imposed
ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಸೆಪ್ಟೆಂಬರ್ 2 ಮತ್ತು 3 ರಂದು ನಡೆಯುವ ರಾಜ್ಯದ ವಿವಿಧ ಇಲಾಖೆಗಳ ಗ್ರೂಪ್ ಸಿ (ಕಲ್ಯಾಣ ಕರ್ನಾಟಕ) ಹುದ್ದೆಗಳ ಪರೀಕ್ಷೆಯ ನಿಮಿತ್ತ ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ ಆವರಣವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಡಾ.ಸುರೇಶ ಬಿ. ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ “ಗ್ರೂಪ್ ಸಿ” (ಕಲ್ಯಾಣ ಕರ್ನಾಟಕ) ಹುದ್ದೆಗಳ ಪರೀಕ್ಷೆಯು ಸೆ. 2ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾಗೂ ಸೆ. 3ಕ್ಕೆ ಬೆಳಿಗ್ಗೆ 10 ಗಂಟೆಯಿಂದ 11.30 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಗಳನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಅಂತರದ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪರೀಕ್ಷೆ ಕೇಂದ್ರಗಳ ವಿವರ: ಕೊಪ್ಪಳದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಟಣಕನಕಲ್ ಆದರ್ಶ ವಿದ್ಯಾಲಯ(ಆರ್.ಎಮ್.ಎಸ್.ಎ) ಈ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಸೆ. 2 ರಂದು ಪರೀಕ್ಷೆಗಳು ನಡೆಯಲಿವೆ. ಕೊಪ್ಪಳ ತಾಲೂಕ ಪಂಚಾಯತ್ ಎದುರುಗಡೆ ಇರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜ್, ಅಶೋಕ ಸರ್ಕಲ್ ಹತ್ತಿರದ ಬಿ.ಇ.ಓ ಆಫಿಸ್ ಹಿಂದುಗಡೆ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಅಶೋಕ ಸರ್ಕಲ್ ಹತ್ತಿರದ ಜವಾಹರ್ ರಸ್ತೆಯಲ್ಲಿರುವ ಬಾಲಕರ ಜಿ.ಪಿ.ಹೆಚ್.ಸಿ, ಈ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸೆ. 3 ರಂದು ಪರೀಕ್ಷೆಗಳು ಜರುಗಲಿವೆ.
ನಿಷೇಧಾಜ್ಞೆ ಜಾರಿಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ. ಮೊಬೈಲ್, ಪೇಜರ್, ಜರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಹಾಗೂ ನಿಯೋಜಿತ ಶಿಕ್ಷಕರನ್ನು ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.