Take strict action to prevent smuggling of ration rice: Reddy Srinivas

ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಹಾಗೂ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ನಡೆಯದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವು ಪಡಿತರ ಧಾನ್ಯಗಳನ್ನು ಮಾರಾಟಕ್ಕೆ ಅವಕಾಶವಿರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಇ-ಕೆವೈಸಿ ಮಾಡಿಸದ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸುವುದಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕವೆ ಸಾರ್ವಜನಿಕರಿಗೆ ತಿಳಿ ಹೇಳಬೇಕು. ಪಡಿತರ ವಿತರಿಸುವ ಸಮಯವನ್ನು ಸರ್ಕಾರವು ಹೆಚ್ಚಿಸಿದ್ದು, ಅದರಂತೆ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುವಂತೆ ಸೂಚಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು. ಆಹಾರ ಸಾಮಾಗ್ರಿಗಳ ವಿತರಣೆಗೂ ಮುನ್ನ ಅದರ ಗುಣಮಟ್ಟವನ್ನು ಪರಿಶೀಲಿಸಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗದಿರುವ ಅರ್ಜಿಗಳನ್ನು ಪರಿಶೀಲಿಸಿ, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಬಿಲ್ ಬಾಕಿ ವಸೂಲಾತಿ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸಾಮಾಜಿಕ ಕಾರ್ಯಕ್ರಮವಾಗಿದೆ. ಜನ ಸಾಮಾನ್ಯರ ಏಳ್ಗೆಗಾಗಿ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿದಿ, ಈ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದ್ದು, ಮುಂದೆಯೂ ಅದೇ ರೀತಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಐದು ಗ್ಯಾರಂಟಿ ಯೋಜನೆಗಳ ಪ್ರಗತಿ: ಗೃಹಲಕ್ಷ್ಮೀ ಯೋಜನೆಯಡಿ ಕೊಪ್ಪಳ ಜಿಲ್ಲೆಯ 3,17,804 ಫಲಾನುಭವಿಗಳಿಗೆ ಜೂನ್-2025ರ ಅಂತ್ಯದವರೆಗೆ ಡಿಬಿಟಿ ಮೂಲಕ 1277,14,34,000 ರೂ.ಗಳನ್ನು ಪಾವತಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ಜುಲೈ-2025ರ ಅಂತ್ಯದವರೆಗೆ 2,78,151 ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದ್ದು, ಇದಕ್ಕಾಗಿ 295.8 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 37,204 ಅಂತ್ಯೋದಯ (ಎಎವೈ), 2,91,065 ಪಿ.ಹೆಚ್.ಹೆಚ್ (ಬಿಪಿಎಲ್) ಕಾರ್ಡ್ಗಳಿದ್ದು, ಅನ್ನಭಾಗ್ಯ ಯೋಜನೆಯಡಿ ಹಣದ ಬದಲಾಗಿ 2025ರ ಫೆಬ್ರವರಿ ಮಾಹೆಯಿಂದ ಇಲ್ಲಿಯವರೆಗೂ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಎಎವೈ ಮತ್ತು ಪಿ.ಹೆಚ್.ಹೆಚ್ (ಎನ್.ಎಫ್.ಎಸ್.ಎ ಸೆಂಟ್ರಲ್) ಕಾರ್ಡುಗಳಿಗೆ ಈ ಬಾರಿಯೂ ಜೋಳವನ್ನು ಸಹ ವಿತರಣೆ ಮಾಲಾಗುತ್ತಿದೆ.
ಶಕ್ತಿ ಯೋಜನೆಯಡಿ 2025ರ ಜುಲೈ ಮಾಹೆಯಲ್ಲಿ 32,25,842 ಮಹಿಳೆಯರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಈ ಯೋಜನೆಯಡಿ ಇಲ್ಲಿಯವರೆಗೆ 303,45,72,493 ರೂ.ಗಳ ಖರ್ಚಾಗಿದೆ.
ಯುವನಿಧಿ ಯೋಜನೆಯಡಿ ಜೂನ್-2025ರಲ್ಲಿ 6,813 ಫಲಾನುಭವಿಗಳು ನೋಂದಣಿಯಾಗಿದ್ದು, ಜೂನ್ ಅಂತ್ಯದವರೆಗೆ ಒಟ್ಟು ಮೊತ್ತ ರೂ. 17.20 ಕೋಟಿಗಳನ್ನು ಪಾವತಿಸಲಾಗಿರುತ್ತದೆ ಎಂದು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್.ಜಿ., ನಾಗರಾಜ ಅರಳಿ, ಗ್ಯಾರಂಟಿ ಯೋಜನೆಗಳ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.