Make necessary preparations for Vishwakarma Jayanti: Additional District Magistrate Sidrameshwar

ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): ಸೆಪ್ಟೆಂಬರ್ 18ರಂದು ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಜಯಂತಿಯನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶುಕ್ರವಾರ ಉಪವಿಭಾಗಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಕರೆದ ವಿಶ್ವಕರ್ಮ ಜಯಂತಿ ಆಚರಣೆ ಕುರಿತಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಡೆಯುವ ಹಿನ್ನೆಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಸೆ. 17ರ ಬದಲಿಗೆ ಸೆ. 18ಕ್ಕೆ ಆಚರಣೆ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳು, ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ತಾಲ್ಲೂಕಾ ಕಛೇರಿ, ಗ್ರಾಮ ಪಂಚಾಯತಗಳಲ್ಲಿ, ಶಾಲಾ, ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ವಿಶ್ವಕರ್ಮ ಜಯಂತಿಯನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕಾಗಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗಾಗಿ ಸಂಬಂಧಿಸಿದ ಇಲಾಖೆಗಳು ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಬೇಕು. ಸೆ. 18ರ ಬೆಳಿಗ್ಗೆ 9 ಗಂಟೆಗೆ ನಗರದ ಸಿರಸಪ್ಪಯ್ಯನ ಮಠದ ಆವರಣದಿಂದ ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ಮತ್ತು ಬೆಳಿಗ್ಗೆ 10.30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪೂಜೆ, ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಸಾಹಿತ್ಯ ಭವನದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆಯಿಂದ ಕಲ್ಪಿಸಬೇಕು. ವೇದಿಕೆ ಅಲಂಕಾರ, ಗಣ್ಯರಿಗೆ ಪುಸ್ತಕ ವಿತರಣೆ, ಪೂಜೆಗೆ ಹೂವು, ಹಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒದಗಿಸಬೇಕು. ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ, ಗಣ್ಯರ ಆಹ್ವಾನಕ್ಕೆ ತಹಶೀಲ್ದಾರರು ಕ್ರಮ ವಹಿಸಬೇಕು. ಉಳಿದಂತೆ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಜಯಂತಿ ಆಚರಣೆಗೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಬೇಕು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳ ಸಹಕಾರವೂ ಅಗತ್ಯವಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸಿ ವ್ಯವಸ್ಥಿತ ಜಯಂತಿ ಆಚರಣೆಗೆ ಎಲ್ಲಾ ಸಮಾಜದವರು ಅನುಕೂಲ ಮಾಡಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪುಷ್ಪಲತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶ ಕುಮಾರ್ ಕಂಸಾಳ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ನಾಮನಿದೇಶಿತ ಸದಸ್ಯರಾದ ದೇವೇಂದ್ರಪ್ಪ ಬಡಿಗೇರ್ ರಾಜೂರು, ಸಮಾಜದ ಮುಖಂಡರಾದ ಈಶಪ್ಪ ಬಡಿಗೇರ್ ನರಸಾಪುರ, ರುದ್ರಪ್ಪ ಬಡಿಗೇರ್, ಗುರುಮೂರ್ತಿ ಬಡಿಗೇರ್, ಶಂಕ್ರಪ್ಪ ತಿಮ್ಮರಗುದ್ದಿ, ವೀರೇಶ ಕಾರಟಗಿ, ದೇವಪ್ಪ ಬಡಿಗೇರ್ ಹಲಗೇರಿ, ಪ್ರಭಾಕರ ಬಡಿಗೇರ್ ಗುಳದಳ್ಳಿ, ಕಾಳಮ್ಮ ಪತ್ತಾರ್, ಪ್ರಕಾಶ, ಬ್ರಹ್ಮನಾಂದ ಬಡಿಗೇರ್ ಸೇರಿದಂತೆ ಇನ್ನೂ ಪ್ರಮುಖರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.